
ಮೆಟ್ರೋ ಹಳಿಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿ ಮೇಲೆ ಜಿಗಿದು ಅಪರಿಚಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಗುರುವಾರ ( ಮಾರ್ಚ್ 21) ರಂದು ನಡೆದಿದೆ.
ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿ ಮೇಲೆ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ( ಮಾ.21) ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನನ್ನು ನ್ಯಾಷನಲ್ ಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಧ್ರುವ್ ಟಕ್ಕರ್ ಎಂದು ಗುರುತಿಸಲಾಗಿದ್ದು, ರೈಲು ಬರುವಾಗ ಯುವಕ ಹಳಿಗೆ ಜಿಗಿದಿದ್ದಾನೆ. ಪರಿಣಾಮ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಯ್ದಿದೆ. ಇದರಿಂದ ಯುವಕನ ದೇಹ ಎರಡು ತುಂಡಾಗಿದೆ. ಸದ್ಯ ಯುವಕನ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಮಧ್ಯಾಹ್ನ 2 ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 19 ರಿಂದ 20 ವರ್ಷದ ಹುಡುಗನ ಸಾವಾಗಿದೆ. ಮೃತ ಧ್ರುವ್ ಟಕ್ಕರ್ ಮಹಾರಾಷ್ಟ್ರದ ಮುಂಬೈ ಮೂಲದವನು. ಈತ ನ್ಯಾಷನಲ್ ಲಾ ಕಾಲೇಜ್ ಫಸ್ಟ್ ಇಯರ್ ವಿದ್ಯಾರ್ಥಿ. ವಿದ್ಯಾರ್ಥಿ ಸಾವಿನ ಬಗ್ಗೆ ಕಾಲೇಜು ಮತ್ತು ಆತನ ಕುಟುಂಬಕ್ಕೆ ಪೊಲೀಸರು ಮಾಹಿತಿ ರವಾನಿಸಿದ್ದು, ಧ್ರುವ್ ಟಕ್ಕರ್ ಏಕೆ ಆತ್ಮಹತ್ಯೆ ಮಾಡಿಕೊಂಡ? ಆತ್ಮಹತ್ಯೆಗೆ ಕಾರಣವೇನು? ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಘಟನೆಯಿಂದಾಗಿ ವೈಟ್ ಫೀಲ್ಡ್ ನಿಂದ ಚಲ್ಲಘಟ್ಟ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕೆಲಕಾಲ ಮಾಗಡಿ ರಸ್ತೆ ಮತ್ತು ವೈಟ್ ಫೀಲ್ಡ್ ನಡುವಣ ಮಾತ್ರ ರೈಲು ಸಂಚಾರವಿತ್ತು. ಮಾಗಡಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತವಾಗಿತ್ತು. ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ ಪುನರ್ ಆರಂಭವಾಗಿದೆ.