A woman from West Bengal was raped by three youths in Bengaluru, a case was registered
x
ಸಾಂದರ್ಭಿಕ ಚಿತ್ರ

Bangalore | ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣ ದಾಖಲು

ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮನೆಗೆ ನುಗ್ಗಿದ ಮೂವರು ಮಂಗಳವಾರ (ಅ.21) ರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


Click the Play button to hear this message in audio format

ಬೆಂಗಳೂರಿನಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮೇಲೆ ಮೂವರು ಯುವಕರು ಅತ್ಯಾಚಾರ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರ ತಾಲೂಕಿನ ಗಂಗೊಂಡನಹಳ್ಳಿಯ ಬಾಡಿಗೆ ಮನೆಯಲ್ಲಿ ಮಹಿಳೆ ವಾಸವಾಗಿದ್ದರು. ಮಂಗಳವಾರ (ಅ.21) ರಾತ್ರಿ ಮನೆಗೆ ನುಗ್ಗಿದ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪ್ರಸ್ತುತ, ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಗಳು ಅತ್ಯಾಚಾರ ಎಸಗುವ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಅತ್ಯಾಚಾರದ ಬಳಿಕ ಯುವಕರು ನಾಪತ್ತೆಯಾಗಿದ್ದು, ಆರೋಪಿಗಳನ್ನು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆಗೂ ಹಾಗೂ ಯುವಕರಿಗೂ ಮೊದಲೇ ಪರಿಚಯವಿತ್ತೇ ಎನ್ನುವ ಆಯಾಯಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೆಹಲಿ ಮೂಲದ ಮಹಿಳೆ ಮೇಲೆ ನಡೆದಿತ್ತು ಅತ್ಯಾಚಾರ

ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.21 ರಂದು ತಡರಾತ್ರಿ ಸ್ನೇಹಿತರ ಭೇಟಿಗೆ ಬಂದಿದ್ದ ದೆಹಲಿ ಮೂಲದ 35 ವರ್ಷದ ಮಹಿಳೆಯನ್ನು ಕರೆದೋಯ್ದು ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕೋರಮಂಗಲದ ಹೋಟೆಲ್ ಒಂದರ ಮಹಡಿ ಮೇಲೆ ಈ ಘಟನೆ ನಡೆದಿತ್ತು. ಮಹಿಳೆ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಬಂಧಿತ ಆರೋಪಿಗಳು ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ ಮೂಲದವರಾಗಿದ್ದರು.

ಎಚ್‌ಎಸ್‌ಆರ್‌ ಲೇಔಟ್‌ನಲ್ಲೂ ನಡೆದಿತ್ತು ಘಟನೆ

ಕಳೆದ ವರ್ಷ ಆಗಸ್ಟ್‌ನಲ್ಲಿ ಮಧ್ಯರಾತ್ರಿ ಬೆಂಗಳೂರಿನ ಕೋರಮಂಗಲದ ಪಬ್‌ನಿಂದ ಪಾನಮತ್ತರಾಗಿ ಹೊರ ಬಂದಿದ್ದ ಯುವತಿಯು ದ್ವಿಚಕ್ರ ವಾಹನದಲ್ಲಿ ಹೋಗುವಾಗ ವಾಹನ ಅಪಘಾತವಾಗಿದ್ದು, ಯುವತಿ ವಾಹನ ಬಿಟ್ಟು ಮತ್ತೊಬ್ಬನ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಯುವತಿ ಪಾನಮತ್ತರಾಗಿರುವುದನ್ನು ಗಮನಿಸಿ ಆಕೆಯನ್ನು ಹೆಚ್‌ಎಸ್‌ಆರ್‌ ಲೇಔಟ್‌ ನಿರ್ಜನ ಪ್ರದೇಶದ ಗೋದಾಮಿಗೆ ಕರೆದೋಯ್ದು ಅತ್ಯಾಚಾರ ಮಾಡಿದ್ದ. ಬಳಿಕ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದ. ಯುವತಿ ತನ್ನ ಸ್ನೇಹಿತೆಗೆ ಕರೆ ಮಾಡಿದ್ದಳು. ನೆರವಿಗೆ ಧಾವಿಸಿದ ಸ್ನೇಹಿತರು ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರತಿ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಳ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಪೊಲೀಸ್‌ ಇಲಾಖೆ ಮಾಹಿತಿಗಳ ಪ್ರಕಾರ 2021 ರಲ್ಲಿ116 ಪ್ರಕರಣಗಳು, 2022 ರಲ್ಲಿ 153 ಪ್ರಕರಣಗಳು, 2023 ರಲ್ಲಿ 176 ಪ್ರಕರಣಗಳು ಹಾಗೂ 2024 ನವೆಂಬರ್‌ ಅಂತ್ಯಕ್ಕೆ 165 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 2025 ಜುಲೈ ಅಂತ್ಯದ ವೇಳೆಗೆ 549 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಗೃಹ ಸಚಿವರಿಂದ ಬೇಜವ್ದಾರಿ ಹೇಳಿಕೆ

2025ರ ಏಪ್ರಿಲ್‌ನಲ್ಲಿ ಬಿಟಿಎಂ ಲೇಔಟ್‌ನಲ್ಲಿ ಯುವತಿಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, "ಬೆಂಗಳೂರು ದೊಡ್ಡ ನಗರ, ಅಲ್ಲೊಂದು ಇಲ್ಲೊಂದು ಕಿರುಕುಳ ಘಟನೆ ನಡೆಯುತ್ತವೆ" ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿಕೆ ನೀಡಿದ್ದರು. ಇದನ್ನು ಸಾರ್ವಜನಿಕರು ಮತ್ತು ವಿರೋಧ ಪಕ್ಷದವರು ಇದು ಬೇಜವಾಬ್ದಾರಿತನದ ಹೇಳಿಕೆ ಎಂದು ಖಂಡಿಸಿದ್ದರು.

Read More
Next Story