
ಸಂಪುಟ ಪುನಾರಚನೆ ಕಸರತ್ತು ; ಸಿಎಂ- ಡಿಸಿಎಂ ಮಧ್ಯೆ ಸಮನ್ವಯತೆಗೆ ಕುತ್ತು
ಇದೇ ಯೋಜನೆಯ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅವರು ಅ.13 ರಂದು ಬೆಂಗಳೂರು ಸಿಎಂ ಸರ್ಕಾರಿ ನಿವಾಸಿ ಕಾವೇರಿಯಲ್ಲಿ ಸಂಪುಟ ಸಚಿವರಿಗೆ ಔತಣಕೂಟ ಆಯೋಜಿಸಿದ್ದಾರೆ. ಈ ಸಂಬಂಧ ಎಲ್ಲ ಸಚಿವರಿಗೆ ಆಹ್ವಾನ ನೀಡಿದ್ದು ಅಂದು ಎಲ್ಲ ಸಚಿವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ʼನವೆಂಬರ್ ಕ್ರಾಂತಿʼಯ ಕಿಡಿ ನಿಧಾನವಾಗಿ ವ್ಯಾಪಿಸುತ್ತಿದೆ. ಸರ್ಕಾರ ರಚನೆಯಾಗಿ ನವೆಂಬರ್ ತಿಂಗಳಿಗೆ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಮಾತುಗಳು ಮತ್ತೆ ಸದ್ದು ಮಾಡುತ್ತಿವೆ. ಇದೇ ವಿಚಾರ ಸಿಎಂ ಹಾಗೂ ಡಿಸಿಎಂ ಮಧ್ಯೆ ಸಹಮತ, ಸಮನ್ವಯತೆ ಇಲ್ಲದಂತೆ ಮಾಡಿದೆ.
ಕಾಂಗ್ರೆಸ್ ಮೊದಲರ್ಧದ ಆಡಳಿತವು ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹೊಂದಿಕೆ, ಸಿಎಂ ಸ್ಥಾನ ಹಾಗೂ ನಾಯಕತ್ವ ಬದಲಾವಣೆಯ ಕಚ್ಚಾಟದಲ್ಲೇ ಕಳೆದು ಹೋಗಿದೆ. ಉಳಿದ ಎರಡೂವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆಯ ಪ್ರಯತ್ನ ಆರಂಭಿಸಿದ್ದಾರೆ.
ಅ.7ರಂದು ಬೆಂಗಳೂರಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಸುಳಿವು ಬಿಟ್ಟುಕೊಟ್ಟಿದ್ದರು. ಮುಂದಿನ ಸಂಪುಟ ಪುನಾರಚನೆಯಲ್ಲಿ ವಾಲ್ಮೀಕಿ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ಕಲ್ಪಿಸುವ ಭರವಸೆ ನೀಡಿದ್ದರು.
ಅ.13ಕ್ಕೆ ಸಚಿವರಿಗೆ ಡಿನ್ನರ್ ಸಭೆ
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಹೈಕಮಾಂಡ್ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಸದ್ಯ ಹೈಕಮಾಂಡ್ ನಾಯಕರು ಬಿಹಾರ ಚುನಾವಣೆಯಲ್ಲಿ ಸಕ್ರಿಯವಾಗಿ ಇರುವುದರಿಂದ ಚರ್ಚೆ ಸಾಧ್ಯವಾಗುತ್ತಿಲ್ಲ. ನವೆಂಬರ್ ತಿಂಗಳಾಂತ್ಯಕ್ಕೆ ಬಿಹಾರ ಚುನಾವಣೆ ಮುಗಿಯಲಿದೆ. ಆಗ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ, ವರ್ಷಾಂತ್ಯದೊಳಗೆ ಸಂಪುಟ ಪುನಾರಚನೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಯೋಜನೆಯ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅವರು ಅ.13 ರಂದು ಬೆಂಗಳೂರು ಸಿಎಂ ಸರ್ಕಾರಿ ನಿವಾಸಿ ಕಾವೇರಿಯಲ್ಲಿ ಸಂಪುಟ ಸಚಿವರಿಗೆ ಔತಣಕೂಟ ಆಯೋಜಿಸಿದ್ದಾರೆ. ಈ ಸಂಬಂಧ ಎಲ್ಲ ಸಚಿವರಿಗೆ ಆಹ್ವಾನ ನೀಡಿದ್ದು ಅಂದು ಎಲ್ಲ ಸಚಿವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ. ಜತೆಗೆ ಆಂತರಿಕ ಮೌಲ್ಯಮಾಪನದಲ್ಲಿ ಕಳಪೆ ಸಾಧನೆ ತೋರಿರುವ ಸಚಿವರನ್ನು ಸಂಪುಟದಿಂದ ಕೈ ಬಿಡುವ ಬಗ್ಗೆಯೂ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟ ಪುನಾರಚನೆ ವೇಳೆ 12ಕ್ಕೂ ಹೆಚ್ಚು ಸಚಿವರನ್ನು ಕೈ ಬಿಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಸ್ಥಾನಗಳಿಗೆ ಹೊಸಬರನ್ನು ಆಯ್ಕೆ ಮಾಡುವ ಕುರಿತಂತೆಯೂ ಚಿಂತನೆ ನಡೆದಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಆಕಾಂಕ್ಷಿಗಳ ಲಾಬಿಯೂ ಜೋರಾಗಿ ನಡೆಯುತ್ತಿದೆ.
ಸಿಎಂ ಸ್ಥಾನ ಚರ್ಚೆಗೆ ತಿಲಾಂಜಲಿ ಇಡುವ ಗುರಿ
ಸಿಎಂ ಸ್ಥಾನ ಬದಲಾವಣೆಯ ಕೂಗಿಗೆ ಇತಿಶ್ರೀ ಹಾಡುವುದು ಸಂಪುಟ ಪುನಾರಚನೆ ಉದ್ದೇಶವಾಗಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ತಮ್ಮ ಬೆಂಬಲಿಗರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಶಾಸಕರ ಬೆಂಬಲ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು, ಬೆಂಬಲಿಗರನ್ನು ಸಚಿವ ಸ್ಥಾನದಲ್ಲಿ ಕೂರಿಸಿದರೆ ಸಿಎಂ ಸ್ಥಾನ ಬದಲಾವಣೆಯ ಧ್ವನಿ ಕ್ಷೀಣಿಸಲಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಠಕ್ಕರ್ ನೀಡಬಹುದು ಎಂಬುದು ಸಿಎಂ ಉದ್ದೇಶವಾಗಿದೆ ಎನ್ನಲಾಗಿದೆ.
ಈಗಾಗಲೇ ನಾನೇ ಪೂರ್ಣಾವಧಿ ಸಿಎಂ ಎಂದು ಸಿದ್ದರಾಮಯ್ಯ ಘೋಷಿಸಿಕೊಂಡಿದ್ದಾರೆ. ಹೈಕಮಾಂಡ್ ಕೂಡ ಸಹಮತ ವ್ಯಕ್ತಪಡಿಸಿದೆ. ಇದೇ ಧೈರ್ಯದಿಂದ ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಪುಟ ಪುನಾರಚನೆ ಮಾಹಿತಿ ಇಲ್ಲ; ಡಿಕೆಶಿ
ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟಿರುವ ವಿಚಾರ. ಅವರೇ ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನನ್ನೊಂದಿಗೆ ಚರ್ಚೆ ಮಾಡಿದರೆ ಸಲಹೆ ನೀಡುತ್ತೇನೆ. ಈ ವಿಚಾರವಾಗಿ ಅನಗತ್ಯ ಚರ್ಚೆ ಮಾಡಿ ಗೊಂದಲ ಸೃಷ್ಟಿಸಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿಯವರ ಔತಣಕೂಟ ಆಯೋಜನೆ ಕುರಿತು ಕೇಳಿದಾಗ, “ಇದರಲ್ಲಿ ತಪ್ಪೇನಿದೆ? ಒಟ್ಟಿಗೆ ಸೇರಿ ಊಟ ಮಾಡಿ, ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಸಹಜ” ಎಂದು ತಿಳಿಸಿದರು.