Vijayendra vs Yatnal | ಬಿಜೆಪಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ; ವೈಯಕ್ತಿಕ ಟೀಕೆಗಿಳಿದ ನಾಯಕರು!
ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಬಿ.ವೈ.ವಿಜಯೇಂದ್ರ ಕಸರತ್ತು ನಡೆಸಿದ್ದರೆ, ಅಧ್ಯಕ್ಷ ಸ್ಥಾನ ಸಿಗದಂತೆ ತಡೆಯಲು ಯತ್ನಾಳ್ ಬಣ ಶತ ಪ್ರಯತ್ನ ಮಾಡುತ್ತಿದೆ.
ವರಿಷ್ಠರ ಕಟ್ಟುನಿಟ್ಟಿನ ಸೂಚನೆ ಬಳಿಕ ಕೆಲಕಾಲ ತಣ್ಣಗಾಗಿದ್ದ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಇದೀಗ ಮತ್ತೆ ತಾರಕಕ್ಕೇರಿದೆ. ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದ ಶಾಸಕ ಬಸನಗೌಡ ಪಾಟೀಲ ಬಣ, ಯತ್ನಾಳ ಬಣದ ನಾಯಕರ ಉಚ್ಛಾಟನೆಗೆ ಹಠ ತೊಟ್ಟ ಬಿ.ವೈ.ವಿಜಯೇಂದ್ರ ಬಣದವರು ಈಗ ಪರಸ್ಪರ ವ್ಯಕ್ತಿಗತ ಟೀಕೆಗೆ ಇಳಿದಿದ್ದಾರೆ.
ಈ ಮಧ್ಯೆ ಕೇಂದ್ರ ಸಚಿವರೂ ಆಗಿರುವ ರಾಜ್ಯ ಬಿಜೆಪಿ ಸಾಂಸ್ಥಿಕ ಚುನಾವಣೆ ಉಸ್ತುವಾರಿ ಶಿವರಾಜ ಸಿಂಗ್ ಚೌಹಾಣ್ ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಶೀಘ್ರ ಚಾಲನೆ ನೀಡುವ ಕುರಿತು ನೀಡಿರುವ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಭದ್ರಪಡಿಸಿಕೊಳ್ಳಲು ಎರಡೂ ಬಣಗಳ ನಾಯಕರು ತೆರೆಮರೆಯಲ್ಲೇ ಪ್ರಯತ್ನ ಆರಂಭಿಸಿದ್ದಾರೆ.
ಶಿವರಾಜ ಸಿಂಗ್ ಚೌಹಾಣ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಶಿವರಾಜ ಸಿಂಗ್ ಚೌಹಾಣ್, ರಾಜ್ಯ ನಾಯಕತ್ವದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲ ನಾಯಕರು ಚರ್ಚಿಸಿಯೇ ಅಧ್ಯಕ್ಷ ಸ್ಥಾನದ ಆಯ್ಕೆಗೆ ಚುನಾವಣೆ ನಡೆಸಲಿದ್ದಾರೆ. ಪಕ್ಷದಲ್ಲಿ ಬೂತ್ ಮಟ್ಟದಿಂದ ಅಧ್ಯಕ್ಷ ಸ್ಥಾನದವರೆಗೆ ಸಾಂಸ್ಥಿಕ ಚುನಾವಣೆಗಳು ನಡೆಯಲಿವೆ ಎಂದು ಹೇಳಿದ್ದಾರೆ.
ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣ ಆರಂಭದಿಂದಲೇ ಒತ್ತಾಯಿಸುತ್ತಲೇ ಬಂದಿತ್ತು. ಇದೇ ವಿಚಾರವಾಗಿ ಯತ್ನಾಳ್ ಬಣದ ನಾಯಕರು ಹಾಗೂ ಬಿ.ವೈ. ವಿಜಯೇಂದ್ರ ಬಣದ ನಾಯಕರ ಮಧ್ಯೆ ಆಗಿಂದಾಗ್ಗೆ ವಾಗ್ವಾದಗಳು ನಡೆದಿದ್ದವು. ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಿತ್ತು. ಭಿನ್ನಮತಗಳಿಗೆ ಕಡಿವಾಣ ಹಾಕಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಪೈಫೋಟಿ
ಬಿ.ವೈ. ವಿಜಯೇಂದ್ರ ಅವರು ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಚರ್ಚಿಸಿರುವುದು ಕೂಡ ಅಧ್ಯಕ್ಷ ಸ್ಥಾನದ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಗನ ಪರವಾಗಿ ರಾಜ್ಯವ್ಯಾಪಿ ಪ್ರವಾಸ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಯಡಿಯೂರಪ್ಪ ಪ್ರಯತ್ನಕ್ಕೆ ಯತ್ನಾಳ ಬಣದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ನಾಯಕರ ಹೆಸರು ಮುನ್ನೆಲೆಗೆ?
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಕಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೆಸರು ಕೇಳಿಬರುತ್ತಿದೆ. ಈ ಇಬ್ಬರೂ ಬಿ.ಎಸ್. ಯಡಿಯೂರಪ್ಪ ಆಪ್ತರು. ಒಂದು ವೇಳೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಈ ಇಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ತಂತ್ರವನ್ನು ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಹೆಣೆದಿದ್ದಾರೆ.
ಯಡಿಯೂರಪ್ಪತಂತ್ರಕ್ಕೆ ಪ್ರತಿತಂತ್ರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಪೈಫೋಟಿ ನೀಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ವರಿಷ್ಠರಿಂದ ಶೋಕಾಸ್ ನೋಟಿಸ್ ಪಡೆದು, ಉತ್ತರ ನೀಡಿದ್ದ ವೇಳೆ ವರಿಷ್ಠರು ನಿಮಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ. ತಾಳ್ಮೆಯಿಂದ ಇರಬೇಕು ಎಂದು ಸಲಹೆ ನೀಡಿ ಕಳುಹಿಸಿದ್ದರು. ಆ ಉತ್ತಮ ಭವಿಷ್ಯವೇ ಅಧ್ಯಕ್ಷ ಸ್ಥಾನ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿವೆ.
ವೈಯಕ್ತಿಕ ಟೀಕೆಗಳು
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳುವ ನಿರ್ಧಾರಕ್ಕೆ ಶಾಸಕ ರಮೇಶ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಜಯೇಂದ್ರ ನಮ್ಮ ಮುಂದೆ ಬಚ್ಚಾ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ವಿಜಯೇಂದ್ರ, ಅತಿರೇಕದ ಮಾತುಗಳಾಡಿದರೆ ಓಡಾಡಲು ಕಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿಜಯೇಂದ್ರ ನೀಡಿದ ಈ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ , 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಬರದೇ ಹೋಗಿದ್ದರೆ ವಿಜಯೇಂದ್ರರ ಪೂಜ್ಯ ಅಪ್ಪಾಜಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ವಿಜಯೇಂದ್ರ ಅವರು ದುಡ್ಡು ಬಾಚಿಕೊಳ್ಳಲು ಆಗುತ್ತಿರಲಿಲ್ಲ. ವಿಜಯೇಂದ್ರ ಮಾಡಿರುವ ಹಣವೆಷ್ಟು ಎಂಬುದು ಜಗತ್ತಿಗೆ ಗೊತ್ತಿದೆ. ರಮೇಶ್ ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡಿರುವುದರಲ್ಲಿ ವಿಜಯೇಂದ್ರ ಕಾಣಿಕೆ ದೊಡ್ದದಿದೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ದಿವಂಗತ ಅರುಣ್ ಜೇಟ್ಲಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಉಚ್ಚಾಟನೆಗೊಂಡಿದ್ದ ಯಡಿಯೂರಪ್ಪ ಅವರನ್ನು ಪುನಃ ಪಕ್ಷಕ್ಕೆ ಕರೆತಂದು ರಾಜ್ಯಾಧ್ಯಕ್ಷ ಮಾಡಿದ್ದು ನಾನು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದ್ದು ನಾನು. ಪಕ್ಷದಲ್ಲಿ ಯಡಿಯೂರಪ್ಪ ಅವರಿಗಿಂತ ನಾನೇ ಸೀನಿಯರ್. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಕಲೆಕ್ಷನ್ ಮಾಡಿಕೊಂಡು ತಿರುಗಾಡುತ್ತಿದ್ದ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಹೇಳಿಕೆ ತಪ್ಪು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುರಿತು ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರನ್ನು ಬಚ್ಚಾ ಎಂಬ ಹೇಳಿರುವುದು ತಪ್ಪು. ಶಾಸಕರಾದವರು ಹಾಗೆಲ್ಲ ಮಾತಾಡಬಾರದು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಯ್ಕೆ ಮಾಡಿದ್ದಾರೆ. ಅದನ್ನು ಯಾರೂ ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದ ಬಳಿಕ ನಾಯಕರ ಕಚ್ಚಾಟ ಇನ್ನಷ್ಟು ಹೆಚ್ಚಾಗುವ ಆತಂಕ ಬಿಜೆಪಿಯಲ್ಲಿದೆ.