
ನಂದಿನಿ ಬ್ರಾಂಡ್ ಮೌಲ್ಯ ವೃದ್ಧಿ | ಹೈನುಗಾರರತ್ತ ಹರಿಯುತ್ತಿದೆಯೇ ಕೆಎಂಎಫ್ ಲಾಭ?
ಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟದಿಂದ ಕೆಎಂಎಫ್ ಗೆ ಬರುತ್ತಿರುವ ಆದಾಯವನ್ನು ನೇರವಾಗಿ ರೈತರಿಗೆ ಹಂಚುವ ಮಾತುಗಳು ಪದೇ ಪದೇ ಕೇಳಿಬಂದರೂ ಅದು ಹೇಳಿಕೆಗಳಲ್ಲಷ್ಟೇ ಉಳಿದಿದೆ.
ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್ ನಂದಿನಿ ಬ್ರಾಂಡ್ ಮೌಲ್ಯ ಮತ್ತು ವಿಶ್ವಾಸಾರ್ಹತೆ ಗಗನಕ್ಕೇರಿದೆ. ಹಾಲು, ತುಪ್ಪ ಹಾಗೂ ಅದರ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ ಎಂಬುದೇನೋ ನಿಜ. ಆದರೆ, ಕೆಎಂಎಫ್ ಬೆನ್ನೆಲುಬಾದ ಹೈನುಗಾರರಿಗೆ ಇದೆಲ್ಲದರಿಂದ ಏನು ಪ್ರಯೋಜನ? ಎಂಬ ಪ್ರಶ್ನೆ ಸಹಜ.
ಪಶು ಆಹಾರದ ಬೆಲೆ ಹೆಚ್ಚಳ, ಹಾಲಿನ ದರ ಕಡಿಮೆ ಹಾಗೂ ಹೆಚ್ಚು ಉತ್ಪಾದನಾ ವೆಚ್ಚದಿಂದಾಗಿ ಹೈರಾಣಾಗಿ, ರೈತರು ಹೈನೋದ್ಯಮದಿಂದ ದೂರ ಸರಿಯುವ ಭೀತಿಯಲ್ಲಿದ್ದಾರೆ.
ಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟದಿಂದ ಕೆಎಂಎಫ್ ಗೆ ಬರುತ್ತಿರುವ ಆದಾಯವನ್ನು ನೇರವಾಗಿ ರೈತರಿಗೆ ಹಂಚುವ ಮಾತುಗಳು ಪದೇಪದೆ ಕೇಳಿಬಂದರೂ ಅದು ಹೇಳಿಕೆಗಳಲ್ಲಷ್ಟೇ ಉಳಿದಿದೆ. ರೈತ ಸಂಘಟನೆಗಳು ಕೂಡ ಕೆಎಂಎಫ್ ನಿಲುವು, ಆಡಳಿತ ವೈಖರಿಯನ್ನು ಟೀಕಿಸುತ್ತಿವೆ. ತನ್ನ ಯಶಸ್ಸಿನ, ಲಾಭದ ಮೂಲವಾದ ರೈತರ ಶ್ರಮಕ್ಕೆ ಕರ್ನಾಟಕ ಮಹಾಮಂಡಳ ಯಾವ ರೀತಿ ಸ್ಪಂದಿಸುತ್ತಿದೆ ಎಂಬುದನ್ನು ವಿವಿಧ ಒಕ್ಕೂಟಗಳ ವ್ಯಾಪ್ತಿಯ ಹೈನುಗಾರರಿಂದಲೇ ಕೇಳಿ ತಿಳಿದ ಸಂಗತಿಗಳು ಬೇರೆಯದೇ ಕಥೆ ಹೇಳುತ್ತಿವೆ.
ಬ್ರಾಂಡ್ ಮತ್ತು ವಹಿವಾಟು ವೃದ್ಧಿಯ ಲಾಭ ನೇರವಾಗಿ ಹೈನುಗಾರರಿಗೇ ತಲುಪಲಿದೆ ಎಂಬ ಕೆಎಂಎಫ್ ಮತ್ತು ಸರ್ಕಾರದ ಮಾತುಗಳ ನಡುವೆ, ವಾಸ್ತವಾಂಶ ಬೇರೆಯೇ ಇದೆ ಎಂಬುದನ್ನು ಹೈನುಗಾರರ ಸಂಕಷ್ಟಗಳೇ ಸಾರಿ ಹೇಳುತ್ತಿವೆ.
ಕೋಲಾರ-ಚಿಕ್ಕಬಳ್ಳಾಪುರ (ಕೋಚಿಮುಲ್)
ಪಶು ಆಹಾರ ಬೆಲೆ ಗಗನಕ್ಕೇರಿದೆ. ಹೈನುಗಾರರಿಗೆ ಸಕಾಲಕ್ಕೆ ಪ್ರೋತ್ಸಾಹ ಧನ ನೀಡುತ್ತಿಲ್ಲ, ಇದರಿಂದ ಬಹಳಷ್ಟು ರೈತರು ಹೈನೋದ್ಯಮದಿಂದ ದೂರ ಸರಿಯುವಂತಾಗಿದೆ. ಸರ್ಕಾರದಿಂದ ಸರಿಯಾದ ಉತ್ತೇಜನ ಸಿಗದ ಕಾರಣ ಹಳ್ಳಿಗಳಲ್ಲಿ ಹೈನುಗಾರಿಕೆ ಕುಂಠಿತವಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಸದ್ಯ ಶೇ.40ರಷ್ಟು ಮಾತ್ರ ಹೈನೋದ್ಯಮ ಉಳಿದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಜಾನುವಾರುಗಳೇ ಇಲ್ಲವಾಗುತ್ತವೆ. ಹಾಲಿಗೂ ಪರ್ಯಾಯ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಬಹುದು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಕೋಚಿಮುಲ್) ವ್ಯಾಪ್ತಿಗೆ ಸೇರುವ ಚಿಕ್ಕಬಳ್ಳಾಪುರ ಜಿಲ್ಲೆ ಮರಸನಹಳ್ಳಿ ಗ್ರಾಮದ ಪ್ರಗತಿಪರ ಹೈನುಗಾರರಾದ ಶಶಿಕಲಾ ಹಾಗೂ ಪ್ರಕಾಶ್ ದಂಪತಿ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಹಾಗೂ ಹಾರೋಬಂಡೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಡೇರಿಗಳಲ್ಲಿ ನಿತ್ಯ 4-5 ಕ್ಯಾನ್ ಹಾಲು ಸಂಗ್ರಹವಾಗುತ್ತಿತ್ತು. ಈಗ 1-1.5 ಕ್ಯಾನಿಗೆ ನಿಂತಿದೆ. ಈ ಹಿಂದೆ ಪ್ರತಿ ಮನೆಗೂ ಒಂದು ಹಸು ಇತ್ತು. ಈಗ ಅಪರೂಪ ಎನಿಸಿವೆ.
ಇನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರತಿ ಲೀಟರ್ ಹಾಲಿಗೆ 30 ರೂ.(ಫ್ಯಾಟ್ ಗೆ ಅನುಗುಣವಾಗಿ) ನೀಡುತ್ತಿವೆ. ಕೆಎಂಎಫ್ ಸಂಸ್ಥೆಯವರು ರೈತರಿಂದ ಪಡೆದ ಅದೇ ಹಾಲನ್ನು ಸಂಸ್ಕರಿಸಿ 50-54 ರೂ.ರವರೆಗೆ ಮಾರಾಟ ಮಾಡುತ್ತಾರೆ. ಹೀಗಿರುವಾಗ ಯಾರಿಗೆ ಲಾಭ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವ 5 ರೂ. ಹಾಲಿನ ದರ ಏರಿಸುವ ಭರವಸೆಯನ್ನು ಶೀಘ್ರವೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ತುಮುಲ್(ತುಮಕೂರು ಹಾಲು ಒಕ್ಕೂಟ)
ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಂದ ಸಾಕಷ್ಟು ಅನುಕೂಲಗಳಿದ್ದರೂ ಹೈನುಗಾರರಿಗೆ ಸಿಗುತ್ತಿಲ್ಲ. ಒಂದೆರಡು ಸೌಲಭ್ಯ, ಒಂದಿಬ್ಬರಿಗಷ್ಟೇ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೈನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ, ವಿಮೆ ಸೌಲಭ್ಯ ಅಗತ್ಯವಿದೆ.
ಜಿಲ್ಲಾ ಒಕ್ಕೂಟದಿಂದ ಮ್ಯಾಟ್, ಚಾಪ್ ಕಟರ್, ಮಿಲ್ಕಿಂಗ್ ಮಿಷನ್ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ. ಆದರೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಕೆಎಂಎಫ್ ವತಿಯಿಂದ ಮೇವಿನ ಬೀಜ ನೀಡಲಾಗುತ್ತದೆ. ಆದರೆ, ನೀರಿನ ಆಭಾವ ಎದುರಿಸುವ ರೈತರು ಮೇವು ಬೆಳೆಯಲಾಗದೇ ಜಾನುವಾರುಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ತುಮಕೂರಿನ ರೈತ ಶಾಂತಕುಮಾರ್ ಅಭಿಪ್ರಾಯಪಟ್ಟರು.
ಮನ್‌ಮುಲ್( ಮಂಡ್ಯ ಜಿಲ್ಲಾ ಹಾಲು ಒಕ್ಕೂಟ)
ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಸಂಗ್ರಹಿಸುವ ಒಕ್ಕೂಟಗಳಲ್ಲಿ ಮನ್ ಮುಲ್( ಮಂಡ್ಯ ಜಿಲ್ಲಾ ಹಾಲು ಒಕ್ಕೂಟ)ಕೂಡ ಒಂದು. ಬೆಂಗಳೂರಿನಲ್ಲಿ ಅಂತರ ರಾಜ್ಯದ ಹೈನು ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತಿದ್ದ ಸಂದರ್ಭದಲ್ಲಿ ಅಂದಿನ ಸಚಿವರಾಗಿದ್ದ ಕೆ ಎಚ್ ನಾಗೇಗೌಡರು ಮನ್ ಮುಲ್ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚು ಅವಕಾಶ ಮಾಡಿಕೊಟ್ಟರು. ಆಗ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಿಂದ ಬರುತ್ತಿದ್ದ ಉತ್ಪನ್ನಗಳಿಗೆ ಹೊಡೆತ ಬಿತ್ತು. ಈಗ ಕೆಎಂಎಫ್ ಪ್ರಗತಿ ಉತ್ತಮವಾಗಿದೆ. ಆದರೆ, ರಾಜಕಾರಣಿಗಳು ಪ್ರವೇಶ ಮಾಡಿ, ಮೂಲ ಆಶಯಗಳನ್ನೇ ಹಾಳು ಮಾಡುತ್ತಿದ್ದಾರೆ. ಅನಗತ್ಯವಾಗಿ ಸಿಬ್ಬಂದಿಯನ್ನು ತುಂಬಿಸಿಕೊಂಡು ಆಡಳಿತಾತ್ಮಕ ವೆಚ್ಚ ಹೆಚ್ಚಿಸುತ್ತಿದ್ದಾರೆ. ಹಲವು ತಿಂಗಳಿಂದ ಸರಿಯಾದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಸಹಕಾರ ಸಂಘಗಳು ರಬ್ಬರ್ ಇದ್ದಂತೆ. ಹೇಗೆ ಬೇಕಾದರೂ ಬಳಸಬಹುದು. ಇದೇ ನೆಪ ಇಟ್ಟುಕೊಂಡು ರಾಜಕಾರಣಿಗಳು, ಅವರ ಹಿಂಬಾಲಕರು ದುಂದುವೆಚ್ಚದಲ್ಲಿ ತೊಡಗಿದ್ದಾರೆ ಎಂದು ಮಂಡ್ಯ ಜಿಲ್ಲೆಯ ರೈತ ಮುಖಂಡ ಕೆ. ಬೋರಯ್ಯ ಬೇಸರ ವ್ಯಕ್ತಪಡಿಸಿದರು.
ಪ್ರತಿ ಹಾಲು ಒಕ್ಕೂಟದಲ್ಲೂ ಕಾಮನ್ ಗುಡ್ ಫಂಡ್ ಎಂಬ ನಿಧಿ ತೆರೆಯಲಾಗಿದೆ. ಒಕ್ಕೂಟಕ್ಕೆ ಬಂದ ಲಾಭಾಂಶದ ಒಂದಿಷ್ಟು ಭಾಗವನ್ನು ಹೈನುಗಾರರ ಮಕ್ಕಳಿಗೆ ವಿನಿಯೋಗಿಸಬೇಕು ಎಂಬುದಿದೆ. ಆದರೆ, ಈ ಕಾಮನ್ ಗುಡ್ ಫಂಡ್ ಕೂಡ ಸರಿಯಾಗಿ ಬಳಕೆಯಾಗುತ್ತಿಲ್ಲ. ಒಕ್ಕೂಟಗಳಲ್ಲಿ ಲಾಭ ತರುವ ವ್ಯವಸ್ಥೆ ಇಲ್ಲ. ಭ್ರಷ್ಟಾಚಾರ ವಿಪರೀತವಾಗಿದೆ. ಕ್ಷೀರ ಪಿತಾಮಹ ಕುರಿಯನ್ ಅವರಂತೆ ಯೋಜನಾಬದ್ಧವಾಗಿ ಕೆಲಸ ಮಾಡಿದರೆ ಒಕ್ಕೂಟಗಳು ಪ್ರಗತಿ ಸಾಧಿಸಲಿವೆ ಎಂದರು.
ಸರ್ಕಾರಿ ಸ್ವಾಮ್ಯದ ಹಾಲು ಮಹಾಮಂಡಲ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಎಲ್ಲೂ ಇಲ್ಲ. ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಖಾಸಗಿ ಡೇರಿಗಳೇ ಕಾರ್ಯನಿರ್ವಹಿಸುತ್ತವೆ. ಇಂತಹ ಅವಕಾಶವನ್ನು ಲಾಭದತ್ತ ಕೊಂಡೊಯ್ದು, ಹೈನುಗಾರರರಿಗೆ ಉತ್ತೇಜನ ನೀಡಬೇಕು ಎಂದರು.
ಹೈನುಗಾರಿಕೆ ಕೂಡ ಬಂಡವಾಳ ಆಶ್ರಿತ ಉದ್ಯಮ
ಪಶು ಆಹಾರ ಚೀಲದ ಬೆಲೆ ರೂ.1226ಕ್ಕೆ ಹೆಚ್ಚಿಸಲಾಗಿದೆ. ಹೈನೋದ್ಯಮಕ್ಕೂ ಮೂಲ ಬಂಡವಾಳ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಂಡು ಕೆಎಂಎಫ್ ಹಾಗೂ ರಾಜ್ಯ ಸರ್ಕಾರ ಹೈನುಗಾರರಿಗೆ ಸವಲತ್ತು ಒದಗಿಸಬೇಕು. ಬರೀ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸಿದರೆ ಹೈನುಗಾರರಿಗೆ ಮೋಸ ಆಗಲಿದೆ. ಗ್ರಾಹಕರು ಹಾಗೂ ಹೈನುಗಾರರ ನಡುವೆ ಮಧ್ಯವರ್ತಿಯಂತಿರುವ ಹಾಲು ಮಹಾಮಂಡಳ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಯಾರು ಎಂಬುದನ್ನು ಯೋಚಿಸಿ ಶ್ರಮ ಆಧರಿತವಾದ ಬೆಲೆ ನೀಡಬೇಕು.
ಆಂಧ್ರಪ್ರದೇಶ, ಕೇರಳ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಬರುವ ಆದಾಯವನ್ನು ಕೇವಲ ಆಡಳಿತಾತ್ಮಕ ವೆಚ್ಚಗಳಿಗೆ ಭರಿಸದೇ ಉತ್ಪಾದಕರಿಗೂ ಹಂಚಬೇಕು. ಆಗ ಹೈನೋದ್ಯಮ ಇನ್ನಷ್ಟು ಬೆಳೆಯಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಮ್ ಒತ್ತಾಯಿಸಿದರು.