Lalbagh Flower Show | ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅರಳಿದ ಹೂವಿನ ಲೋಕ
ಈ ಬಾರಿ ರಾಮಾಯಣದ ರಚನೆಕಾರ ಮಹರ್ಷಿ ವಾಲ್ಮೀಕಿ ಅವರ ಜೀವನಾಧಾರಿತ ಫಲಪುಪ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ 217 ನೇ ಫಲಫುಪ್ಪ ಪ್ರದರ್ಶನ ನಡೆಯುತ್ತಿದೆ.
ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ಒಂದೊಂದು ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಆಯೋಜನೆ ಮಾಡುತ್ತದೆ. ಅದರಂತೆ ಈ ಬಾರಿ ರಾಮಾಯಣದ ರಚನೆಕಾರ ಮಹರ್ಷಿ ವಾಲ್ಮೀಕಿ ಅವರ ಜೀವನಾಧಾರಿತ ಫಲಪುಪ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಈ ಫಲಪುಪ್ಪ ಪ್ರದರ್ಶನದಲ್ಲಿ ಹೂವಿನ ಕಲಾಕೃತಿಗಳೇ ಮೇಳೈಯಿಸಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಈ ʼಹೂವಿನ ಲೋಕʼದಲ್ಲಿ ವಿಹರಿಸುತ್ತಾ, ಅಂದದ ಹೂವುಗಳು, ಹೂವಿನ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಬೃಹತ್ ಹುತ್ತದ ಕಲಾಕೃತಿ ಆಕರ್ಷಣೆ
ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ರಾಮಾಯಣದ ಕೆಲ ಸನ್ನಿವೇಶಗಳು, ವಾಲ್ಮೀಕಿ ಮಹರ್ಷಿ, ಆಶ್ರಮ, ಹುತ್ತ, ಜಟಾಯು ಪಕ್ಷಿ, ರಾಮಾಯಣ ಮಹಾಕಾವ್ಯ ಕೃತಿಯ ಪ್ರತಿಕೃತಿ, ರಾಮಾಯಣ ಬರೆಯಲು ಕುಳಿತಿರುವ ದೃಶ್ಯ, ತಪಸ್ಸಿಗಾಗಿ ಕೂತು ಅವರ ಸುತ್ತಲೂ ಹುತ್ತ ಬೆಳೆಯುವಷ್ಟು ಏಕಾಗ್ರತೆ ಮೂಡಿರುವ ಚಿತ್ರಣ,.. ಹೀಗೆ ನಾನಾ ಕಲಾಕೃತಿಗಳು ಹೂವಿನಿಂದ ಚಿತ್ತಾರಗೊಂಡಿದೆ.
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ ಕಲಾಕೃತಿಯ ಮಾದರಿ ನಿರ್ಮಿಸಲಾಗಿದೆ. ಈ ಕಲಾಕೃತಿಗೆ 1.50 ಲಕ್ಷ ಹೂವುಗಳನ್ನು ಬಳಸಲಾಗಿದೆ. ಇದು ಈ ಫಲಪುಪ್ಪ ಪ್ರದರ್ಶನದ ಬಹುಮುಖ್ಯ ಆಕರ್ಷಣೆಯಾಗಿದೆ. ರಾಮಾಯಣದ ಓಲೆಗರಿ ಹಸ್ತ ಪ್ರತಿಗಳ ಪ್ರದರ್ಶನದ ಮೂಲಕ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಕೂಡ ಇದೆ.
85ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂವುಗಳ ಬಳಕೆ
ಫಲಪುಷ್ಪ ಪ್ರದರ್ಶನಕ್ಕೆ 85ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂವುಗಳನ್ನು ಬಳಕೆ ಮಾಡಲಾಗಿದೆ. 30 ಲಕ್ಷ ಹೂವುಗಳನ್ನು ಈ ಫಲಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದ್ದು, ಈ ಹೂವುಗಳನ್ನು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ, ಊಟಿ ಹೀಗೆ ವಿವಿಧ ರಾಜ್ಯಗಳಿಂದ ತರಲಾಗಿದೆ. ಸೇವಂತಿಗೆ, ಗುಲಾಬಿ, ಆರ್ಕಿಡ್ಸ್ ವಿವಿಧ ವರ್ಣ ಪಾಯಿನ್ಸಿಟಿಯಾ, ಪೆಂಟಾಸ್ ಕಾರ್ನಿಯಾ ಬ್ರೋಮಿಲಿಯಾಯ್ದ, ಟ್ಯೂಬಿರೋಸ್‌ರೋಟೆಡ್ ಬಿಗೋನಿಯಾ, ಸಿಲೋಷಿಯಾ, ಸ್ವಾಟಿಸ್ ಮುಂತಾದ ಹೂವುಗಳನ್ನು ಬಳಸಲಾಗಿದೆ.
ಪ್ರಮುಖವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಗಿರಿಧಾಮಗಳಲ್ಲಿ ಬೆಳೆದ ಹೂವುಗಳ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಿಂದಲೂ ಹೂವುಗಳನ್ನು ತರಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೂ ಮುಂಚೆ ಒಂದು ತಿಂಗಳಿಂದಲೇ ಸಂಪೂರ್ಣ ತಯಾರಿ ನಡೆಸಲಾಗಿದ್ದು, ಸಾವಿರಕ್ಕೂ ಹೆಚ್ಚು ನುರಿತ ಸಿಬ್ಬಂದಿಗಳು, ಪರಿಣಿತರು ಈ ಹೂವಿನ ಕಲಾಕೃತಿಗಳನ್ನು ರಚಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ʻದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಔಷಧ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ
ಜನವರಿ 16ರಿಂದ ಜ.27 ರವರೆಗೆ ಈ ಪ್ರದರ್ಶನ ನಡೆಯುತ್ತಿದೆ. ಲಕ್ಷಕ್ಕೂ ಅಧಿಕ ಬಣ್ಣ ಬಣ್ಣದ ಹೂವುಗಳಲ್ಲಿ ರಾಮಾಯಣದ ಸನ್ನಿವೇಶಗಳು ಮೂಡಿಬಂದಿವೆ. ವಾಲ್ಮೀಕಿ, ರಾಮಾಯಣ ಮಾತ್ರವಲ್ಲದೆ, ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಕುವೆಂಪು, ಬಸವಣ್ಣರಂತಹ ಮಹನೀಯರ, ದೇಶದ ಪ್ರತಿಷ್ಠಿತ ಸ್ಮಾರಕಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ತೋಟಗಾರಿಕೆಗೆ ಪೂರಕವಾದ 150 ಮಳಿಗೆಗಳಿವೆ. ಹ್ಯಾಂಗಿಂಗ್ ಪಾಟ್‌ಗಳು, ವರ್ಟಿಕಲ್ ಗಾರ್ಡನ್, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಹೂ ಗಿಡಗಳು, ತರಕಾರಿ ಮತ್ತು ಔಷಧ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕೂಡ ಇದೆ ಎಂದು ಅವರು ತಿಳಿಸಿದರು.
ಬೋನ್ಸಾಯ್ ಗಿಡಗಳ ಪ್ರದರ್ಶನ
ಬೊನ್ಸಾಯ್ ಗಿಡಗಳು ಇತ್ತೀಚಿನ ಅಲಂಕಾರಿಕಾ ತೋಟಗಾರಿಕೆಯ ಒಂದು ಬಹುಮುಖ್ಯ ಕಲೆಯಾಗಿದೆ. ಹೀಗಾಗಿ ಬೊನ್ಸಾಯ್ ಉದ್ಯಾನವನಕ್ಕೆ ಒಂದು ಆಕರ್ಷಕ ರೂಪವನ್ನು ನೀಡಿ ಅದಕ್ಕೆ ಸಸ್ಯ ಪ್ರಭೇದಗಳನ್ನು ಜೋಡಿಸಲಾಗಿದೆ. ಈ ಬೊನ್ಸಾಯ್ ಉದ್ಯಾನವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂದರ್ಶನ ಮಾಡಬೇಕು ಎಂಬ ದೃಷ್ಟಿಯಿಂದ ಅದಕ್ಕೆ ಬೇಕಾದ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಡಾ.ಎಂ.ಜಗದೀಶ್ ತಿಳಿಸಿದರು.
1836ರಲ್ಲಿ ಮೊದಲ ಪ್ರದರ್ಶನ
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಈ ಫಲಪುಷ್ಪ ಪ್ರದರ್ಶನವು 217ನೇ ಪ್ರದರ್ಶನವಾಗಿದ್ದು,1836ರಲ್ಲಿ ಬ್ರಿಟಿಷ್ ಕಾಲದಲ್ಲೇ ಮೊದಲ ಪ್ರದರ್ಶನ ನಡೆದಿತ್ತು. 1947ರಲ್ಲಿ ಡಾ.ಎಂ.ಎಚ್. ಮರಿಗೌಡ ಅವರು ಈ ಫಲಪುಷ್ಪ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ರೈತರು ಬೆಳೆದ ತೋಟಗಾರಿಕಾ ಬೆಳೆಗಳಿಗೂ ಈ ಪ್ರದರ್ಶನದಲ್ಲಿ ವೇದಿಕೆ ಕಲ್ಪಿಸಿದರು. ಪರಿಣಾಮ ಸಮಾಜದ ಪ್ರತಿಷ್ಠಿತರು ಮತ್ತು ಯೂರೋಪಿಯನ್ನರಿಗೆ ಸೀಮಿತವಾಗಿದ್ದ ಪ್ರದರ್ಶನವನ್ನು ವರ್ಷದಲ್ಲಿ ಎರಡು ಬಾರಿ ಆಯೋಜಿಸಿ ಸಾಮಾನ್ಯ ವರ್ಗವೂ ಭಾಗಿಯಾಗುವಂತೆ ಅವಕಾಶ ಮಾಡಿಕೊಟ್ಟಿದ್ದರು.
ಎಂಟು ಬಾರಿ ಪ್ರದರ್ಶನ ರದ್ದು
2000ನೇ ಸಾಲಿನ ನಂತರದ ದಿನಗಳಿಂದ ಒಂದೊಂದು ವಿಷಯ ವಸ್ತುಗಳನ್ನಿಟ್ಟುಕೊಂಡು ಜನಾಕರ್ಷಣೆಗೆ ಒತ್ತುಕೊಡಲು ಪ್ರಾರಂಭಿಸಲಾಯಿತು. ಒಂದೇ ರೀತಿಯ ಹೂವುಗಳಿಂದ ಅಲಂಕರಿಸಿದ ಸ್ಮಾರಕಗಳನ್ನು ನಿರ್ಮಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಇದುವರೆಗೆ ಎಂಟು ಫಲಪುಷ್ಪ ಪ್ರದರ್ಶನಗಳು ರದ್ದಾಗಿದ್ದವು. ಸಾಂಕ್ರಾಮಿಕ ಪಿಡುಗಾದ ಪ್ಲೇಗ್ ಕಾಯಿಲೆ ಹರಡಿದ ಸಂದರ್ಭದಲ್ಲಿ ಮೂರು ಅವಧಿಯ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಬಳಿಕ ಡಾ.ರಾಜ್ಕುಮಾರ್ ಅಪಹರಣ ಸಂದರ್ಭದಲ್ಲಿ ಎರಡು ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಮತ್ತು ಕೊರೋನಾ ಸಾಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿಯೂ ಮೂರು ಪ್ರದರ್ಶನಗಳನ್ನು ರದ್ದು ಮಾಡಲಾಗಿತ್ತು.
ಪ್ರದರ್ಶನದ ಟಿಕೆಟ್ ದರ ಎಷ್ಟು?
ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಸ್ವಂತ ವಾಹನದಲ್ಲಿ ಬರುವವರಿಗೆ ವಾಹನ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮುಂಗಡ ಟಿಕೆಟ್ ಬುಕಿಂಗ್‌ಗೆ ಆನ್‌ಲೈನ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರದರ್ಶನಕ್ಕೆ ಬರುವವರಿಗೆ ಇದೇ ಮೊದಲ ಬಾರಿಗೆ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.
ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ., ರಜಾ ದಿನಗಳಲ್ಲಿ 100 ರೂ. ಟಿಕೆಟ್ ದರವಿದೆ. 12 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂ. ಶಾಲಾ ಸಮವಸ್ತ್ರ ಧರಿಸಿ ಬರುವ 10 ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ. ಲಾಲ್‌ಬಾಗ್‌ನಲ್ಲಿ ಈವರೆಗೂ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ನಾಲ್ಕು ದ್ವಾರಗಳಲ್ಲಿ ಟಿಕೆಟ್ ಕೌಂಟರ್‌ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಅದರಂತೆ ನಗರದ ಬಸ್ ನಿಲ್ದಾಣಗಳು, ಮೆಟ್ರೊ ರೈಲು ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ಯೂ.ಆರ್‌ಕೋಡ್ ಸ್ಟಿಕ್ಕರ್ ಅಂಟಿಸುವ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
26ರವರೆಗೆ ಸಂಚಾರ ಮಾರ್ಗ ಬದಲಾವಣೆ
ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಹಿನ್ನಲೆಯಲ್ಲಿ ಲಾಲ್‌ಬಾಗ್ ವ್ಯಾಪ್ತಿ ಯಲ್ಲಿ ಜ.16 ರ ಗುರುವಾರದಿಂದ 26ರವರೆಗೆ 11 ದಿನಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಫಲಪುಷ್ಪ ಪ್ರದರ್ಶನಕ್ಕೆ ಗಣ್ಯರು, ಸಾರ್ವಜನಿಕರು, ಪ್ರವಾಸಿಗರು ದೇಶ-ವಿದೇಶಿ ಪ್ರೇಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 8ರಿಂದ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಜನ ಸಂದಣಿ ಹಿನ್ನೆಲೆಯಲ್ಲಿ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತಲ್ಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಾಹನ ನಿಲುಗಡೆಗೆ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗಿದ್ದು,ಡಾ. ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿ-ಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. ಕೆ.ಹೆಚ್.ರಸ್ತೆ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆಗೆ ಅವಕಾಶ, ಡಾ. ಮರಿಗೌಡ ರಸ್ತೆ- ಹಾಪ್ ಕಾಮ್ಸ್‌ನಲ್ಲಿ ಬೈಕು ಹಾಗೂ ಕಾರುಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೆ.ಸಿ.ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರುಗಳ ನಿಲುಗಡೆ ಮಾಡಬಹುದು.