Mysuru Dasara-2024 | ಅದ್ಧೂರಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
x
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಸಿಎಂ ಸಿದ್ದರಾಮಯ್ಯ, ಸಚಿವರು ಹಾಗೂ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು

Mysuru Dasara-2024 | ಅದ್ಧೂರಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಅರಮನೆಯ ರಾಜಪಥದಲ್ಲಿ ಸಂಜೆ 5.05ಕ್ಕೆ ಚಿನ್ನದ ಅಂಬಾರಿ ಹೊತ್ತ ಗಜೆಪಡೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿಗೆ ಪುರ್ಪಾರ್ಚನೆ ಸಲ್ಲಿಸಿದರು.


ಸಾಂಸ್ಕೃತಿಕ ನಗರಿಯ ನಾಲ್ಕೂ ದಿಕ್ಕುಗಳಲ್ಲಿ ಶನಿವಾರ ವಿಜಯದಶಮಿ ಸಂಭ್ರಮ ಅನುರಣಿಸಿತು. ವಿಜಯದಶಮಿಯ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊತ್ತ ಜಂಬೂ ಸವಾರಿ ಮೆರವಣಿಗೆಯು ಅರಮನೆ ನಗರಿಗೆ ಲಕ್ಷಾಂತರ ಜನರನ್ನು ಆಯಸ್ಕಾಂತದಂತೆ ಸೆಳೆಯಿತು. ದೇಶ ಹಾಗೂ ವಿವಿಧ ರಾಜ್ಯಗಳಿಂದ ಬಂದಿರುವ ಲಕ್ಷಾಂತರ ಜನರು ಚಿನ್ನದ ಅಂಬಾರಿ ಹೊತ್ತ ಜಂಬೂ ಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಚಾಮುಂಡೇಶ್ವರಿ ದೇವಿಯ ಮೂರ್ತಿ ಇದ್ದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜ ಹಾಕಿತು.

ಅರಮನೆಯ ರಾಜಪಥದಲ್ಲಿ ಸಂಜೆ 5.05ಕ್ಕೆ ಚಿನ್ನದ ಅಂಬಾರಿ ಹೊತ್ತ ಗಜೆಪಡೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿಗೆ ಪುರ್ಪಾರ್ಚನೆ ಸಲ್ಲಿಸಿದರು. ಮುಖ್ಯಮಂತ್ರಿ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ , ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಪುಷ್ಪಾರ್ಚನೆ ಮಾಡಿದರು. ಬಳಿಕ ನಾಡಗೀತೆ ಹಾಡಲಾಯಿತು. ಪೊಲೀಸ್ ತುಕಡಿ 21 ಸುತ್ತು ಗುಂಡು ಹಾರಿಸಿ, ಗೌರವ ಸಲ್ಲಿಸಿದರು.

ಚಿನ್ನದ ಅಂಬಾರಿ ಹೊತ್ತ ಅಭಿಮನ್ಯುವಿಗೆ ಕುಮ್ಮಿ ಆನೆಗಳಾಗಿ ಎಡಭಾಗದಲ್ಲಿ ಲಕ್ಷ್ಮಿ ಹಾಗೂ ಬಲಭಾಗದಲ್ಲಿ ಹಿರಣ್ಯ ಹೆಜ್ಜೆಹಾಕಿದವು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಿದರೆ, ಉಳಿದವು ಸಾಲಾನೆಗಳಾಗಿ ಮೆರವಣಿಗೆಯಲ್ಲಿ ಸಾಗಿದವು.

ಜಂಬೂ ಸವಾರಿ ಸಾಗಿದ ಮಾರ್ಗದ ಉದ್ದಕ್ಕೂ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕಿಕ್ಕಿರಿದು ತುಂಬಿದ್ದ ಜನಸಾಗರ ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ. ವಿಜಯದಶಮಿಯು ದಸರಾ ಉತ್ಸವದ ಕೊನೆಯ ದಿನವಾಗಿದ್ದು, ನಾಡಿನ ಹಾಗೂ ದೇಶದ ಜನರಿಗೆ ದಸರಾ ಉತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದರು.

ಈ ಬಾರಿನಲ್ಲಿ ಉತ್ತಮ ಮಳೆ ಹಾಗೂ ಬೆಳೆಯಾಗಿದ್ದು, ನಾಡಿನ ರೈತರಲ್ಲಿ ಸಂತಸ ಮನೆ ಮಾಡಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿರುವುದು ಸಂತಸದ ವಿಚಾರ. ರಾಜ್ಯದಲ್ಲಿ ಅಶಾಂತಿ ಮೂಡಿಸಿ, ಬದುಕುಗಳನ್ನು ಹಾಳುಮಾಡಲು ಸಂಚು ರೂಪಿಸುವವರಿಗೆ ದೇವರು ಸದ್ಭುದ್ಧಿ ನೀಡಲಿ ಎಂದು ಕೋರಿದರು.

ಗಮನ ಸೆಳೆದ ಸ್ತಬ್ಧಚಿತ್ರ ಮೆರವಣಿಗೆ

ಜಂಬೂ ಸವಾರಿ ಮೆರವಣಿಗೆಗೂ ಮುನ್ನ 51 ಸ್ತಬ್ಧ ಚಿತ್ರಗಳ ಮೆರವಣಿಗೆ, ಜನಪದಾ ಕಲಾತಂಡಗಳ ನೃತ್ಯ, ಡೋಲುಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಸಂಭ್ರಮದ ರಸದೌತಣ ಉಣ ಬಡಿಸಿದವು. ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಸಾಧನೆಗಳ ಜೊತೆಗೆ ಸ್ವಾತಂತ್ರ್ಯಪೂರ್ವ-ನಂತರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತ ಸ್ತಬ್ಧಚಿತ್ರಗಳು ಭಾಗವಹಿಸಿ ಗಮನ ಸೆಳೆದವು.

ಕರ್ನಾಟಕ ರೇಷ್ಮೆ ಉದ್ಯಮ ನಿಗಮ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಸ್ತಬ್ಧಚಿತ್ರ ಸೇರಿದಂತೆ ಎಲ್ಲ 31 ಜಿಲ್ಲೆಗಳಿಂದಲೂ ಪ್ರಾತಿನಿಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.

ಇನ್ನು ದಸರಾ ಪ್ರಯುಕ್ತ ಇಡೀ ಮೈಸೂರು ಅಲಂಕಾರಿಕ ದೀಪಗಳಿಂದ ಕಂಗೊಳಿಸುತ್ತಿತ್ತು. ನಗರದ ಪ್ರಮುಖ ವೃತ್ತ, ರಸ್ತೆ, ಕಟ್ಟಡ ಹಾಗೂ ಅರಮನೆಯನ್ನು ಅಂದಾಜು 1 ಲಕ್ಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಮರವಣಿಗೆ ಮಾರ್ಗ ಬದಲಾವಣೆ

ಈ ಬಾರಿ ಜಿಲ್ಲಾಡಳಿತ ಜಂಬೂ ಸವಾರಿ ಮಾರ್ಗವನ್ನು ಬದಲಾವಣೆ ಮಾಡಿತ್ತು. ಆ ಮೂಲಕ ಜಿಲ್ಲಾಡಳಿತ ಅರಮನೆ ಆವರಣದಲ್ಲಿ ಹೊಸ ಸಂಪ್ರದಾಯ ಆರಂಭಿಸಿತು. ಪ್ರತಿ ಬಾರಿ ಅಂಬಾರಿ ಕಟ್ಟಿದ ನಂತರ ಅಂಬಾರಿ ಆನೆ ನೇರವಾಗಿ ಪುಷ್ಪಾರ್ಚನೆಗೆ ನಿಲ್ಲುತ್ತಿತ್ತು. ಆದರೆ ಈ ಬಾರಿ ಪುಷ್ಪಾರ್ಚನೆಗೆ ಮೊದಲೇ ಸುಮಾರು 400 ಮೀ. ಅಂಬಾರಿ ಸಂಚಾರ ಮಾಡುವಂತೆ ಯೋಜಿಸಲಾಗಿತ್ತು. ಅಂಬಾರಿ ಕಟ್ಟಿದ ನಂತರ ಅಭಿಮನ್ಯು ಆನೆ ತ್ರಿನಯನೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಶ್ವೇತ ವರಾಹ ದೇವಸ್ಥಾನಕ್ಕೆ ಹೋಗಿ ನಂತರ ಗಣ್ಯರ ಬಳಿ ಬಂದು ನಿಂತಿತು. ಹೀಗಾಗಿ ಗಣ್ಯರ ಪುಷ್ಪಾರ್ಚನೆಗೆ ಮುನ್ನವೇ ಅಂಬಾರಿಯಲ್ಲಿ ಚಾಮುಂಡೇಶ್ವರಿ ದರ್ಶನ ದೊರೆಯಿತು.

ಮೆರವಣಿಗೆಗೆ ಸಾಕ್ಷಿಯಾದ ಎರಡು ಲಕ್ಷ ಜನ

ಅ.3ರಿಂದ ಅ. 11ರವರೆಗೆ ಮೈಸೂರು ದಸರಾ ಸಂಭ್ರಮ ಕಣ್ಣುಂಬಿಕೊಳ್ಳಲು ನಾಲ್ಕು ಲಕ್ಷ ಜನರು ಭೇಟಿ ನೀಡಿರುವುದು ದಾಖಲಾಗಿದೆ. ವಿಜಯದಶಮಿ ದಿನವಾದ ಶನಿವಾರ ಜಂಬೂ ಸವಾರಿ ವೀಕ್ಷಣೆಗೆ 2 ಲಕ್ಷ ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ. ಮೈಸೂರಿನ ವಸತಿಗೃಹಗಳು, ಹೋಟೆಲ್ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಜೊತೆಗೆ ಮೈಸೂರು ಆಸುಪಾಸಿನ ಪ್ರವಾಸಿ ತಾಣಗಳಲ್ಲೂ ಜನಜಂಗುಳಿ ಕಂಡುಬರುತ್ತಿದೆ. ಪ್ರವಾಸಿಗರಿಂದಾಗಿ ನವರಾತ್ರಿ ಅವಧಿಯಲ್ಲಿ ಮೈಸೂರಿನ ಹೋಟೆಲ್, ಸಾರಿಗೆ, ವಸತಿಗೃಹಗಳು ಒಟ್ಟು 200 ಕೋಟಿ ಆದಾಯ ಗಳಿಸಿವೆ ಎಂದು ಅಂದಾಜಿಸಲಾಗಿದೆ.

Read More
Next Story