Koppala News | ಬಂಕಾಪುರ ಧಾಮದಲ್ಲಿ 8 ಮರಿಗಳಿಗೆ ಜನ್ಮ ನೀಡಿದ ತೋಳ
ಬಂಕಾಪುರ ತೋಳ ವನ್ಯಧಾಮದಲ್ಲಿ ಒಟ್ಟು 35-40 ತೋಳಗಳಿವೆ. ಅವುಗಳ ಸುರಕ್ಷತೆಗೆ ಕ್ರಮ ವಹಿಸಿದ್ದು, ಸಫಾರಿ ವ್ಯವಸ್ಥೆಗೂ ಚಿಂತನೆ ನಡೆಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ರಾಜ್ಯದಲ್ಲಿ ತೋಳಗಳ ಸಂತತಿ ಅಳಿವಿನಂಚಿನಲ್ಲಿದೆ. ಆದರೆ, ಅರಣ್ಯ ಇಲಾಖೆಯ ಸಂರಕ್ಷಣಾ ಕ್ರಮದಿಂದಾಗಿ ಕೊಪ್ಪಳದ ಬಂಕಾಪುರ ತೋಳಧಾಮದಲ್ಲಿ ಹೆಣ್ಣು ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದೆ.
ಗಂಗಾವತಿ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸುಮಾರು 332 ಹೆಕ್ಟರ್ ವಿಸ್ತೀರ್ಣದಲ್ಲಿರುವ ಬಂಕಾಪುರ ತೋಳ ಧಾಮವು ಕುರುಚಲು ಅರಣ್ಯ, ಗುಡ್ಡಗಳು ಹಾಗೂ ನೈಸರ್ಗಿಕ ಗುಹೆಗಳನ್ನು ಒಳಗೊಂಡಿದೆ. ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿ ಸೇರಿದಂತೆ ಹಲವು ವನ್ಯಜೀವಿಗಳಿಗೆ ಸ್ವಚ್ಚಂಧ ತಾಣವಾಗಿ ಮಾರ್ಪಟ್ಟಿದೆ. ಅಳಿವಿನ ಅಂಚಿಗೆ ತಲುಪಿದ್ದ ತೋಳಗಳಿಗೆ ಇದು ಸುರಕ್ಷಿತ ಪ್ರದೇಶವಾಗಿದೆ.
ಇಂಡಿಯನ್ ಗ್ರೇ ಊಲ್ಫ್ ಪ್ರಭೇದದ ತೋಳಗಳು ವನ್ಯಧಾಮದಲ್ಲಿವೆ. ಇತ್ತೀಚೆಗೆ ಹೆಣ್ಣು ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಸ್ವಚ್ಛಂಧವಾಗಿ ವಿಹರಿಸುತ್ತಿವೆ. ಸಾಮಾನ್ಯವಾಗಿ ತೋಳದ ಮರಿಗಳಲ್ಲಿ ಪ್ರತಿಶತ 50ರಷ್ಟು ಬದುಕುಳಿಯುತ್ತವೆ. ಆದರೆ, ಎಲ್ಲ ತೋಳದ ಮರಿಗಳನ್ನು ಉಳಿಸಲು ಅರಣ್ಯಾಧಿಕಾರಿಗಳು ಪಣ ತೊಟ್ಟು ರಕ್ಷಣೆ ಮಾಡುತ್ತಿದ್ದಾರೆ.
ಬಂಕಾಪುರದ ಈ ಪ್ರದೇಶವನ್ನು ತೋಳ ವನ್ಯಧಾಮ ಎಂದು 15ನೇ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಘೋಷಿಸಲಾಗಿತ್ತು. ಜ.18ರಂದು ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.
ಬಂಕಾಪುರ ತೋಳ ವನ್ಯಧಾಮದಲ್ಲಿ ಈಗ ಒಟ್ಟು 35-40 ತೋಳಗಳಿವೆ. ಇವುಗಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಫಾರಿ ವ್ಯವಸ್ಥೆಗೆ ಚಿಂತನೆ
ಗಂಗಾವತಿ ನಗರದಿಂದ 15 ಕಿ.ಮೀ ದೂರದಲ್ಲಿರುವ ಈ ವನ್ಯಜೀವಿ ಧಾಮದಲ್ಲಿ ಸಫಾರಿ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಸಫಾರಿ ವ್ಯವಸ್ಥೆಗೆ ಅನುವು ಮಾಡಿಕೊಡುವ ಸಲುವಾಗಿ ಬಂಕಾಪುರ ತೋಳ ವನ್ಯಧಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಅವರು ಸೂಚಿಸಿದ್ದಾರೆ.