ಸಂಚಾರ ನಿಯಮ ಉಲ್ಲಂಘನೆ | ದ್ವಿಚಕ್ರ ವಾಹನ ಮಾಲೀಕ ಮಹಿಳೆಗೆ 1.36 ಲಕ್ಷ ದಂಡ
270 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ 1.36 ಲಕ್ಷ ದಂಡ ವಿಧಿಸಲಾಗಿದ್ದು, ಅದನ್ನು ವಸೂಲಿ ಮಾಡಲು ಪೊಲೀಸರು ವಾಹನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಬೆಂಗಳೂರು: ಹೆಲ್ಮೆಟ್ ಧರಿಸದಿರುವುದೂ ಸೇರಿದಂತೆ ಬರೋಬ್ಬರಿ 270 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ 1.36 ಲಕ್ಷ ದಂಡ ವಿಧಿಸಲಾಗಿದ್ದು, ಅದನ್ನು ವಸೂಲಿ ಮಾಡಲು ಪೊಲೀಸರು ವಾಹನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
'ಕೆಎ 03 ಜೆಇ 5705’ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸಂಚಾರ ನಡೆಸುತ್ತಿದ್ದ ಓರ್ವ ಮಹಿಳೆ ಹಾಗೂ ಇತರರು 270 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಭಾವಚಿತ್ರಗಳ ಸಹಿತ ಸಂಚಾರ ನಿಯಮಗಳ ಉಲ್ಲಂಘನೆ ವಿವರಗಳನ್ನುದಂಡ ಪರಿಶೀಲನೆ ಜಾಲತಾಣದಲ್ಲಿ ಪೊಲೀಸರು ಅಪ್‌ಲೋಡ್ ಮಾಡಿದ್ದಾರೆ.
ಬಾಣಸವಾಡಿಯ ಕಾಕ್ಸ್‌ಟೌನ್, ಸುಬ್ಬಯ್ಯನಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದ್ವಿಚಕ್ರ ವಾಹನ ಸಂಚಾರ ನಡೆಸಿತ್ತು. ಈ ದ್ವಿಚಕ್ರ ವಾಹನದಲ್ಲಿ ಓಡಾಟ ನಡೆಸಿದ ಮಹಿಳೆ ಹಾಗೂ ಇತರರು ಬಹುತೇಕ ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸಿರಲಿಲ್ಲ. ಹಿಂಬದಿ ಸವಾರರೂ ಹೆಲ್ಮೆಟ್ ಹಾಕಿರಲಿಲ್ಲ. ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದ ರಸ್ತೆಗಳಲ್ಲಿಯೂ ಈ ವಾಹನದಲ್ಲಿ ಸಂಚಾರ ನಡೆಸಿದ್ದರು ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ರೂಪಾಯಿ 50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕೆಎ 03 ಜೆಇ 5705 ನೋಂದಣಿ ಸಂಖ್ಯೆ ವಾಹನದ ಮಾಲೀಕರ ಹೆಸರೂ ಇದೆ. ಶೀಘ್ರವೇ ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ನಿರ್ದಿಷ್ಟ ಅವಧಿಯಲ್ಲಿ ದಂಡ ಪಾವತಿ ಮಾಡಬೇಕು. ಇಲ್ಲವಾದಲ್ಲಿ ವಾಹನ ಜಪ್ತಿ ಮಾಡಲಾಗುತ್ತದೆ. ತದನಂತರವೂ ದಂಡ ಪಾವತಿಸದಿದ್ದರೆ, ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.