
ಶಿರಸ್ತೇದಾರ್ ಸ್ವಾಮಿ ಪಿ.
ಕಾರಿನಿಂದ ಕೆಳಗಿಳಿಸಿ ದಲಿತ ಅಧಿಕಾರಿಗೆ ಅಪಮಾನ ಮಾಡಿದ ಎ.ಸಿ ; ಪ್ರಭಾರ ಹುದ್ದೆ ರದ್ದುಗೊಳಿಸಿದ ಡಿ.ಸಿ
ಆಡಳಿತ ವರ್ಗದಲ್ಲಿ ಹಿರಿಯ ಅಧಿಕಾರಿಗಳು ಹೇಳಿದ ಹಾಗೆ ಕೇಳಬೇಕೆಂಬ ನಿಯಮ ಒಪ್ಪುವಂತದ್ದೇ, ಆದರೆ ಸಕಲೇಶಪುರ ಉಪವಿಭಾಗಾಧಿಕಾರಿ ಅವರು ಅರಕಲಗೂಡು ತಹಶೀಲ್ದಾರ್ ಗ್ರೇಡ್-2 (ಪ್ರಭಾರ) ಅಧಿಕಾರಿಗೆ ಅವಮಾನ ಮಾಡಿ ನಿಂದಿಸಿದ್ದು, ಕ್ಷಮೆಯೂ ಕೇಳದೇ ಪ್ರಭಾರ ಹುದ್ದೆಯನ್ನೂ ಕಿತ್ತುಕೊಂಡಿದ್ದಾರೆ.
ಉಪವಿಭಾಗಾಧಿಕಾರಿಯಿಂದ ಅಪಮಾನಕ್ಕೊಳಗಾಗಿ ಪ್ರತಿಭಟನೆ ನಡೆಸಿದ ದಲಿತ ಅಧಿಕಾರಿಯನ್ನೇ ಪ್ರಭಾರ ಹುದ್ದೆಯಿಂದ ಕೆಳಗಿಳಿಸಿ ಜಿಲ್ಲಾಧಿಕಾರಿ ಸಹ ದಲಿತ ವಿರೋಧಿ ಧೋರಣೆ ಪ್ರದರ್ಶಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಆಡಳಿತದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕೇಳಬೇಕೆಂಬ ನಿಯಮ ಒಪ್ಪುವಂತದ್ದೇ, ಆದರೆ ಸಕಲೇಶಪುರ ಉಪವಿಭಾಗಾಧಿಕಾರಿಯು ಅರಕಲಗೂಡಿನ ಗ್ರೇಡ್-2 ತಹಶೀಲ್ದಾರ್ (ಪ್ರಭಾರ) ಅವರನ್ನು ನಡು ರಸ್ತೆಯಲ್ಲಿ ಕಾರಿನಿಂದ ಕೆಳಗಿಳಿಸಿ ನಿಂದಿಸಿರುವುದು ತಪ್ಪಲ್ಲವೇ ಎಂದು ಮಾತುಗಳು ಕೇಳಿ ಬರುತ್ತಿವೆ. ತಹಶೀಲ್ದಾರ್ ಅವರ ಕಾರಿನಲ್ಲಿ ದಲಿತ ಅಧಿಕಾರಿ ಸಂಚರಿಸಿದರೆಂಬುದೇ ನಿಂದನೆ ಕಾರಣ ಎಂದು ದೂರಲಾಗಿದೆ.
ಏನಿದು ಘಟನೆ ?
ಸಮೀಕ್ಷೆ ಕಾರ್ಯ ನಿಮಿತ್ತ ಸಕಲೇಶಪುರ ಉಪವಿಭಾಗಾಧಿಕಾರಿ ರಾಜೇಶ್ ಅವರು, ಅರಕಲಗೂಡು ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗ್ರೇಡ್-2 (ಪ್ರಭಾರ) ಆಗಿದ್ದ ಸ್ವಾಮಿ ಸಿ. ವಿವಿಧ ಸ್ಥಳಗಳಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಇಬ್ಬರೂ ಒಂದೇ ಕಾರಿನಲ್ಲಿ ತೆರಳಿದ್ದರು. ತಹಶೀಲ್ದಾರ್ ಕಾರಿನ ಮುಂಬದಿ ಸೀಟಿನಲ್ಲಿ ಗ್ರೇಡ್-2 ತಹಶೀಲ್ದಾರ್ ಕುಳಿತುಕೊಂಡಿದ್ದರು. ಇದನ್ನು ಗಮನಿಸಿದ ಉಪವಿಭಾಗಾಧಿಕಾರಿ ರಾಜೇಶ್ ಕೂಡಲೇ ವಾಹನ ನಿಲ್ಲಿಸಿ, ಗ್ರೇಡ್-2 ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ವಾಹನದಲ್ಲಿ ತಹಶೀಲ್ದಾರ್ ಸೀಟಿನಲ್ಲಿ ಕುಳಿತುಕೊಳ್ಳಲು ಯಾರು ನಿನಗೆ ಅನುಮತಿ ನೀಡಿದ್ದು ಎಂದು ಪ್ರಶ್ನಿಸಿ, ಸ್ವಾಮಿ ಸಿ. ಅವರನ್ನು ಕಾರಿನಿಂದ ಕೆಳಗಿಳಿಸಿ ನಿಂದಿಸಿದ್ದಾರೆ.
ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ್ದ ಅಧಿಕಾರಿ
ಸಕಲೇಶಪುರದ ಉಪವಿಭಾಗಾಧಿಕಾರಿ ರಾಜೇಶ್ ಅವರು ನನ್ನನ್ನು ತಹಶೀಲ್ದಾರ್ ಕಾರಿನಿಂದ ಇಳಿಸಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಎದುರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗ್ರೇಡ್-2 ತಹಶೀಲ್ದಾರ್ (ಪ್ರಭಾರ) ಸ್ವಾಮಿ ಸಿ. ಅವರು ಅರಕಲಗೂಡು ತಹಶೀಲ್ದಾರ್ ಕಚೇರಿ ಎದುರು ಮೂರು ದಿನ ಅಂಬೇಡ್ಕರ್ ಪೋಟೋ ಹಿಡಿದು ಅಹೋರಾತ್ರಿ ಧರಣಿ ನಡೆಸಿದ್ದರು. ದಲಿತ ಸಂಘಟನೆಗಳು ಕೂಡ ಅಧಿಕಾರಿಯ ಪ್ರತಿಭಟನೆ ಬೆಂಬಲಿಸಿದ್ದವು.
ಪ್ರಭಾರ ಹುದ್ದೆ ರದ್ದುಪಡಿಸಿದ ಜಿಲ್ಲಾಧಿಕಾರಿ
ಪ್ರತಿಭಟನಾನಿರತ ಅಧಿಕಾರಿ ಹಾಗೂ ದಲಿತ ಸಂಘಟನೆಗಳ ಸಮಸ್ಯೆ ಬಗೆಹರಿಸಲು ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆಡಳಿತ ವರ್ಗದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕಿರಿಯ ಅಧಿಕಾರಿಗಳು ಕೇಳಬೇಕು ಎಂದು ತಿಳಿಸಿ, ಶಿರಸ್ತೇದಾರ್ ಸ್ವಾಮಿ ಸಿ. ಗೆ ನೀಡಿದ್ದ ಅರಕಲಗೂಡು ತಹಶೀಲ್ದಾರ್ ಗ್ರೇಡ್ -2 (ಪ್ರಭಾರ) ಹುದ್ದೆಯನ್ನು ರದ್ದುಗೊಳಿಸಿ ಶಿರಸ್ತೇದಾರ್ ಹುದ್ದೆಯಲ್ಲಿಯೇ ಮುಂದುವರಿಸಿ ಆದೇಶ ಮಾಡಿದ್ದಾರೆ.
ಸ್ವಯಂ ನಿವೃತ್ತಿಗೆ ಮುಂದಾದ ಅಧಿಕಾರಿ
"ಹಿರಿಯ ಅಧಿಕಾರಿ ತನ್ನನ್ನು ಸಾರ್ವಜನಿಕರು ಹಾಗೂ ಸಿಬ್ಬಂದಿ ಎದುರು ಅವಮಾನ ಮಾಡಿದ್ದು ಮಾನಸಿಕವಾಗಿ ನನ್ನನ್ನು ಘಾಸಿಗೊಳಿಸಿದೆ. ದಲಿತನಾಗಿ ಹುಟ್ಟಿದ್ದೇ ತಪ್ಪಾ ಎಂಬ ಪ್ರಶ್ನೆ ಮೂಡುತ್ತಿದ್ದೆ. ಕುಟುಂಬದೊಂದಿಗೆ ಚರ್ಚಿಸಿ ಸ್ವಯಂ ನಿವೃತ್ತಿ ತೆಗೆದೊಕೊಳ್ಳುವ ಆಲೋಚನೆ ಮಾಡಿದ್ದೇನೆ" ಎಂದು ಶಿರಸ್ತೇದಾರ್ ಸ್ವಾಮಿ ಸಿ. ಹೇಳಿದ್ದಾರೆ.

