ಬೆಂಗಳೂರಿನ ಚಂದಾಪುರದಲ್ಲಿ ಸೂಟ್‌ಕೇಸ್‌ ಒಳಗೆ ಯುವತಿಯ ಮೃತದೇಹ ಪತ್ತೆ!
x

ಬಾಲಕಿಯ ಶವ ಪತ್ತೆಯಾದ ಸೂಟ್‌ಕೇಸ್‌ 

ಬೆಂಗಳೂರಿನ ಚಂದಾಪುರದಲ್ಲಿ ಸೂಟ್‌ಕೇಸ್‌ ಒಳಗೆ ಯುವತಿಯ ಮೃತದೇಹ ಪತ್ತೆ!

ಯುವತಿಯನ್ನು ಬೇರೆ ಕಡೆ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಸೂಟ್​ಕೇಸ್​ನಲ್ಲಿ ತುಂಬಿ ರೈಲಿನಿಂದ ಎಸೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹಳೆಯ ಚಂದಾಪುರ ರೈಲ್ವೆ ಸೇತುವೆ ಬಳಿ ಪತ್ತೆಯಾದ ಸೂಟ್​​ಕೇಸ್​ನಲ್ಲಿ ಯುವತಿಯ ಶವ ಸಿಕ್ಕಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್​ಕೇಸ್​ ಪರಿಶೀಲಿಸಿದ್ದು, ಬೆಂಗಳೂರು ಗ್ರಾಮಾಂತರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

"ಯುವತಿಯನ್ನು ಬೇರೆ ಕಡೆ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಸೂಟ್​ಕೇಸ್​ನಲ್ಲಿ ತುಂಬಿ ರೈಲಿನಿಂದ ಎಸೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹದ ಬಳಿ ಯಾವುದೇ ಗುರುತಿನ ಚೀಟಿಯೂ ಸಿಕ್ಕಿಲ್ಲ. ಆಕೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ," ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ ಮಾತನಾಡಿ, "ನಾವು ತನಿಖೆ ಆರಂಭಿಸಿದ್ದೇವೆ. ಬಹುಶಃ ಚಲಿಸುತ್ತಿದ್ದ ರೈಲಿನಿಂದ ಈ ಸೂಟ್​ಕೇಸ್ ಎಸೆಯಲಾಗಿದೆ ಎಂದು ತೋರುತ್ತದೆ. ಇಂತಹ ಪ್ರಕರಣಗಳು ಸಾಮಾನ್ಯವಾಗಿ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತವೆ. ಆದರೆ, ಈ ಘಟನೆ ನಮ್ಮ ಪ್ರದೇಶದಲ್ಲಿ ನಡೆದಿರುವುದರಿಂದ ನಾವು ತನಿಖೆಯಲ್ಲಿ ಭಾಗಿಯಾಗಿದ್ದೇವೆ. ಸೂಟ್ಕೇಸ್‌ನಲ್ಲಿ ಕೇವಲ ಮೃತದೇಹ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿಲ್ಲ. ಹುಡುಗಿ ಕನಿಷ್ಠ 18 ವರ್ಷ ವಯಸ್ಸಿನವಳು ಆಗಿರಬಹುದು. ಆದರೆ, ಆಕೆಯ ಗುರುತು ಇನ್ನೂ ತಿಳಿದಿಲ್ಲ," ಎಂದು ಹೇಳಿಕೆ ನೀಡಿದ್ದಾರೆ.

ಹಿಂದಿನ ಪ್ರಕರಣ

ಕಳೆದ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಹುಳಿಮಾವಿನಲ್ಲಿ 32 ವರ್ಷದ ಗೌರಿ ಅನಿಲ್ ಸಾಂಬೇಕರ್ ಎಂಬ ಮಹಿಳೆಯ ಮೃತದೇಹ ಇದೇ ರೀತಿ ಸೂಟ್​ಕೇಸ್​​ನಲ್ಲಿ ಪತ್ತೆಯಾಗಿತ್ತು. ಮಹಾರಾಷ್ಟ್ರ ಮೂಲದ ರಾಕೇಶ್ ಮತ್ತು ಗೌರಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದವರು, ಜನವರಿಯಲ್ಲಿ ಬೆಂಗಳೂರಿಗೆ ಬಂದಿದ್ದರು. ನಂತರ ರಾಕೇಶ್‌ ಪತ್ನಿಯನ್ನು ಕೊಲೆ ಮಾಡಿ ಸೂಟ್​ಕೇಸ್​​ನಲ್ಲಿ ತುಂಬಿ ಎಸೆದು ಹೋಗಿದ್ದ. ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.

Read More
Next Story