ದೇವನಹಳ್ಳಿ ರೈತ ಹೋರಾಟಕ್ಕೆ 1000 ದಿನ | ರಾಜ್ಯ ಸರ್ಕಾರದ ವಿರುದ್ಧ ಮೊಳಗಿದ ಕಹಳೆ
x
ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಹೋರಾಟ ಸಭೆಯಲ್ಲಿ ಪ್ರಕಾಶ್‌ ರಾಜ್‌ ಮಾತನಾಡಿದರು

ದೇವನಹಳ್ಳಿ ರೈತ ಹೋರಾಟಕ್ಕೆ 1000 ದಿನ | ರಾಜ್ಯ ಸರ್ಕಾರದ ವಿರುದ್ಧ ಮೊಳಗಿದ ಕಹಳೆ

ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಚಿತ್ರನಟ ಪ್ರಕಾಶ್‌ ರೈ, ಸಾಹಿತಿ ಪ್ರೊ.ಜಿ. ಸಿದ್ದರಾಮಯ್ಯ, ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹಾಗೂ ದಲಿತ, ಪ್ರಗತಿಪರ ಹೋರಾಟಗಾರರು ಬೆಂಬಲ ಸೂಚಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ತಾಲೂಕಿನಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ಹೋಬಳಿ ರೈತರ ಸಾವಿರ ದಿನಗಳ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸೋಮವಾರ ರೈತರ ಬೃಹತ್‌ ಸಮಾವೇಶ ನಡೆಯಿತು.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಚಿತ್ರನಟ ಪ್ರಕಾಶ್‌ ರೈ, ಸಾಹಿತಿ ಪ್ರೊ.ಜಿ. ಸಿದ್ದರಾಮಯ್ಯ, ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹಾಗೂ ದಲಿತ, ಪ್ರಗತಿಪರ ಹೋರಾಟಗಾರರು ರೈತರ ಹೋರಾಟ ಬೆಂಬಲಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಹೋರಾಟದ ಕುರಿತು ಗಣ್ಯರು ಮಾತನಾಡಿದ್ದೇನು ಎಂಬುದು ಇಲ್ಲಿದೆ.

ಪ್ರಕಾಶ್‌ ರೈ ಹೇಳಿದ್ದೇನು?

ರೈತರ ಸಾವಿರ ದಿನದ ಹೋರಾಟ ಸಣ್ಣ ವಿಷಯವಲ್ಲ. ನಾನು ಮೂಲತಃ ರೈತನಲ್ಲ. ಸ್ವಲ್ಪ ಗಿಡಮರ ಬೆಳೆಸಿದ್ದೇನೆ. ರೈತರು ನನಗಿಂತ ದೊಡ್ಡವರು. ಅವರ ಋಣ ನನ್ನ ಮೇಲೆ ಇರುವುದರಿಂದ ಹೋರಾಟಕ್ಕೆ ಬಂದಿದ್ದೇನೆ. ರೈತರು ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿರುವುದು ಈ ದೇಶದ ದೊಡ್ಡ ದುರಂತ ಎಂದು ವಿಷಾದಿಸಿರು.

ರೈತರನ್ನು ಬಾಯಿಮಾತಿಗೆ ಮಾತ್ರ ದೇಶದ ಬೆನ್ನಲುಬು ಎಂದು ಹೇಳುತ್ತಾರೆ. ಎಲ್ಲಾ ಸರ್ಕಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳಿಂದ ರೈತ ಕುಲವನ್ನು ನಾಶ ಮಾಡುತ್ತಿವೆ. ದೇಶದಲ್ಲಿ ನಮಗೆ ಏನು ಬೇಕು ಎಂಬುದನ್ನು ನಾವೇ ಆರಿಸಿ ಕಳುಹಿಸಿದವರಿಂದ ಕೇಳಿ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಆದರೆ, ಜನರಿಂದ ಆಯ್ಕೆಯಾಗಿ ಹೋದವರು ನಮಗೆ ಏನು ಬೇಡವೋ ಅದನ್ನೇ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪಂಜಾಬ್ ಮತ್ತು ಹರಿಯಾಣ ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಚನ್ನರಾಯಪಟ್ಟಣದಲ್ಲಿ ಹೋರಾಟ ಶುರುವಾದಾಗ ರಾಜ್ಯದಲ್ಲಿ ಆಡಳಿತ ನಡೆಸಿದ ಅಂದಿನ ಬಿಜೆಪಿ ಸರ್ಕಾರ, ಇವರು ರೈತರೇ ಅಲ್ಲ ಎಂದು ಹೇಳಿತ್ತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ನವರು ʼನಾವು ಅಧಿಕಾರಕ್ಕೆ ಬಂದರೆ ರೈತರ ಪರವಾಗಿರುತ್ತೇವೆʼ ಎಂದಿದ್ದರು. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ಆದರೆ, ರೈತರಿಗೆ ಯಾವುದೇ ಅನುಕೂಲ ಮಾಡಿಲ್ಲ. ಹಾಗಾದರೆ, ಅದ್ಯಾವ ಅಹಂಕಾರ ರೈತಪರ ನಿರ್ಣಯವನ್ನು ತಡೆಯುತ್ತಿದೆ. ರೈತರು ಓಟು ಹಾಕುವುದಕ್ಕಷ್ಟೇ ಸೀಮಿತವೇ ಎಂದು ಆಕ್ರೋಶ ಹೊರಹಾಕಿದರು.

ಭೂಸ್ವಾಧೀನ ಕೇವಲ 13 ಹಳ್ಳಿಗಳ ಸಮಸ್ಯೆ ಅಲ್ಲ. ಈ ಹೋರಾಟದ ಗೆಲುವು ಇಡೀ ಸ್ವಾಧೀನ ಪ್ರಕ್ರಿಯೆಯನ್ನೇ ಬದಲಿಸುವಂತೆ ಇರಬೇಕು. ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಂಡವಾಳದಾರರಿಗೆ ಧಾರೆ ಎರೆಯುತ್ತಿದ್ದೀರಿ, ಅವರು ಮರ ನೋಡದೆ ತೆಂಗಿನ ಕಾಯಿ ಕೀಳುತ್ತಾರೆ. ಗಿಡ ನೋಡದೆ ದೇವರಿಗೆ ಹೂ ಮುಡಿಸುತ್ತಾರೆ. ಭತ್ತ ನೋಡದೆ ಅನ್ನ ಉಂಡು, ರಾಗಿ ನೋಡದೆ ಮುದ್ದೆ ಹಿಚುಕುತ್ತಾರೆ. ಆದ್ದರಿಂದ, ಅವರಿಗೆ ಭೂಮಿ ಮತ್ತು ರೈತರ ನಡುವಿನ ಸಂಬಂಧ ಅರ್ಥವಾಗುವುದಿಲ್ಲ. ಭೂಮಿ ರೈತರ ಸ್ವಾಭಿಮಾನದ ಗುರುತು ಎಂದರು.

ಇಲ್ಲಿನ ರೈತರಿಗೆ ಸರ್ಕಾರ ಯಾವುದೇ ಕೆಲಸ ಕೊಟ್ಟಿಲ್ಲ. ತಲೆ ತಲಾಂತರಗಳಿಂದ ತುಂಡು ಭೂಮಿಯಲ್ಲಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಪಟ್ಟಣದವರೆಲ್ಲ ರೈತರಾಗಬೇಕಿಲ್ಲ. ಆದರೆ, ಮನುಷ್ಯತ್ವ ಹೊಂದಿದವರು ರೈತರ ಆತಂಕ, ಕಣ್ಣೀರಿನ ಜೊತೆಗೆ ನಿಲ್ಲಬೇಕಾಗಿದೆ. ರಾಜಕಾರಣಿಗಳು ಹಾಗೂ ಪಟ್ಟಣ ನಿವಾಸಿಗಳಿಗೆ ಸಂದೇಶ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಜೊತೆಗೆ ನಿಲ್ಲುವುದರಿಂದ ನನಗೆ ಗೌರವ ಸಿಗುತ್ತದೆ. ರೈತರ ಋಣ ನನ್ನ ಮೇಲಿದೆ. ಫಲವತ್ತಾದ ಭೂಮಿ ಮೇಲೆ ಕೈಗಾರಿಕೆ ಕಟ್ಟುತ್ತಾ ಹೋದರೆ, ನೀವು ಮುಂದೆ ಹೊಟ್ಟೆಗೆ ತಿನ್ನುವುದಾದರೂ ಏನು?, ರೈತ ನಶಿಸಿದರೆ ನಾವ್ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ರೈತ ಹೋರಾಟದಲ್ಲಿ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿದರು

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹೇಳಿದ್ದೇನು?

ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, 140 ಕೋಟಿ ಜನ ಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಈ ಹೋರಾಟ ಗೆಲ್ಲಬೇಕಾದರೆ, ಸರ್ಕಾರದ ಗಮನ ಸೆಳೆಯಲು ಮಹಿಳೆಯರು ಮುಂದಾಳತ್ವ ವಹಿಸಬೇಕು ಎಂದು ಈ ಹಿಂದೆ ಹೇಳಿದ್ದೆ. ಅದು ಇಂದು ಋಜುವಾತಾಗಿದೆ. ರೈತರನ್ನು ಕಡೆಗಣಿಸುವ ಸರ್ಕಾರಗಳ ಪತನಕ್ಕೆ ಮಹಿಳೆಯರೇ ನಾಯಕತ್ವ ವಹಿಸಬೇಕು ಎಂದು ಹೇಳಿದರು.

ನಾನೂ ರೈತನ ಮಗ, ನಾನೂ ಕೃಷಿ ಮಾಡುತ್ತಿದ್ದೇನೆ. ಭೂಮಿ ನಮ್ಮ ತಾಯಿ ಇದ್ದಂತೆ, ತಾಯಿಯನ್ನೇ ಕಬಳಿಸಲು ಹೊರಟಿರುವ ಸರ್ಕಾರಗಳು ಎಂದಿಗೂ ಉಳಿಯುವುದಿಲ್ಲ. ಈ ಹಿಂದೆ ಪಶ್ಚಿಮ ಬಂಗಾಳದ ಎಡಪಕ್ಷಗಳ ನೇತೃತ್ವದ ಸರ್ಕಾರ ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿ ಟಾಟಾ ಕಂಪನಿಗೆ ನೀಡಿತ್ತು. ಅಂದು ಮಮತಾ ಬ್ಯಾನರ್ಜಿ ಇದರ ವಿರುದ್ಧ ಹೋರಾಟ ನಡೆಸಿದ್ದರಿಂದ 32 ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದ ಎಡಪಕ್ಷಗಳ ಸರ್ಕಾರ ಪತನವಾಗಿತ್ತು. ಇದನ್ನು ಪ್ರತಿಯೊಂದು ಸರ್ಕಾರವೂ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರ ಹಾಗೂ ಸಚಿವರು ರೈತರ ಪರವಿದ್ದೇವೆ ಎಂದು ಹೇಳುತ್ತಾರೆ. ಹಾಗಾಗಿದ್ದರೆ, ಇಷ್ಟೊತ್ತಿಗೆ ಹೋರಾಟ ಮುಗಿಯಬೇಕಿತ್ತಲ್ಲವೇ, ನೋಟಿಫಿಕೇಷನ್ ವಾಪಸ್ ಪಡೆಯಬೇಕಿತ್ತಲ್ಲವೇ,. ಯಾಕೆ ಹೋರಾಟ ಇನ್ನೂ ಮುಂದುವರಿದಿದೆ. ರಾಜಕಾರಣಿಗಳ ಇಂತಹ ಮಾತುಗಳನ್ನು ಹೇಗೆ ನಂಬುದು ಎಂದು ಪ್ರಶ್ನಿಸಿದರು.

ಸರ್ಕಾರಗಳು ರೈತರ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರಿಂದ, ಜನರಿಗಾಗಿ ಜನರಿಗಾಗಿಯೇ ಆಡಳಿತ ನಡೆಸಬೇಕು. ಇದು ಸಂಸದೀಯ ಪ್ರಜಾಪ್ರಭುತ್ವ. ಜನಪರ ನೀತಿಗಳು ಇಲ್ಲದಿದ್ದರೆ ಸರ್ಕಾರ ಅಧಃಪತನವಾಗುತ್ತದೆ. ಜನರು ಮತ ಕೊಟ್ಟಿದ್ದರಿಂದ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರ ಸಮಸ್ಯೆಗಳುಗೆ ಸ್ಪಂದಿಸದಿದ್ದರೆ ಅದು ಜವಾಬ್ದಾರಿಯುತ ಸರ್ಕಾರ ಆಗುವುದಿಲ್ಲ. ಅಂತಹ ಸರ್ಕಾರ ಜನರಿಗೆ ಬೇಕಾಗಿಯೂ ಇಲ್ಲ ಎಂದು ಕಿಡಿಕಾರಿದರು.

ಕೃಷಿಯೂ ಕೂಡ ಸಂವಿಧಾನದ 19 (ಜಿ) ಅಡಿ ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುತ್ತದೆ. ಕೃಷಿಯೇ ಕೈಗಾರಿಕೆ ಆಗಿರುವಾಗ, ಬೇರೆ ಕೈಗಾರಿಕೆಗಳು ಯಾಕೆ ಬೇಕು?, ಎಲ್ಲ ಭೂಮಿಯನ್ನು ಕೈಗಾರಿಕೆಗೆ ಕೊಟ್ಟರೆ ದ್ರಾಕ್ಷಿ, ರೇಷ್ಮೆ ಹಾಗೂ ಹಾಲು ಉತ್ಪಾದನೆ ಎಲ್ಲಿ ಮಾಡುತ್ತೀರಿ? ಇದಕ್ಕೆ ಸರ್ಕಾರದ ಬಳಿ ಉತ್ತರ ಇದೆಯಾ? ಎಂದು ಪ್ರಶ್ನಿಸಿದರು.

ಇದೇ ಭಾಗದಲ್ಲಿ ಎಕ್ಸೈಡ್ ಬ್ಯಾಟರಿ ಕಂಪನಿಗೆ 88 ಎಕರೆ ಭೂಮಿ ಕೊಟ್ಟಿದ್ದಾರೆ. ಅಷ್ಟೊಂದು ಜಮೀನು ಯಾಕೆ ಅವರಿಗೆ? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಮ್ಮ ಸ್ಥಿತಿ ಏನು ಎಂಬುವುದನ್ನು ಕೇಳಬೇಕಲ್ಲವೇ, ಪ್ರಾಜೆಕ್ಟ್ ರಿಪೋರ್ಟ್ ಪಡೆದು ಪರಿಶೀಲಿಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಸ್ವಾಧೀನ ಮಾಡಿಕೊಂಡಿರುವ ಎರಡು ಸಾವಿರ ಎಕರೆಯನ್ನು ಯಾರಿಗೆ ಕೊಟ್ಟಿದ್ದೇವೆ ಎಂದು ಪಾರದರ್ಶಕವಾಗಿ ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಚನ್ನರಾಯಪಟ್ಟಣ ರೈತ ಸಮಾವೇಶದಲ್ಲಿ ಭಾಗವಹಿಸಿರುವ ರೈತರು

ಪ್ರೊ.ಜಿ.ಸಿದ್ದರಾಮಯ್ಯ ಹೇಳಿದ್ದೇನು?

ರೈತರ ಹೋರಾಟ ಬೆಂಬಲಿಸಿ ಮಾತನಾಡಿದ ಪ್ರೊ. ಎಸ್‌.ಜಿ ಸಿದ್ದರಾಮಯ್ಯ, “ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ರೈತರ ಭಂಗ-ಭವಣೆ ಏನು ಎಂಬುವುದರ ಅರಿವು ನನಗಿದೆ. ಶಾಸಕಾಂಗ ಹಾಗೂ ಅಧಿಕಾರಿ ವರ್ಗದಲ್ಲಿ ಇರುವರೆಲ್ಲರೂ ರೈತನ ಮಕ್ಕಳೇ ಆಗಿದ್ದಾರೆ. ಆದರೆ, ಅವರು ತಮ್ಮ ಹಿಂದಿನ ಕಣ್ಣು-ಕಿವಿ ಹಾಗೂ ನೆನಪು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ವಿಧಾನಸೌಧದಲ್ಲಿರುವ ಬಹುತೇಕರು ರೈತರ ಮಕ್ಕಳೇ ಆಗಿದ್ದಾರೆ. ಅವರು ತಮ್ಮ ಅಂತಃಸಾಕ್ಷಿಯನ್ನು ಎಚ್ಚದಲ್ಲಿಟ್ಟುಕೊಂಡು ಮಾತನಾಡಬೇಕು. ದೇಶಕ್ಕೆ ಅಭಿವೃದ್ಧಿಗೆ ಕೈಗಾರಿಕೆಗಳು ಬೇಕು ಹೌದು. ಆದರೆ, ಸಂಸ್ಕೃತಿ, ಇತಿಹಾಸ ಹಾಗೂ ಬದುಕಿನ ನಾಶದ ಮೂಲಕ ಅಭಿವೃದ್ಧಿ ಮಾಡಬೇಕಾಗಿಲ್ಲ. ಹಳ್ಳಿಗಳನ್ನು ನಾಶ ಮಾಡಿ, ಪ್ರಗತಿ ಸಾಧಿಸುತ್ತೇವೆ ಎನ್ನುವುದು ಮನುಷ್ಯತ್ವ ಹಾಗೂ ಪ್ರಗತಿಯ ವಿರೋಧಿಯಾಗಿದೆ ಎಂದರು.

ಭೂಸ್ವಾಧೀನವು ಬಂಡವಾಳಶಾಹಿಗಳನ್ನು ಬೆಳೆಸಲಿದೆಯೇ ಹೊರತು, ರೈತರನ್ನು ಉದ್ಧಾರ ಮಾಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ನಂಜುಂಡಸ್ವಾಮಿ ಶಿಷ್ಯ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಸಾವಿರ ದಿನಗಳಿಂದ ರೈತರು ನಡೆಸುತ್ತಿರುವ ಧರಣಿ ಇಡೀ ದೇಶದ ರಾಜಕೀಯ ಪ್ರಜ್ಞೆಯೇ ತಲೆತಗ್ಗಿಸುವ ವಿಚಾರವಾಗಿದೆ. ನಮ್ಮಲ್ಲಿ ಸಾಕಷ್ಟು ಬಂಜರು ಭೂಮಿ ಇದೆ. ಅಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ. ಈಗಾಗಲೇ ಬೆಂಗಳೂರನ್ನು ಹಾಳು ಮಾಡಿರುವ ನೀವು, ಹಳ್ಳಿಗಳನ್ನು ನರಕ ಮಾಡುವುದು ಬೇಡ. ಫಲವತ್ತಾದ ಭೂಮಿಯನ್ನು ನಾಶ ಮಾಡಿದರೆ, ಮುಂದೆ ಅನ್ನ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಅನ್ನದ ಋಣವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದೇನು?

ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇದು ಕೇವಲ ಚನ್ನರಾಯಪಟ್ಟಣದ 13 ಗ್ರಾಮಗಳ ಹೋರಾಟವಲ್ಲ. ರೈತರ ಸಂಸ್ಕೃತಿಯನ್ನು ಉಳಿಸುವುದಕ್ಕೆ ನಡೆಸುತ್ತಿರುವ ಸಂಘರ್ಷ. ನಮಗೆ ಯಾವ ಅಭಿವೃದ್ಧಿಯ ಮಾದರಿ ಬೇಕು ಎಂಬುವುದು ಆಳುತ್ತಿರುವ ಸರ್ಕಾರಕ್ಕೆ ಬೇಕಿಲ್ಲ. ನಾವು (ರೈತರು) ಮಾಡುತ್ತಿರುವುದು ನಿಜವಾದ ಅಭಿವೃದ್ಧಿ ಎಂದು ತೋರಿಸುವುದಕ್ಕೆ ಈ ಹೋರಾಟ. ಅಧಿಕಾರಿಗಳು ಹಾಗೂ ಸರ್ಕಾರದ ಜೊತೆಯಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಯಾಕೆ ಇಷ್ಟೆಲ್ಲಾ ಸಭೆಗಳು ಎಂದು ನಮಗೆ ಅನಿಸುತ್ತಿದೆ. ಶೇ.77.7 ಜನ ನಾವು ಭೂಮಿ ಕೊಡಲ್ಲ ಎಂದು ಬರೆದುಕೊಟ್ಟಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದ ಕಾನೂನು ಬಹುಸಂಖ್ಯಾತ ರೈತರ ವಿರೋಧ ಇದ್ದಲ್ಲಿ ಭೂಸ್ವಾಧೀನ ಮಾಡುವಂತಿಲ್ಲ ಎಂದು ಹೇಳುತ್ತದೆ. ಇಷ್ಟು ಸರಳವಾಗಿರುವ ವಿಚಾರ ನಮಗೆ ಗೊತ್ತಿರುವಾಗ ಸರ್ಕಾರದ ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಅರ್ಥವಾಗಿಲ್ಲ ಎಂದು ಅಂದುಕೊಳ್ಳಬೇಕಾ? ಎಂದು ಪ್ರಶ್ನಿಸಿದರು.

ಒಂದು ಎಕರೆಗೆ ಪರಿಹಾರವಾಗಿ ಹತ್ತು ಸಾವಿರ ಚದರ ಅಡಿ ಅಭಿವೃದ್ಧಿ ಮಾಡಿರುವ ಭೂಮಿ ಕೊಡುತ್ತೇವೆ ಎಂದು ಎಂ.ಬಿ. ಪಾಟೀಲ್ ಹೇಳುತ್ತಿದ್ದಾರೆ. ನಾವು ಬೋರ್‌ವೆಲ್‌ ಹಾಕಿಸಿ, ಗಿಡಮರ, ಬೆಳೆಗಳನ್ನು ಬೆಳೆಸಿದ್ದೇವೆ. ಇವೆಲ್ಲಾ ಅಭಿವೃದ್ದಿ ಅಲ್ಲವಾ? ಅದಕ್ಕೂ ಮೀರಿ ಅವರ ಮಾತುಗಳಲ್ಲಿ, ನಾವು 15-16 ದೇಶಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅವರಿಗೆ ಭೂಮಿ-ನೀರು ಕೊಡಬೇಕು. ಜಾಗತಿಕ ಹೂಡಿಕೆದಾರರ ಸಭೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿ ಸಣ್ಣ ರೈತರ ಭೂಮಿ ಹರಾಜು ನಡೆಯುತ್ತದೆ. ಬಿತ್ತನೆ ಬೀಜಕ್ಕೆ ಸಾಲಿನಲ್ಲಿ ನಿಲ್ಲುವ ರೈತರು, ಕಳಪೆ ಬೀಜ ಕೊಟ್ಟಿದ್ದಕ್ಕೆ ಹೋರಾಟ ಮಾಡಬೇಕು. ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಗಾಗಿ ಹೋರಾಟ ಮಾಡಬೇಕು. ಈಗ ಭೂಸ್ವಾಧೀನ ಕೈಬಿಡುವಂತೆಯೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Read More
Next Story