ಕೊಲ್ಲೂರಿನ ಸೌಪರ್ಣಿಕಾ ನದಿ ಬಳಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಬೆಂಗಳೂರು ಮಹಿಳೆ
x

ಸೌಪರ್ಣಿಕಾ ನದಿ

ಕೊಲ್ಲೂರಿನ ಸೌಪರ್ಣಿಕಾ ನದಿ ಬಳಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಬೆಂಗಳೂರು ಮಹಿಳೆ

ನದಿಯಲ್ಲಿ ಬಿದ್ದ ಮಹಿಳೆಯನ್ನು ವಸುಧಾ ಬೆಂಗಳೂರಿನ ಮೂಲದವರಾಗಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತೆಯಾಗಿರುವ ಇವರು ದೇವಳಕ್ಕೆ ಆಗಾಗ್ಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.


ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿಯ ಸೌರ್ಪಣಿಕಾ ನದಿಯಲ್ಲಿ ಬೆಂಗಳೂರು ಮೂಲದ ಮಹಿಳೆಯೊಬ್ಬರು ಶುಕ್ರವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿದ್ದಾರೆ.

ನದಿಯಲ್ಲಿ ಬಿದ್ದ ಮಹಿಳೆಯನ್ನು ವಸುಧಾ (46) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಮೂಲದವರಾಗಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತೆಯಾಗಿರುವ ಇವರು ದೇವಳಕ್ಕೆ ಆಗಾಗ್ಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಾರಿ ದೇವಸ್ಥಾನಕ್ಕೆ ಕಾರಲ್ಲಿ ಆಗಮಿಸಿದ್ದ ವಸುಧಾ ಅವರು, ದೇವಿಯ ದರ್ಶನದ ಬಳಿಕ ಪಕ್ಕದಲ್ಲೇ ಇದ್ದ ಸೌಪರ್ಣಿಕಾ ನದಿಯ ಕಡೆ ಹೋಗಿದ್ದು, ಈ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನದಿ ನೀರಿನಲ್ಲಿ ಬಿದ್ದಿದ್ದಾರೆ.

ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಇದನ್ನು ಕಂಡವರು ದೇಗುಲ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡ ಹಾಗೂ ಅಗ್ನಿಶಾಮಕದಳವನ್ನು ಸ್ಥಳಕ್ಕೆ ಕರೆಸಿ ಹುಡುಕಾಟ ಆರಂಭಿಸಿದ್ದಾರೆ.

ಶುಕ್ರವಾರ ಈ ಘಟನೆ ನಡೆದಿದ್ದು, ಒಂದು ದಿನ ಕಳೆದರೂ ಸುಳಿವಿಲ್ಲ. ನೀರಿನ ರಭಸ ತೀವ್ರವಾಗಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗುತ್ತಿದೆ. ಆದರೂ, ನಿನ್ನೆಯಿಂದ ಎರಡು ತಂಡಗಳು ಹುಡುಕಾಟ ನಡೆಸುತ್ತಿವೆ. ಒಂದು ದಿನ ಕಳೆದರೂ, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ವಸುಧಾ ಅವರ ಕಾರು ನದಿ ಬಳಿ ಬಿಡಲಾಗಿದೆ. ಅದರಲ್ಲಿ ಮೊಬೈಲ್ ಪತ್ತೆಯಾಗಿದೆ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸದ್ಯ ಮಹಿಳೆಯ ಕುಟುಂಬಸ್ಥರು ಕೊಲ್ಲೂರಿಗೆ ಆಗಮಿಸಿದ್ದು, ಹುಡುಕಾಟ ನಡೆಸುವ ಸ್ಥಳದಲ್ಲಿದ್ದಾರೆ.

Read More
Next Story