ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್: ಆರೋಪಿ ಬಂಧನ
ಇತ್ತೀಚೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಇದೀಗ ನುಸುಳುಕೋರರಿಗೆ ನಕಲಿ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ ಬೆನ್ನಲ್ಲೇ, ಇದೀಗ ಪೊಲೀಸರು, ನುಸುಳುಕೋರರಿಗೆ ನಕಲಿ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಅರ್ನಾಬ್ ಮಂಡಲ್ ಎಂದು ತಿಳಿದುಬಂದಿದ್ದು, ಈತ ಮೂಲತಃ ಪಶ್ಚಿಮ ಬಂಗಾಳದವನು ಎನ್ನಲಾಗಿದೆ.
ರಾಜ್ಯದಲ್ಲಿ ಅಕ್ರಮವಾಗಿ ನೆಲಿಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿರುವ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶ ಪ್ರಜೆಗಳ ಬೆನ್ನು ಬಿದ್ದಿದ್ದಾರೆ. ಈಗಾಗಲೇ ಬಂಧಿತರಾಗಿರುವ ಬಾಂಗ್ಲಾದೇಶ ಪ್ರಜೆಗಳ ಬಳಿ ಭಾರತದ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮತ್ತು ಈ ಎಲ್ಲ ನಕಲಿ ಗುರುತಿನ ಚೀಟಿಗಳು ಪಶ್ಚಿಮ ಬಂಗಾಳ ವಿಳಾಸದ್ದಾಗಿದ್ದವು.
ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು, ಅರ್ನಾಬ್ ಮಂಡಲ್ ನಡೆಯುತ್ತಿರುವ ಅಕ್ರಮ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಗುರುವಾರ ಆತನ ಸೈಬರ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಸಾಕಷ್ಟು ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿವೆ. ಹಾಗೆಯೇ 18 ಮನೆಗಳ ಬಾಡಿಗೆ ಅಗ್ರಿಮೆಂಟ್ ಪತ್ತೆಯಾಗಿವೆ.
ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಅರ್ನಾಬ್ ಮಂಡಲ್ 8 ಸಾವಿರ ರೂ.ಗೆ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಈತ ಕಳೆದ ಒಂದು ವರ್ಷಗಳಿಂದ ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿದ್ದನು. 18 ಮನೆಗೆ ಸಂಬಂಧಿಸಿದ ಲೀಸ್ ಅಗ್ರಿಮೆಂಟ್, 55 ಆಧಾರ್ ಕಾರ್ಡ್, 40 ಬ್ಯಾಂಕ್ ದಾಖಲಾತಿ, 2 ಕಂಪ್ಯೂಟರ್, 2 ಮೊಬೈಲ್ ಜಪ್ತಿ ಮಾಡಲಾಗಿದೆ. ಒಂದು ಕಾರ್ಡ್ ಮಾಡಿಕೊಡಲು 8 ಸಾವಿರದಿಂದ 10 ಸಾವಿರ ರೂ. ಪಡೆಯುತ್ತಿದ್ದನು. ನಕಲಿ ಐಡಿ ಕಾರ್ಡ್ಗಳ ದಂಧೆಯಲ್ಲಿ ಇನ್ನೂ ಹಲವರು ಶಾಮೀಲಾಗಿದ್ದಾರೆ. ನಕಲಿ ಐಡಿ ಕಾರ್ಡ್ಗಳ ದಂಧೆ ಬಗ್ಗೆ ತನಿಖೆ ನಡೆಯುತ್ತಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲಸಿದ್ದ ನಾಲ್ವರು ಬಾಂಗ್ಲಾದೇಶ ಪ್ರಜೆಗಳನ್ನು ಇದೇ ವರ್ಷ ಎಪ್ರಿಲ್‌ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅವರ ಬಳಿ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಕಾರ್ಮಿಕ ಕಾರ್ಡ್, ವೋಟರ್ ಐಡಿ ಪತ್ತೆಯಾಗಿದ್ದವು.
ಅಕ್ಟೋಬರ್ ತಿಂಗಳಲ್ಲಿ ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂಬತ್ತು ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಾಂಗ್ಲಾದೇಶಿಗರು ಮೀನುಗಾರಿಕಾ ಕಾರ್ಮಿಕರಾಗಿ ಉಡುಪಿಯ ಮಲ್ಪೆಯಲ್ಲಿ ನೆಲೆಸಿದ್ದರು. ಈ ಒಂಬತ್ತು ಮಂದಿ ಬಳಿ ನಕಲಿ ಭಾರತೀಯ ದಾಖಲೆಗಳು ಪತ್ತೆಯಾಗಿದ್ದವು. ಆ ಬಳಿಕ ಶಿವಮೊಗ್ಗದ ಜಯನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಏಳು ಮಂದಿ ಬಾಂಗ್ಲಾ ದೇಶಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಏಳು ಜನರ ಬಳಿ ಮಂಗಳೂರು ವಿಳಾಸದ ಗುರುತಿನ ಚೀಟಿಗಳು ಪತ್ತೆಯಾಗಿದ್ದವು.
ಚಿತ್ರದುರ್ಗದ ಖಾಸಗಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಂಧಿತ ಎಲ್ಲಾ ಬಾಂಗ್ಲಾ ಪ್ರಜೆಗಳಲ್ಲಿ ನಕಲಿ ಗುರುತಿನ ಚೀಟಿ ಪತ್ತೆಯಾಗಿತ್ತು.