
ಶವ ಸಂಸ್ಕಾರಕ್ಕೂ ಬಿಡದೆ ಮೃತದೇಹ ಎಳೆದೊಯ್ಯಲು ಯತ್ನಿಸಿದ ನರಭಕ್ಷಕ ಚಿರತೆ!
ಚಿರತೆ ದಾಳಿಯಿಂದ ಮೃತಪಟ್ಟಿದ್ದ ಮಹಿಳೆಯ ಶವಕ್ಕೆ ಅಗ್ನಿಸ್ಪರ್ಶ ಮಾಡುವ ಸಮಯದಲ್ಲಿ ಮತ್ತೆ ದಾಳಿ ನಡೆಸಿದ ನರಭಕ್ಷಕ, ಮೃತದೇಹ ಎಳೆದೊಯ್ಯಲು ಯತ್ನಿಸಿದ ಘಟನೆ ದಾಬಸ್‌ಪೇಟೆ ಸಮೀಪ ನಡೆದಿದೆ.
ದಾಳಿ ನಡೆಸಿ ಮಹಿಳೆಯನ್ನು ಸಾಯಿಸಿದ್ದ ಚಿರತೆ, ಮಹಿಳೆಯ ಶವ ಸಂಸ್ಕಾರದ ವೇಳೆಯೂ ಹಿಂಬಾಲಿಸಿ, ಮೃತ ದೇಹ ಹೊತ್ತೊಯ್ಯಲು ಯತ್ನಿಸಿ ಆಘಾತಕಾರಿ ಘಟನೆ ಡಾಬಸ್‌ಪೇಟೆ ಸಮೀಪದ ಕಂಬಾಳು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಭಾನುವಾರ ಸಂಜೆ ಗೊಲ್ಲರಹಟ್ಟಿ ನಿವಾಸಿ ಕರಿಯಮ್ಮ ಎಂಬುವರು ಜಾನುವಾರುಗಳಿಗೆ ಮೇವು ತರಲು ಮನೆ ಸಮೀಪದ ಬೆಟ್ಟಕ್ಕೆ ಹೋಗಿದ್ದಾಗ ಚಿರತೆ ದಾಳಿ ನಡೆಸಿ, ಬೆನ್ನಿನ ಮೇಲ್ಭಾಗ ಹಾಗೂ ರುಂಡವನ್ನು ತಿಂದು ಹಾಕಿತ್ತು. ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರೊಂದಿಗೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೆಟ್ಟದ ಮೇಲೆ ರಂಡವಿಲ್ಲದ ಮಹಿಳೆಯ ಮೃತದೇವನ್ನು ತಂದು ಮರಣೋತ್ತರ ಪರೀಕ್ಷೆಗೆ ನೀಡಿದ್ದರು.
ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ರುಂಡವಿಲ್ಲದ ಮೃತದೇಹವನ್ನು ಹೂಳುವ ಬದಲು ಅಗ್ನಿಸ್ಪರ್ಶ ಮಾಡಲು ಗ್ರಾಮಸ್ಥರು ಗೊಲ್ಲರಹಟ್ಟಿ ಹೊರವಲಯದಲ್ಲಿ ಸಿದ್ಧತೆ ನಡೆಸಿದ್ದರು. ರಾತ್ರಿ ವೇಳೆ ಶವವನ್ನು ಬೆಟ್ಟದ ಸಮೀಪದಲ್ಲಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದದಾಗ, ಅಲ್ಲಿಗೂ ಹಿಂಬಾಲಿಸಿ ಬಂದಿದ್ದ ನರಹಂತಕ ಚಿರತೆ ಮತ್ತೆ ದಾಳಿ ಮಾಡಿ, ಮೃತ ದೇಹವನ್ನು ಹೊತ್ತೊಯ್ಯಲು ಯತ್ನಿಸಿದೆ.
ಸ್ಥಳದಲ್ಲಿದ್ದ ಪೊಲೀಸರು ಹಾಗೂ ಗ್ರಾಮಸ್ಥರು ದೊಣ್ಣೆ, ಕಲ್ಲುಗಳಿಂದ ಹೆದರಿಸಿದರೂ ಬೆದರದೆ ಚಿರತೆ ಜನರ ಮೇಲೆ ದಾಳಿ ನಡೆಸಿ ಮೃತದೇಹ ಎಳೆದೊಯ್ಯಲು ಪ್ರಯತ್ನಿಸಿತು. ಗ್ರಾಮಸ್ಥರು ಟಾರ್ಚ್ ಬಳಸಿ, ದೊಣ್ಣೆಗಳಿಂದ ಮೃತದೇಹವನ್ನು ಚಿರತೆಯಿಂದ ಬಿಡಿಸಿಕೊಂಡರು. ಆ ಬಳಿಕ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
ಚಿರತೆ ಸೆರೆಗೆ ಗ್ರಾಮಸ್ಥರ ಒತ್ತಾಯ
ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ವಿಪರೀತವಾಗಿದ್ದು, ಜಾನುವಾರುಗಳು ಬಲಿಯಾಗುತ್ತಿದ್ದವು. ಈಗ ಮನುಷ್ಯರನ್ನೇ ಕೊಂದು ಹಾಕಿರುವುದರಿಂದ ಆತಂಕ ಹೆಚ್ಚಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಲೆಮಾರುಗಳಿಂದ ಕಂಬಾಳು ಗೊಲ್ಲರಹಟ್ಟಿಯಲ್ಲೇ ವಾಸ ಮಾಡುತ್ತಿದ್ದೇವೆ. ಚಿರತೆಗಳಿಂದ ನಮಗೆ ಸೂಕ್ತ ರಕ್ಷಣೆ ಇಲ್ಲ. ಚಿರತೆಯ ಉಪಟಳ ಹೆಚ್ಚಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಕಾರಣ ಪ್ರಾಣಹಾನಿಯಾಗುತ್ತಿದೆ. ಬಹಳಷ್ಟು ಪ್ರಕರಣಗಳಲ್ಲಿ ಈವರೆಗೂ ಪರಿಹಾರವನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.