ಸಿದ್ದರಾಮಯ್ಯ ಕೊರಳಿಗೆ ಉಚಿತ ಬಸ್‌ ಟಿಕೆಟ್‌ ಹಾರ: ವಿದ್ಯಾರ್ಥಿನಿಯಿಂದ ವಿನೂತನ ಕೃತಜ್ಞತೆ
x

ಸಿದ್ದರಾಮಯ್ಯ ಕೊರಳಿಗೆ ಉಚಿತ ಬಸ್‌ ಟಿಕೆಟ್‌ ಹಾರ: ವಿದ್ಯಾರ್ಥಿನಿಯಿಂದ ವಿನೂತನ ಕೃತಜ್ಞತೆ


ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುತ್ತದೆ. ಈ ಯೋಜನೆ ಯಶಸ್ವಿಯಾಗಿದ್ದು, ಹಲವು ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕೈ ನಾಯಕರಿಗೆ ತಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಸೋಮವಾರ ನಡೆದ ಹಾಸನ ಲೋಕಸಭಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ವಿದ್ಯಾರ್ಥಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ.

ಅರಸೀಕೆರೆಯ ಕಾನೂನು ವಿದ್ಯಾರ್ಥಿನಿ ಜಯಶ್ರೀ ಅವರು ತಾವು ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಪಡೆದ ಉಚಿತ ಬಸ್ ಟಿಕೆಟ್‌ಗಳನ್ನೆಲ್ಲಾ ಕೂಡಿಟ್ಟು, ಜೋಡಿಸಿ ಸುಂದರವಾದ ಹಾರ ತಯಾರಿಸಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಹಾಕಿ ಧನ್ಯವಾದ ತಿಳಿಸಿದ್ದಾರೆ. ಈ ವಿನೂತನವಾದ ಕೃತಜ್ಞತೆಗೆ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ. ʻʻಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಶಃ ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ..? ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನನ್ನ ಕಡೆ ಏದುಸಿರುಬಿಡುತ್ತಾ ಓಡೋಡಿ ಬಂದ ಕಾನೂನು ವಿದ್ಯಾರ್ಥಿನಿ ಜಯಶ್ರೀ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಗಳಲ್ಲಿಯೇ ಮಾಡಿಟ್ಟಿದ್ದ ಮಾಲೆಯನ್ನು ತಂದು ಹಾಕಿ ಕೃತಜ್ಞತೆ ಹೇಳಿದಳುʼʼ ಎಂದು ಪೋಸ್ಟ್‌ ಮಾಡಿದ್ದಾರೆ.

ʻʻನೀವು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ಕಾನೂನು ವ್ಯಾಸಂಗವನ್ನು ಸುಗಮವಾಗಿ ನಡೆಸುವಂತಾಗಿದೆ. ಎಂದಾದರೂ ನೀವು ಸಿಕ್ಕರೆ ಮಾಲೆ ಮಾಡಿ ಹಾಕಬೇಕೆಂದು ಉಚಿತ ಟಿಕೆಟ್ ಗಳನ್ನು ಸಂಗ್ರಹಿಸಿಟ್ಟಿದ್ದೆ. ನೀವು ಇಲ್ಲಿ ಬರುವುದು ಗೊತ್ತಾಗಿ ಅವುಗಳನ್ನು ಮಾಲೆ ಕಟ್ಟಿ ತಂದೆ ಎಂದು ಹೇಳಿದ ಅವಳ ಮಾತುಗಳಲ್ಲಿ ಕೃತಜ್ಞತೆಯೂ ಇತ್ತು, ಸರ್ಕಾರದ ಬಗ್ಗೆ ಹೆಮ್ಮೆಯೂ ಇತ್ತುʼʼ ಎಂದು ಜಯಶ್ರೀ ಮಾತುಗಳನ್ನು ಮತ್ತು ಹಾರದ ಪೋಟೋಗಳನ್ನು ಸಿದ್ದರಾಮಯ್ಯ ಶೇರ್ ಮಾಡಿದ್ದಾರೆ.

ಮುಂದುವರಿದು, ʻʻಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪ ಮಾಡುವ ʼದಾರಿ ತಪ್ಪಿದʼ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು ಎಂದು ಹಾರೈಸಿದೆʼʼ ಎಂದು ಪರೋಕ್ಷವಾಗಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ತಿವಿದಿದ್ದಾರೆ.

Read More
Next Story