ವಿಧಾನ ಪರಿಷತ್ ಸದಸ್ಯರ ಹೆಸರಲ್ಲಿ ವಿಷಪೂರಿತ ಸಿಹಿ ಉಡುಗೊರೆ!
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಲೆಟರ್ ಹೆಡ್ ನೊಂದಿಗೆ ಶಿವಮೊಗ್ಗದ ಮೂವರಿಗೆ ವಿಷಪೂರಿತ ಸ್ವೀಟ್ ಬಾಕ್ಸ್ ತಲುಪಿದ್ದು, ಕಿಡಿಗೇಡಿಗಳ ಕೃತ್ಯದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಗಣ್ಯರಿಗೆ ವಿಷ ಮಿಶ್ರಿತ ಸಿಹಿಯನ್ನು ಹೊಸವರ್ಷ ಉಡುಗೊರೆಯಾಗಿ ಕಳುಹಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆ ಕಾರ್ಯದರ್ಶಿ ನಾಗರಾಜ್, ಮನೋವೈದ್ಯ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ವಿಧಾನ ಪರಿಷತ್ ಸದಸ್ಯರ ಹೆಸರಿನಲ್ಲಿ ಕೊರಿಯರ್ ಮೂಲಕ ಸಿಹಿತಿಂಡಿ ಬಾಕ್ಸ್ ಕಳುಹಿಸಲಾಗಿದೆ. ಡಾ. ಧನಂಜಯ ಸರ್ಜಿ ಅವರು ಯಾವುದೇ ಉಡುಗೊರೆ ಕಳುಹಿಸಿಲ್ಲ ಎಂದು ಹೇಳಿದ ಬಳಿಕ ದುಷ್ಕರ್ಮಿಗಳ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರು ಪೊಲೀಸರಿಗೆ ದೂರು ನೀಡಿದ್ದು, ಸ್ವೀಟ್ ಬಾಕ್ಸ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಲೆಟರ್ ಹೆಡ್ ನೊಂದಿಗೆ ಸಿಹಿತಿಂಡಿ ಪೊಟ್ಟಣ ಭದ್ರಾವತಿಯಿಂದ ಡಿಟಿಡಿಸಿ ಕೊರಿಯರ್ ಮೂಲಕ ಮೂವರಿಗೆ ತಲುಪಿದೆ. ಇವರಲ್ಲಿಒಬ್ಬರಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಅವರು ಸಿಹಿಯನ್ನು ಬಾಯಿಗೆ ಹಾಕಿಕೊಂಡಾಗ ಕಹಿ ಅನಿಸಿದೆ. ಕೂಡಲೇ ಧನಂಜಯ ಸರ್ಜಿ ಅವರಿಗೆ ಕರೆ ಮಾಡಿ, ಹೊಸ ವರ್ಷಕ್ಕೆ ತಾವು ಕಳುಹಿಸಿದ ಸ್ವೀಟ್ ಬಾಕ್ಸ್ ತಲುಪಿದೆ. ಆದರೆ, ಸಿಹಿ ಪದಾರ್ಥ ಕಹಿಯಾಗಿದೆ ಎಂದಿದ್ದಾರೆ. ಆಗ ಧನಂಜಯ ಸರ್ಜಿ ಅವರು ನಾನು ಯಾವುದೇ ಸ್ವೀಟ್ ಬಾಕ್ಸ್ ಕಳುಹಿಸಿಲ್ಲ ಎಂದಾಗ ಅನುಮಾನ ಮೂಡಿದೆ. ಇದೇ ರೀತಿ ಡಾ. ಅರವಿಂದ್ ಹಾಗೂ ಡಾ.ಪವಿತ್ರಾ ಅವರೂ ಕೂಡ ತಿಳಿಸಿದಾಗ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಯೋಗಾಲಯಕ್ಕೆ ಸ್ವೀಟ್ ಬಾಕ್ಸ್
ದುಷ್ಕರ್ಮಿಗಳು ಕಳುಹಿಸಿದ್ದ ಸ್ವೀಟ್ ಬಾಕ್ಸ್ ಅನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಹಿಯಲ್ಲಿ ವಿಷಪೂರಿತ ದ್ರವ ಬಳಸಿರುವ ಅನುಮಾನಗಳಿದ್ದು. ವರದಿ ಬಳಿಕ ಸತ್ಯಾಂಶ ಬಯಲಾಗಲಿದೆ. ಇನ್ನು ಅನಾಮಧೇಯರ ವಿರುದ್ಧ ವಿಧಾನ ಪರಿಷತ್ ಸದಸ್ಯ ನೀಡಿರುವ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸ್ವೀಟ್ ಬಾಕ್ಸ್‌ನಲ್ಲಿ ಏನೆಲ್ಲಾ ಇತ್ತು?
ಸ್ವೀಟ್ ಬಾಕ್ಸ್‌ನಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರು, ಭಾವಚಿತ್ರ ಮುದ್ರಿಸಿರುವ ಪತ್ರ ಕಂಡುಬಂದಿದೆ. ಮೋತಿಚೂರ್ ಲಾಡುಗಳಿದ್ದವು. ಅಲ್ಲದೇ ಹೊಸ ವರ್ಷಕ್ಕೆ ಶುಭಾಶಯ ಸಲ್ಲಿಸಿದ ಸಂದೇಶದ ಪತ್ರವಿತ್ತು. ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರು, ನನ್ನ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸ್ವೀಟ್ ಬಾಕ್ಸ್ ಮಕ್ಕಳಿಗೆ ಸಿಕ್ಕಿದ್ದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ನನಗೆ ಒಂದು ಕೊರಿಯರ್ ಬಂದಿದೆ ಎಂದು ಕಚೇರಿ ಸಹಾಯಕರು ಬಾಕ್ಸ್ ನೀಡಿದರು. ಅದನ್ನು ಮನೆಗೆ ತೆಗೆದುಕೊಂಡು ಹೋಗಿ ನೋಡಿದಾಗ ಅದು ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಹೊಸ ವರ್ಷದ ಶುಭಾಶಯ ಕೋರಿ ಬಂದಿದ್ದ ಬಾಕ್ಸ್ ಆಗಿತ್ತು. ಬಾಕ್ಸ್ನಲ್ಲಿ ಮೋತಿಚೂರ್ ಲಾಡು ಇತ್ತು. ನಾನು ಈ ಲಾಡುವನ್ನು ಸ್ವಲ್ಪ ತಿಂದಾಗ ಕಹಿ ಅನ್ನಿಸಿತು. ನಂತರ ಸರ್ಜಿ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.