
ಬೆಂಗಳೂರಿನ ಸೀಗೇಹಳ್ಳಿ ಶಾಲೆಯಲ್ಲಿ ಆಹವಾನ್ ಫೌಂಡೇಶನ್‌ನಿಂದ ಮಳೆನೀರು ಸಂಗ್ರಹಣಾ ಘಟಕ ಉದ್ಘಾಟನೆ
ಸೀಗೇಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮಳೆನೀರು ಕೊಯ್ಲು ಮೂಲಕ ಜಲ ಸಂರಕ್ಷಣೆಯ ಪಾಠ
ಬೆಂಗಳೂರಿನ ಸೀಗೇಹಳ್ಳಿ ಪ್ರಾಥಮಿಕ ಶಾಲೆಯಲ್ಲಿ 307ನೇ ಮಳೆನೀರು ಸಂಗ್ರಹಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. 50,000 ಲೀಟರ್ ಸಾಮರ್ಥ್ಯದ ಈ ಯೋಜನೆಯು ಶಾಲೆಯ ನೀರಿನ ಅಭಾವ ನಿವಾರಿಸುತ್ತದೆ.
ಸರ್ಕಾರಿ ಶಾಲೆಯ ಮಕ್ಕಳು ಇಷ್ಟು ದಿನ ನೀರು ಉಳಿಸಿ ಎಂದು ಪಾಠದಲ್ಲಿ ಮಾತ್ರ ಕಲಿಯುತ್ತಿದ್ದರು. ಆದರೆ ಇಂದು ಕಣ್ಣೆದುರೇ ಆ ಪಾಠಕ್ಕೆ ಜೀವ ಬಂದಂತಿದೆ. ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆಯ ಬಗ್ಗೆ ಚರ್ಚೆಯಾಗುವುದು ಮಾಮೂಲಿ.
ಶಾಲೆಯಲ್ಲೂ ಕೈ ತೊಳೆಯಲು ಅಥವಾ ಶೌಚಾಲಯಕ್ಕೆ ನೀರಿನ ಅಭಾವವಾದಾಗ ಮಕ್ಕಳಿಗೆ ನೀರಿನ ಬಳಕೆಯ ಬಗ್ಗೆ ಅರಿವಾಗುತ್ತಿತ್ತು.
ಸಿಲಿಕಾನ್ ಸಿಟಿಯಲ್ಲಿದೆ ಇದೊಂದು ಸರ್ಕಾರಿ ಶಾಲೆ. ಕೆ.ಆರ್. ಪುರಂ ವ್ಯಾಪ್ತಿಯ ಸೀಗೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ! ಈ ಶಾಲೆ, ಕೇವಲ ಪುಸ್ತಕದ ಪಾಠಕ್ಕೆ ಸೀಮಿತವಾಗಿರದೆ, ತನ್ನ ಆವರಣದಲ್ಲಿ ಅತ್ಯಾಧುನಿಕ ಮಳೆನೀರು ಸಂಗ್ರಹಣಾ ಘಟಕವನ್ನು ಸ್ಥಾಪಿಸಿ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಆಕಾಶದಿಂದ ಬೀಳುವ ಮಳೆನೀರು ಕೇವಲ ಮಣ್ಣು ಸೇರಿ ವ್ಯರ್ಥವಾಗುವ ಬದಲು, ಅವು ಶಾಲೆಯ ದೊಡ್ಡ ಟ್ಯಾಂಕ್‌ಗಳನ್ನು ತುಂಬಿಸುತ್ತಿವೆ. ಮಳೆನೀರು ಕೊಯ್ಲು ಎಂಬ ವ್ಯವಸ್ಥೆಯುನ್ನು ಮಕ್ಕಳು ತಿಳಿದುಕೊಳ್ಳಬೇಕು ಎಂಬುದನ್ನು ಕೇವಲ ಪುಸ್ತಕದ ಪಾಠಗಳ ಮೂಲಕವಲ್ಲದೆ, ಪ್ರಾಯೋಗಿಕವಾಗಿ ಕಲಿಸಿಕೊಟ್ಟಿದೆ. ಜಲ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಶಾಲೆಯಲ್ಲಿ ಮಳೆನೀರು ಸಂಗ್ರಹಣಾ ವ್ಯವಸ್ಥೆವನ್ನು ನಿರ್ಮಾಣ ಮಾಡಲಾಗಿದೆ. ಇದು ಮಕ್ಕಳಲ್ಲಿ ಶಾಲೆಯ ಮೇಲ್ಛಾವಣಿ ಹಾಗೂ ಇತರ ಮಳೆನೀರು ಹರಿವು ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರನ್ನು ಶುದ್ಧೀಕರಿಸಿ ಸಂಗ್ರಹಣಾ ಟ್ಯಾಂಕ್‌ಗಳಿಗೆ ಹಾಗೂ ಭೂಗರ್ಭ ಜಲ ಪುನರ್‌ಭರ್ತಿಗೆ ಬಳಸುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ.
ಬೆಂಗಳೂರು ಕಳೆದ ಹಲವು ವರ್ಷಗಳಿಂದ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಶಾಲೆಗಳು ಇದರಿಂದ ಹೆಚ್ಚು ಪರಿಣಾಮಗೊಳ್ಳುತ್ತಿರುವ ಸಂಸ್ಥೆಗಳಾಗಿವೆ. ಈ ನಿಟ್ಟಿನಲ್ಲಿ ಕೇವಲ ಪುಸ್ತಕದ ಪಾಠಕ್ಕೆ ಸೀಮಿತವಾಗದ ಈ ಶಾಲೆ, ಇಂದು ಇಡೀ ನಗರಕ್ಕೆ ಸುಸ್ಥಿರ ನೀರಿನ ನಿರ್ವಹಣೆಯ ಬಗ್ಗೆ ಮಕ್ಕಳಲ್ಲಿ ಚಿಕ್ಕಂದಿನಲ್ಲೇ ಆಸಕ್ತಿ ಹಾಗೂ ಅರಿವು ಮೂಡಿಸಲು ಮುಂದಾಗಿದೆ. ಮಳೆನೀರು ಉಳಿಸುವ ಮಹತ್ಕಾರ್ಯ ನಗರದ ಕಡುಗೋಡಿ ಸೀಗೆಹಳ್ಳಿ ರಸ್ತೆಯಲ್ಲಿರುವ ಈ ಶಾಲೆಯಲ್ಲಿ ನೀರಿನ ಕೊರತೆ ನಿವಾರಿಸಲು 'ಆಹವಾನ್ ಫೌಂಡೇಶನ್' ಮತ್ತು 'ಬಿಎಚ್‌ಎನ್ ಟೆಕ್ನಾಲಜೀಸ್' ಸಹಯೋಗದೊಂದಿಗೆ ಇಲ್ಲಿ ಅತ್ಯಾಧುನಿಕ ಮಳೆನೀರು ಸಂಗ್ರಹಣಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಇದು ವಾರ್ಷಿಕವಾಗಿ ಸುಮಾರು 40,000 ದಿಂದ 50,000 ಲೀಟರ್ ಮಳೆನೀರನ್ನು ಸಂಗ್ರಹಿಸುವ ಬೃಹತ್ ಸಾಮರ್ಥ್ಯ ಹೊಂದಿದೆ. ಶಾಲೆಯ ಮೇಲ್ಛಾವಣಿಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಈಗ ಶೋಧನಾ ಘಟಕಗಳ ಮೂಲಕ ಶುದ್ಧೀಕರಿಸಿ, ಮರುಬಳಕೆಗೆ ಸಿದ್ಧಪಡಿಸಲಾಗುತ್ತಿದೆ. ಹೊಸಾಗಿ ಸ್ಥಾಪಿಸಲಾದ ಈ ವ್ಯವಸ್ಥೆಯು ಸುಮಾರು 40,000 ರಿಂದ 50,000 ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅತ್ಯಾಧುನಿಕ ಶೋಧನಾ ಘಟಕಗಳು, ರೀಚಾರ್ಜ್ ಗುಂಡಿಗಳು ಹಾಗೂ ಅಗತ್ಯ ಬೆಂಬಲ ಮೂಲಸೌಕರ್ಯಗಳಿಂದ ಸಜ್ಜುಗೊಂಡಿದೆ. ಶಾಲೆಯ ಮೇಲ್ಚಾವಣಿ ಹಾಗೂ ಇತರ ಮಳೆನೀರು ಹರಿವು ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರನ್ನು ಶುದ್ಧೀಕರಿಸಿ ಸಂಗ್ರಹಣಾ ಟ್ಯಾಂಕ್‌ಗಳಿಗೆ ಹಾಗೂ ಭೂಗರ್ಭ ಜಲ ಪುನರ್‌ಭರ್ತಿಗೆ ಬಳಸುವಂತೆ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ದ್ವಿತೀಯ ವ್ಯವಸ್ಥೆ ತಕ್ಷಣದ ನೀರಿನ ಅಗತ್ಯಗಳನ್ನು ಪೂರೈಸುವ ಜೊತೆಗೆ ಭೂಗರ್ಭ ಜಲ ಮಟ್ಟ ಹೆಚ್ಚಿಸುವಲ್ಲಿಯೂ ಸಹಕಾರಿಯಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯ ಬಿತ್ತನೆ
ಈ ಯೋಜನೆಯು ಕೇವಲ ಮೂಲಸೌಕರ್ಯದ ಅಭಿವೃದ್ಧಿಯಲ್ಲ, ಬದಲಿಗೆ ಇದೊಂದು ಶೈಕ್ಷಣಿಕ ಅಭಿಯಾನವೂ ಹೌದು. ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ದೈನಂದಿನ ಅವಶ್ಯಕತೆಗಳಾದ ಶೌಚಾಲಯ ಮತ್ತು ಕೈ ತೊಳೆಯಲು ನಿರಂತರ ನೀರಿನ ಪೂರೈಕೆ ಸಿಗುವುದರ ಜೊತೆಗೆ, ಅವರಿಗೆ ಪ್ರಕೃತಿಯ ಮಹತ್ವವನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ. ನೀರಿನ ಮಿತಬಳಕೆ ಮತ್ತು ಮಳೆನೀರು ಕೊಯ್ಲು ತಂತ್ರಜ್ಞಾನದ ಬಗ್ಗೆ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಅರಿವು ಮೂಡಿಸುತ್ತಿರುವುದು ಈ ಶಾಲೆಯ ವಿಶೇಷ.
ಈ ಕುರಿತು ಮಾತನಾಡಿದ ಆಹವಾನ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಸಿಇಒ ಬ್ರಜ ಕಿಶೋರ್ ಪ್ರಧಾನ್ ಅವರು, "ಪ್ರತಿಯೊಬ್ಬ ಮಗುವಿಗೂ ಸುರಕ್ಷಿತ ನೀರಿನ ವ್ಯವಸ್ಥೆ ಸಿಗಬೇಕು. ನೀರಿನ ಅಭಾವದಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಬಾರದು ಎಂಬುದು ನಮ್ಮ ಆಶಯ. ಈ ಯೋಜನೆಯ ಮೂಲಕ ನಾವು ಕೇವಲ ಟ್ಯಾಂಕ್ ನಿರ್ಮಿಸುತ್ತಿಲ್ಲ, ಬದಲಿಗೆ ಮುಂದಿನ ಪೀಳಿಗೆಯನ್ನು ಪರಿಸರ ಪ್ರೇಮಿಗಳನ್ನಾಗಿ ರೂಪಿಸುತ್ತಿದ್ದೇವೆʼʼ ಎಂದು ಅವರು ತಿಳಿಸಿದರು.
ಬೆಂಗಳೂರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಇಂತಹ ಸಣ್ಣ ಪ್ರಯತ್ನಗಳು ದೊಡ್ಡ ಬದಲಾವಣೆ ತರಬಲ್ಲವು ಎಂಬುದಕ್ಕೆ ಸೀಗೇಹಳ್ಳಿಯ ಈ ಸರ್ಕಾರಿ ಶಾಲೆಯೇ ಸಾಕ್ಷಿ.

