
WOMEN'S DAY SPECIAL | ಬುಡಕಟ್ಟು ಜನರಿಗೆ ಆಶಾ ʼಅಕ್ಷರʼ ದೀವಿಗೆ: ಸಮುದಾಯ ಸೇವೆಗೆ ಬದುಕು ಮೀಸಲು
ಆದಿವಾಸಿ ಕುಟುಂಬಗಳಲ್ಲಿ ಹೆಣ್ಣು ಋತುಮತಿಯಾದ ಬಳಿಕ ಶಾಲೆ-ಕಾಲೇಜಿಗೆ ಹೋಗಬಾರದು ಎಂಬುದು ಅಲ್ಲಿನವರ ಅಲಿಖಿತ ನಿಯಮ. ಅದೇ ರೀತಿ ಆಶಾ ಅವರು ಆರಂಭದಲ್ಲಿಕ ಸಾಕಷ್ಟು ಅಡೆತಡೆ ಎದುರಾದರೂ ಅವೆಲ್ಲವನ್ನೂ ಮೀರಿ ಉನ್ನತ ಶಿಕ್ಷಣ ಪೂರೈಸಿದರು.
ಬನ್ನಿ... ಹಾಡೋಣ.. ಕುಣೀಯೋಣ.. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ... ಎನ್ನುತ್ತಾ ಸಾಂಸ್ಕೃತಿಕ ʼಸಂವಿಧಾನ ಪರಿಷೆʼ ಮಾಡಿದ ಈ ಯುವತಿಯ ಸಂವಿಧಾನದ ಮೂಲ ಆಶಯ ಅನುಸರಿಸುವ ಕಾಯಕ ಎಲ್ಲರೂ ಗೌರವಿಸುವಂತಹುದು!
ಈ ಯುವತಿಯಾರು ಗೊತ್ತೇ? ಬುಡಕಟ್ಟು ಸಮುದಾಯದ ಯುವಪೀಳಿಗೆಗೆ ಉನ್ನತ ಶಿಕ್ಷಣದ ʼಅಕ್ಷರ ದೀವಿಗೆʼ ಹಿಡಿದು ಮುನ್ನಡೆಸುತ್ತಿರುವ ಚಾಮರಾಜನಗರ ಜಿಲ್ಲೆ ಹೆಗ್ಗಡದೇವನಕೋಟೆಯ ಆಶಾ! ಅವರು ಬೆಂಕಿಯಲ್ಲಿ ಅರಳಿದ ಹೂವು. ಸಮಾಜದ ಭದ್ರ ಬುನಾದಿಯಾಗಿರುವ, ದ್ರಾವಿಡ ಸಂಸ್ಕೃತಿಯ ಪ್ರತೀಕವಾಗಿರುವ ಅನೇಕ ಬುಡಕಟ್ಟು ಜನಾಂಗಗಳಲ್ಲಿ ಒಂದಾದ, ಚಿಕ್ಕದಾದರೂ ಸಾಂಸ್ಕೃತಿಕವಾಗಿ ಗಟ್ಟಿಯಾಗಿರುವ ಯರವ ಎಂಬ ಬುಡಕಟ್ಟು ಜನಾಂಗದ ಕಾಡ ಕುಸುಮ!!
ಹೆಗ್ಗಡದೇವನ ಕೋಟೆ ಮತ್ತು ಸುತ್ತುಮುತ್ತಲಿನ ಕಾಡುಗಳಲ್ಲಿ ಕಾಣಸಿಗುವ ಬುಡಕಟ್ಟು ಜನಾಂಗ- ಈ ಎರವರು. ತಮ್ಮದೇ ಆದ 'ಯರವ' ಎಂಬ ಸಾಮಾಜಿಕ ಉಪಭಾಷೆಯನ್ನು ಮುಂದುವರಿಸಿಕೊಂಡು, ತಮ್ಮ ಭಾಷೆಯಲ್ಲಿಯೇ ಭಾರತದ ಮೂಲ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಈ ಜನಾಂಗ ಈಗಲೂ ಸಾಮಾಜಿಕವಾಗಿ ದುಃಖ ದುಮ್ಮಾನಗಳನ್ನು ಅನುಭವಿಸುತ್ತಲೇ ಇದೆ.
ಗುಡ್ಡಗಾಡಿನಲ್ಲಿ ವಾಸಿಸುವಂತಹ ಈ ಸಮುದಾಯ ಬಹಳ ಚಿಕ್ಕ ಸಮುದಾಯವಾಗಿದ್ದು, ಕೇವಲ 2000 ಜನಸಂಖ್ಯೆಯನ್ನು ಹೊಂದಿರುವ ಸಮುದಾಯವಾಗಿದೆ.
ಈ ಸಮುದಾಯದವರ ಜೊತೆ ಕಷ್ಟಗಳನ್ನೇ ಉಂಡು ಬೆಳೆದ ಆಶಾ ಇದೀಗ ನೂರಾರು ಬುಡಕಟ್ಟು ಯುವಜನರಿಗೆ ದಾರಿದೀಪವಾಗಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಆಶಾ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಹಂಚಿಕೊಂಡ ಅನುಭವಗಳನ್ನು ಇಲ್ಲಿ ದಾಖಲಿಸಲಾಗಿದೆ.
ʼನನ್ನ ಹೋರಾಟ ಸುಲಭವಾಗಿರಲಿಲ್ಲ. ನಾಗರಹೊಳೆ ಕಾಡಿಗೆ ಸಮೀಪವೇ ನಮ್ಮ ಮನೆ. ಕಾಡುಪ್ರಾಣಿಗಳ ಭಯ.. ಕಬಿನಿ ಜಲಾಶಯ ಯೋಜನೆಯ ಬಳಿಕ ಅಲ್ಲಿ ನೆಲೆಸಿದ್ದ ನಮ್ಮ ಸಮುದಾಯದ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಇದರಿಂದಾಗಿ ಕೃಷಿ ಪ್ರದೇಶಗಳನ್ನು ಯಾವುದೇ ಪರಿಹಾರವಿಲ್ಲದೆ ಬಿಟ್ಟುಕೊಟ್ಟು, ಬೇರೆ ಕಡೆ ನೆಲೆಸಬೇಕಾಯಿತು. ನಾಲ್ಕು ಜನ ಹೆಣ್ಣು ಮಕ್ಕಳೆಂಬ ಕಾರಣಕ್ಕೆ ನಮ್ಮ ತಂದೆಯವರು ನಾನು ಮೂರು ವರ್ಷವಳಿದ್ದಾಗಲೇ ಬಿಟ್ಟು ಹೋದರು. ಆ ಬಳಿಕ ತಾಯಿಯ ಹುಟ್ಟೂರಿಗೆ ಜಾಗ ಬದಲಿಸಿದೆವು. ಬಾಲ್ಯದಲ್ಲಿ ಅಜ್ಜಿ ಮನೆಯಲ್ಲೇ ಬೆಳೆದೆವು. ತೀವ್ರವಾಗಿ ಕಾಡುತ್ತಿದ್ದ ಬಡತನದಿಂದ ಒಪ್ಪತ್ತಿನ ಊಟಕ್ಕೂ ಕಷ್ಟ ಪಡಬೇಕಾಗಿತ್ತು. ಇದರಿಂದ ನಾವು ಚಿಕ್ಕ ವಯಸ್ಸಿನಲ್ಲಿಯೇ ಅಪೌಷ್ಟಿಕತೆ ಎದುರಿಸಬೇಕಾಯಿತು ಎಂದು ತಮ್ಮ ಕಷ್ಟದ ದಿನಗಳನ್ನು ಆಶಾ ಸ್ಮರಿಸಿಕೊಂಡರು.
ಶಿಕ್ಷಣವೇ ಶಕ್ತಿಯಾಯಿತು..
ಆದಿವಾಸಿ ಕುಟುಂಬಗಳಲ್ಲಿ ಹೆಣ್ಣು ಋತುಮತಿಯಾದ ಬಳಿಕ ಶಾಲೆ-ಕಾಲೇಜಿಗೆ ಹೋಗಬಾರದು ಎಂಬುದು ಅಲ್ಲಿನವರ ಅಲಿಖಿತ ನಿಯಮ. ಅದೇ ರೀತಿ ಆಶಾ ಅವರು ಆರಂಭದಲ್ಲಿಕ ಸಾಕಷ್ಟು ಅಡೆತಡೆ ಎದುರಾದರೂ ಅವೆಲ್ಲವನ್ನೂ ಮೀರಿ ಉನ್ನತ ಶಿಕ್ಷಣ ಪೂರೈಸಿದರು. ಈಗ ಬುಡಕಟ್ಟು ಸಮುದಾಯದ ಯುವಜನರ ಉನ್ನತ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆ ಆರಂಭಿಸಿ ಬುಡಕಟ್ಟು ಜನರಲ್ಲಿ ಶಿಕ್ಷಣದ ಜಾಗೃತಿ ಮೂಡಿಸುತ್ತಿದ್ದಾರೆ.
" ನಮ್ಮ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ತೀವ್ರ ವಿರೋಧ ಇತ್ತು. ಆದರೆ ನನ್ನ ತಾಯಿ, ಅಜ್ಜ ಮತ್ತು ಚಿಕ್ಕಪ್ಪ ನನ್ನ ಪರವಾಗಿ ನಿಲುವು ತೆಗೆದುಕೊಂಡು ನಾವು ಕಾಲೇಜಿಗೆ ಸೇರಲು ಬೆಂಬಲ ನೀಡಿದರು. ನನ್ನ ಸಹೋದರಿ ನಮ್ಮ ಸಮುದಾಯದಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ಮೊದಲ ಹುಡುಗಿಯಾದಳು. ಅದೇ ದಾರಿಯಲ್ಲಿ ನಾನೂ ನಡೆದೆ ಎಂದು ಸ್ಮರಿಸಿದರು.
ಪ್ರಾಥಮಿಕ ಶಾಲೆಯ ಬಳಿಕ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಮುಂದುವರಿಸಲು ನಾವು ಸಮಾಜ ಕಲ್ಯಾಣ ಹಾಸ್ಟೆಲ್‌ನಲ್ಲಿ ವಾಸಿಸಬೇಕಾಗಿತ್ತು, ಇಲ್ಲದಿದ್ದರೆ ಶಾಲೆಗೆ ತಲುಪಲು ಪ್ರತಿದಿನ 6 ಕಿ.ಮೀ ನಡೆದುಕೊಂಡು ಹೋಗಬೇಕಾಗಿತ್ತು. ಹೆಚ್ಚಿನ ಬುಡಕಟ್ಟು ಹುಡುಗಿಯರು ದೂರ ಮತ್ತು ದಾರಿಯಲ್ಲಿ ಸುರಕ್ಷತೆ ಇಲ್ಲದ ಕಾರಣ ಶಾಲೆ ಬಿಡುತ್ತಿದ್ದರು. ಇದರಿಂದ ಎಲ್ಲಾ ಹುಡುಗಿಯರು ಮತ್ತು ಹುಡುಗರು ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುವುದು ಅನಿವಾರ್ಯವಾಗಿತ್ತು.
ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ, ನನ್ನ ತಾಯಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದರು. ಅಲ್ಲಿ ಅವರು ಹುಡುಗಿಯರ ಶೋಷಣೆಯನ್ನು ನೋಡುತ್ತಿದ್ದರು. ಸರಿಯಾದ ಶಿಕ್ಷಣ ಪಡೆಯದಿದ್ದರೆ ನಾವು ಸಹ ಶೋಷಣೆಗೆ ಒಳಗಾಗುತ್ತೇವೆ ಎಂದು ಭಯಪಟ್ಟಿದ್ದರು. ಇದೆಲ್ಲದಕ್ಕೂ ಶಿಕ್ಷಣವೇ ಪರಿಹಾರ ಎಂದು ಅರಿತ ಅವರು, ಇಡೀ ಸಮುದಾಯದ ವಿರೋಧದ ನಡುವೆಯೂ ನಮ್ಮ ಉನ್ನತ ಶಿಕ್ಷಣಕ್ಕೆ ಆಸರೆ ಆದರು ಎಂದು ತಾಯಿಯ ತ್ಯಾಗವನ್ನು ನನೆದರು.
ತಾಯಿಯ ಆಸೆ ಪೂರೈಸುವುದೇ ಕನಸಾಗಿತ್ತು
ನನ್ನ ತಾಯಿ ಕೆಲಸಕ್ಕಾಗಿ ವಲಸೆ ಹೋದಾಗ, ಮನೆಯಲ್ಲಿ ನಾನು ಮತ್ತು ನನ್ನ ಕಿರಿಯ ಸಹೋದರ ಮಾತ್ರ ಇದ್ದೆವು. ನಾವು ಆಶ್ರಮ ಶಾಲೆಯಲ್ಲಿ ಓದುತ್ತಿದ್ದೆವು. ನಾನು ಚಿಕ್ಕಂದಿನಿಂದಲೂ ಓದಿ ಒಂದು ಸಾಧನೆ ಮಾಡಬೇಕು ಎಂಬ ಕನಸು ಇತ್ತು. ಜೊತೆಗೆ ನನ್ನ ತಾಯಿಯ ಆಸೆಯನ್ನೂ ಪೂರೈಸಬೇಕೆಂಬ ಹಠದಲ್ಲಿ ಉನ್ನತ ಶಿಕ್ಷಣ ಸಾಧ್ಯವಾಯಿತು ಎಂದು ಆಶಾ ಹೇಳುತ್ತಾರೆ.
ನಾನು 10 ನೇ ತರಗತಿಯಲ್ಲಿದ್ದಾಗ ನನ್ನ ತರಗತಿಯಲ್ಲಿದ್ದ 44 ಹುಡುಗಿಯರಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದವಳು ನಾನೊಬ್ಬಳೇ. ನನ್ನ ಬ್ಯಾಚ್‌ನಲ್ಲಿ ನನ್ನ ಹಳ್ಳಿಯ ಏಕೈಕ ಹುಡುಗಿ ನಾನೇ. ನನ್ನ ಶೈಕ್ಷಣಿಕ ದಾಖಲೆ ಮತ್ತು ಆರ್ಥಿಕ ಹಿನ್ನೆಲೆ ಗಮನಿಸಿದ ಮೈಸೂರಿನ ಯುವರಾಜ ಕಾಲೇಜಿನ ಉಪನ್ಯಾಸಕಿ ಸರ್ವಾಣಿ ಮೇಡಂ ಅವರಿಂದ ನನಗೆ 7 ವರ್ಷಗಳ ಬೆಂಬಲ ಸಿಕ್ಕಿತು. "ನಾನು ನಿಮಗಾಗಿ ಖರ್ಚು ಮಾಡಿದ ಹಣವನ್ನು ನನಗೆ ಹಿಂತಿರುಗಿಸಬೇಡಿ, ನಿಮ್ಮ ಸಮುದಾಯಕ್ಕಾಗಿ ಏನಾದರೂ ಮಾಡಿ" ಎಂದು ಸಲಹೆ ನೀಡಿದರು. ಅದು ಅವರ ಏಕೈಕ ಷರತ್ತಾಗಿತ್ತು. ನನ್ನ ಗುರುಗಳ ಆ ಮಾತನ್ನು ಎಂದಿಗೂ ಮರೆಯಲಿಲ್ಲ. ನನ್ನ ಹಳ್ಳಿಯಲ್ಲಿ ಎಲ್ಲರೂ ನನ್ನನ್ನು ಶಿಕ್ಷಕಿಯನ್ನಾಗಿ ನೋಡಲು ಬಯಸಿದರು. ಆದರೆ ನಾನು ಮಾತ್ರ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿದ್ದೆ. ಕಾಲೇಜಿನಲ್ಲಿ ಸರ್ಕಾರಿ ಸೀಟು ಸಿಕ್ಕರೆ ಮಾತ್ರ ನನ್ನ ತಾಯಿ ಅದನ್ನು ಭರಿಸಬಲ್ಲಳು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕೇವಲ 17 ಸರ್ಕಾರಿ ಸೀಟುಗಳಿದ್ದವು. ನಾನು ಪ್ರವೇಶ ಪರೀಕ್ಷೆ ಬರೆದೆ. ಎರಡನೇ ರ‍್ಯಾಂಕ್ ಬಂತು. ಬಳಿಕ ಸಾತಕೋತ್ತರ ಪದವಿ ಪೂರ್ಣಗೊಳಿಸಿದೆ. ಇದು ನನ್ನ ಸಮುದಾಯದ ಮೊದಲ ಸ್ನಾತಕೋತ್ತರ ಪದವೀಧರೆಯಾದೆ ಎಂದು ಭಾವುಕರಾದರು.
ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದೇನೆ. ಆರಂಭದಲ್ಲಿ ನಾನು ಮಾನವ ಸಂಪನ್ಮೂಲದಲ್ಲಿ ಕೆಲವು ಕಾರ್ಪೊರೇಟ್ ಕೆಲಸಗಳನ್ನು ಮಾಡಿದೆ. 2016-17ರಲ್ಲಿ ಕರ್ನಾಟಕ ಸರ್ಕಾರದ ಸ್ವತಂತ್ರ ಅಂಗವಾದ ಬುಡಕಟ್ಟು ಸಂಶೋಧನಾ ಸಂಸ್ಥೆ (TRI) PVTG ಮತ್ತು ಅರಣ್ಯ ಬುಡಕಟ್ಟು ಜನಾಂಗದವರಿಗೆ ಅಧ್ಯಯನ ಕೇಂದ್ರವಾಗಿ ಪ್ರಾರಂಭಿಸಲಾಯಿತು. ಸರ್ಕಾರವು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಹುಡುಕುತ್ತಿತ್ತು. ನಮ್ಮ ಸಮುದಾಯದಿಂದ ನಾನು ಮಾತ್ರ ಸರಿಹೊಂದುತ್ತೇನೆ ಎಂದು ತಿಳಿದು ನಮ್ಮ ಸಮುದಾಯದ ನಾಯಕರು ನನ್ನನ್ನು ಈ ಕಾರ್ಯಕ್ರಮಕ್ಕೆ ನಾಮನಿರ್ದೇಶನ ಮಾಡಿದರು. ಹೀಗಾಗಿ ನಾನು TRI ನಲ್ಲಿ ಕೆಲಸ ಮಾಡಿದೆ. 2 ಪ್ರಾಚೀನ ಬುಡಕಟ್ಟುಗಳು ಮತ್ತು 10 ಅರಣ್ಯ ಆಧಾರಿತ ಬುಡಕಟ್ಟುಗಳ ಮೇಲೆ ಕೇಂದ್ರೀಕರಿಸಿದೆ. ಅವರಿಗೆ ನಿರ್ದಿಷ್ಟ ಸರ್ಕಾರಿ ಯೋಜನೆಗಳ ಬಗ್ಗೆ ಅವರ ಅಗತ್ಯಗಳನ್ನು ಮೌಲ್ಯಮಾಪನ ಮಾಡುವ ಮತ್ತು ಈ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ಕೆಲಸ ಮಾಡಿದೆ. ಅಲ್ಲಿಯವರೆಗೆ, ಯಾವುದೇ ಸಂಶೋಧನಾ ಕಾರ್ಯಕರ್ತರು ತಮಗೆ ನಿಯೋಜಿಸಿದ ಹಳ್ಳಿಗಳಲ್ಲಿ ಕೆಲವು ದಿನಗಳವರೆಗೂ ಇರುತ್ತಿರಲಿಲ್ಲ. ಆದರೆ, ನಾನು ಮಾತ್ರ ಆ ಹಳ್ಳಿಗಳಲ್ಲಿಯೇ ವಾಸಿಸುತ್ತಿದ್ದೆ. ಬುಡಕಟ್ಟು ಜೀವನಶೈಲಿ ಮತ್ತು ಸ್ಥಳೀಯ ಜ್ಞಾನದ ಬಗ್ಗೆ ದತ್ತಾಂಶ ಸಂಗ್ರಹಿಸಿದೆ. ನಾನು ಸರ್ಕಾರಿ ಅಧಿಕಾರಿಗಳಿಗೆ ಒದಗಿಸಿದ ದತ್ತಾಂಶವು ಈಗಲೂ ಅವರಿಗೆ ಅಗತ್ಯವಿರುವ ಯೋಜನೆಗಳನ್ನು ಯೋಜಿಸಲು ಸಹಾಯ ಮಾಡುತ್ತಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಬುಡಕಟ್ಟು ಸಂಸ್ಕೃತಿಗೆ ಅಪಾಯ ಮನಗಂಡೆ
2017 ರಲ್ಲಿ ನಡೆದ ಸಂವಾದ್ ಎಂಬ ಅಖಿಲ ಭಾರತ ಬುಡಕಟ್ಟು ಸಮಾವೇಶದಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿಯವರೆಗೆ ನನ್ನ ಸಾಂಸ್ಕೃತಿಕ ಪರಂಪರೆ ಮತ್ತು ಗುರುತು ಅಪಾಯದಲ್ಲಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಆರ್ಥಿಕ ಭದ್ರತೆ ಮತ್ತು ಜೀವನೋಪಾಯದ ಮೇಲೆ ಮಾತ್ರ ಗಮನಹರಿಸಿದ್ದೆ. ಈ ಕೂಟದಲ್ಲಿ ನಾನು ಭೇಟಿಯಾದ ನೂರಾರು ಬುಡಕಟ್ಟು ಜನಾಂಗದವರು ಎದುರಿಸುತ್ತಿರುವ ಆಳವಾದ ಬಿಕ್ಕಟ್ಟಿನ ಬಗ್ಗೆ ನನಗೆ ಹೆಚ್ಚಿನ ತಿಳಿವಳಿಕೆ ಬಂತು. TRI ನಲ್ಲಿ ಕೆಲಸ ಮಾಡುವಾಗ ವಿವಿಧ ಹೋರಾಟಗಳನ್ನು ಎದುರಿಸಿದೆ. ಆದರೆ ಮೂರು ವರ್ಷಗಳ ಕಾಲ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ಆಗಲಿಲ್ಲ. ಅಂತಿಮವಾಗಿ ಆ ಕೆಲಸವನ್ನು ಕೊನೆಗೊಳಿಸಿದೆ ಎಂದರು.
ಬುಡಕಟ್ಟು ಸಮುದಾಯಗಳಿಗೆ ಪೂರ್ಣ ಹೃದಯದಿಂದ ಹಾಗೂ ಯಾವುದಾದರೂ ಒಂದು ಉಪಯುಕ್ತವಾದ ಕೆಲಸವನ್ನು ನಮ್ಮ ಸಮುದಾಯಕ್ಕೆ ಮಾಡಬೇಕು ಎಂದು ಯೋಜಿಸುತ್ತಿದ್ದೆ. ಈ ಸಂದರ್ಭದಲ್ಲಿ ಡಿಸಮ್ ಲೀಡರ್‌ಶಿಪ್ ಸ್ಕೂಲ್ (https://disomfoundation.org/) ಬಗ್ಗೆ ತಿಳಿದುಕೊಂಡೆ. 2021 ರಲ್ಲಿ ಡಿಸಮ್‌ನ ಮೊದಲ ಬ್ಯಾಚ್‌ಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದೆ. ಇಲ್ಲಿ ನಾನು ಪಡೆದ ಪ್ರೇರಣೆ ಮತ್ತು ಕಲಿಕೆಗಳು, ಆಂತರಿಕ ಮತ್ತು ಬಾಹ್ಯ ಎರಡೂ, ಸಮಾಜಕ್ಕೆ ಸೇವೆ ಸಲ್ಲಿಸಲು ನನಗೆ ಹೊಸ ದಿಕ್ಕನ್ನು ತೆರೆಯಿತು ಎಂದು ಸಂತಸ ಹಂಚಿಕೊಂಡರು.
ಚೇತನಾ ಫೌಂಡೇಷನ್ ಆರಂಭ
ಪ್ರತಿದಿನ ನನ್ನ ಗೆಳೆಯರೊಂದಿಗೆ ಸಂವಹನ ನಡೆಸುವಾಗ, ನನ್ನ ಪ್ರದೇಶದಲ್ಲಿ ಅನೇಕ ಎನ್‌ಜಿಒಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈ ನಿರ್ಣಾಯಕ ವಯಸ್ಸಿನ ಗುಂಪನ್ನು ಸಾಮಾಜಿಕ ವಲಯಕ್ಕೆ ಸೇರಿಸಿಕೊಳ್ಳುವ ಯಾವುದೇ ಯುವ ಸಂಘಟನೆ ಇಲ್ಲ ಎಂದು ನಾನು ಅರಿತುಕೊಂಡೆ. ಇಲ್ಲಿ 15 ತಿಂಗಳ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಬಳಿಕ ನಾನು ನನ್ನ ಇಬ್ಬರು ಗೆಳೆಯರೊಂದಿಗೆ ಯುವ ಚೇತನ ಫೌಂಡೇಶನ್ (ವೈಸಿಎಫ್) ಸ್ಥಾಪಿಸಿದೆ. ನನ್ನ ಗ್ರಾಮದಲ್ಲಿ ಯುವ ಕಲಿಕಾ ಕೇಂದ್ರವನ್ನು ತೆರೆಯುವ ಮೂಲಕ ಬುಡಕಟ್ಟು ಯುವಕರನ್ನು ಸಬಲೀಕರಣಗೊಳಿಸುವತ್ತ ನಾನು ದಿಟ್ಟ ಹೆಜ್ಜೆ ಇಟ್ಟಿದ್ದೇನೆ. ಯುವ ಜನರೊಂದಿಗೆ ಕೆಲಸ ಮಾಡುವ ಮೂಲಕ, ನಾವು ಒಂದು ಪೀಳಿಗೆಯೊಳಗೆ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂಬುವುದು ನನ್ನ ಆಶಯ. ವಿಶೇಷವಾಗಿ ಶಿಕ್ಷಣ ಮತ್ತು ನಾಯಕತ್ವದ ಮೇಲೆ ಕೆಲಸ ಮಾಡುತ್ತಿದ್ದೇನೆ. ಮಕ್ಕಳು ವಿಶೇಷವಾಗಿ ನಗರಕ್ಕೆ ಹೋದಾಗ ಯಾವ ರೀತಿ ನಡೆದುಕೊಳ್ಳಬೇಕು, ಯಾವ ರೀತಿಯ ಬದಲಾವಣೆ ತರಬೇಕು ಎಂಬುವುದರ ಮೂಲಕ ಮಕ್ಕಳಿಗೆ ಕಲಿಸುವ ಮೂಲಕ ನಾವು ಸಾಮಾಜಿಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಆಶಾ ಅಕ್ಷರ ದೀವಿಗೆಯ ಬೆಳಕು ಪಸರಿಸಿದ್ದು ಹೇಗೆ? ಈ ವಿಡಿಯೋ ನೋಡಿ.