ಮನೆಗೆ ನುಗ್ಗಿ ಮಹಿಳೆಯ ಕೊಲೆ, ಮಾಂಗಲ್ಯ ಸರ ಎಗರಿಸಿದ ದುಷ್ಕರ್ಮಿಗಳು
x

ಕೊಲೆಯಾದ ಮಹಿಳೆ ಶ್ರೀಲಕ್ಷ್ಮೀ

ಮನೆಗೆ ನುಗ್ಗಿ ಮಹಿಳೆಯ ಕೊಲೆ, ಮಾಂಗಲ್ಯ ಸರ ಎಗರಿಸಿದ ದುಷ್ಕರ್ಮಿಗಳು

ಟಿವಿ ರಿಪೇರಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತರು ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆಗೈದು, ಅವರ ಮೈಮೇಲಿದ್ದ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.


ರಾಜಧಾನಿಯಲ್ಲಿ ಅಪರಾಧ ಚಟುವಟಿಕೆಗಳು ಮುಂದುವರಿದಿದ್ದು, ಟಿವಿ ರಿಪೇರಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತರು ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆಗೈದು, ಅವರ ಮೈಮೇಲಿದ್ದ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

ಉತ್ತರಹಳ್ಳಿಯ ನ್ಯೂ ಮಿಲೇನಿಯಮ್ ಸ್ಕೂಲ್ ರಸ್ತೆಯ 'ಶ್ರೀನಿಲಯ' ನಿವಾಸಿಯಾಗಿದ್ದ ಶ್ರೀಲಕ್ಷ್ಮೀ ಕೊಲೆಯಾದ ದುರ್ದೈವಿ. ಅವರ ಪತಿ ಶ್ರೀ ಅಶ್ವತ್ಥ್ ನಾರಾಯಣ ಅವರು ಮಂಗಳವಾರ (ನ. 4) ಎಂದಿನಂತೆ ಬೆಳಿಗ್ಗೆ 9.30ಕ್ಕೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 2.15ರ ಸಮಯದಲ್ಲಿ ಪತ್ನಿ ಶ್ರೀಲಕ್ಷ್ಮೀ ಅವರಿಗೆ ಕರೆ ಮಾಡಿದಾಗ, ಅವರು ಕರೆ ಸ್ವೀಕರಿಸಿರಲಿಲ್ಲ.

ಸಂಜೆ 5.30ರ ಸುಮಾರಿಗೆ, ಅದೇ ಮನೆಯಲ್ಲಿ ಬಾಡಿಗೆಗಿದ್ದ ಪಣಿರಾಜ್ ಎಂಬುವವರಿಗೆ ಕರೆ ಮಾಡಿ, "ನನ್ನ ಪತ್ನಿ ಫೋನ್ ತೆಗೆಯುತ್ತಿಲ್ಲ, ಒಮ್ಮೆ ಹೋಗಿ ನೋಡಿ" ಎಂದು ಅಶ್ವತ್ಥ್ ನಾರಾಯಣ ಅವರು ತಿಳಿಸಿದ್ದಾರೆ. ಆಗ ತಾನೂ ಹೊರಗಡೆ ಇರುವುದಾಗಿ ಹೇಳಿದ ಪಣಿರಾಜ್, ತನ್ನ ಪತ್ನಿಗೆ ತಿಳಿಸುವುದಾಗಿ ಹೇಳಿದ್ದಾರೆ. ಸಂಜೆ 6 ಗಂಟೆಗೆ ಮತ್ತೆ ಕರೆ ಮಾಡಿದ ಪಣಿರಾಜ್, "ನಿಮ್ಮ ಪತ್ನಿ ನೆಲದ ಮೇಲೆ ಬಿದ್ದಿದ್ದು, ಉಸಿರಾಡುತ್ತಿಲ್ಲ" ಎಂದು ತಿಳಿಸಿದ್ದಾರೆ.

ಕೊಲೆ ಮತ್ತು ದರೋಡೆ

ತಕ್ಷಣ ಮನೆಗೆ ದೌಡಾಯಿಸಿದ ಅಶ್ವತ್ಥ್ ನಾರಾಯಣ ಅವರು, ಪತ್ನಿ ಶ್ರೀಲಕ್ಷ್ಮೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪಕ್ಕದ ಮನೆಯವರ ಸಹಾಯದಿಂದ ಅವರನ್ನು ಹಾಸಿಗೆಯ ಮೇಲೆ ಮಲಗಿಸಿದ್ದಾರೆ. ಆ ಸಮಯದಲ್ಲಿ, ಶ್ರೀಲಕ್ಷ್ಮೀಯ ಕುತ್ತಿಗೆಯ ಬಲಭಾಗ, ತುಟಿ ಮತ್ತು ಮುಖದ ಮೇಲೆ ಗಾಯಗಳಾಗಿರುವುದು ಕಂಡುಬಂದಿದೆ. ಅಲ್ಲದೆ, ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ನಾಪತ್ತೆಯಾಗಿತ್ತು.

ಟಿವಿ ಚೆಕ್ ಮಾಡುವ ನೆಪ

ಪರಿಚಯಸ್ಥರಂತೆ ನಟಿಸಿ, ಟಿವಿ ಚೆಕ್ ಮಾಡುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಅವರು ಶ್ರೀಲಕ್ಷ್ಮೀಯನ್ನು ಕೊಲೆ ಮಾಡಿ, ಮಾಂಗಲ್ಯ ಸರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪತಿ ಅಶ್ವತ್ಥ್ ನಾರಾಯಣ ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Read More
Next Story