ಪ್ರಚೋದನಕಾರಿ ಹೇಳಿಕೆ: ಮುಸ್ಲಿಂ ಮೌಲ್ವಿ ವಿರುದ್ಧ ಮಂಡ್ಯದಲ್ಲಿ ದೂರು ದಾಖಲು
x
ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಂಡ್ಯದ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದಾರೆ.

ಪ್ರಚೋದನಕಾರಿ ಹೇಳಿಕೆ: ಮುಸ್ಲಿಂ ಮೌಲ್ವಿ ವಿರುದ್ಧ ಮಂಡ್ಯದಲ್ಲಿ ದೂರು ದಾಖಲು

ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣವೇ ಅದಕ್ಕೆ ಮುಳುವಾಗಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಡ್ರೆಸ್ ಇಲ್ಲದಂತಾಗಿರುವ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ನಿರ್ನಾಮ ಆಗುವ ದಿನ ಬಹಳ ದೂರವಿಲ್ಲ ಎಂದು ಅಶೋಕ್‌ ಹೇಳಿದ್ದಾರೆ


Click the Play button to hear this message in audio format

"ನ್ಯಾಯಾಲಯದ ಬಾಗಿಲು ಮುಂದೆ ನಿಂತು ಇನ್ನು ಮುಂದೆ ಭೀಕ್ಷೆ ಬೇಡುವುದಿಲ್ಲ. ಸಂಸತ್ತು ನಿಮ್ಮದಾದರೆ, ಬೀದಿಗಳು ನಮ್ಮವು" ಎಂದು ಹೇಳುವ ಮೂಲಕ ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ಬಹಿರಂಗ ಸಭೆಯಲ್ಲಿ ಸಂವಿಧಾನಕ್ಕೆ ಸೆಡ್ಡು ಹೊಡೆಯುವ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಹೆಚ್ಚುವರಿ​ ಎಸ್​ಪಿ ಅವರಿಗೆ ಬಿಜೆಪಿ ದೂರು ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, “ನ್ಯಾಯಾಲಯದ ಮಾತನ್ನೂ ಕೇಳುವುದಿಲ್ಲ. ಸಂಸತ್ತು ನಿಮ್ಮದಾದರೆ, ಬೀದಿಗಳು ನಮ್ಮದು” ಎಂದು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಮಾತುಗಳನ್ನು ಆಡಿರುವ ಮೌಲಾನಾ ಅಬು ತಾಲಿಬ್ ರೆಹಮಾನಿ ಅವರ ಮೇಲೆ FIR ಯಾವಾಗ ಹಾಕುತ್ತೀರಿ ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್​​?" ಎಂದು ಪ್ರಶ್ನಿಸಿದ್ದಾರೆ.

"ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬ ಹಿಂದೂ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಬಹಿರಂಗ ಕ್ಷಮೆ ಕೇಳಿದ ಮೇಲೂ ಅವರ ಮೇಲೆ FIR ಹಾಕಿ ವಿಚಾರಣೆಗೆ ಕರೆಯುವ ಕಾಂಗ್ರೆಸ್ ಸರ್ಕಾರಕ್ಕೆ, ಸಂವಿಧಾನ, ನ್ಯಾಯಾಲಯದ ಘನತೆ ಎಲ್ಲವನ್ನೂ ಗಾಳಿಗೆ ತೂರಿ ಪ್ರಚೋದನಕಾರಿ ಭಾಷಣ ಮಾಡುವ ಮುಸ್ಲಿಂ ಮತಾಂಧರು ಕಣ್ಣಿಗೆ ಕಾಣುವುದಿಲ್ಲ ಅಲ್ಲವೇ?" ಎಂದು ಅವರು ಕಿಡಿಕಾರಿದ್ದಾರೆ.

"ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣವೇ ಅದಕ್ಕೆ ಮುಳುವಾಗಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಡ್ರೆಸ್ ಇಲ್ಲದಂತಾಗಿರುವ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ನಿರ್ನಾಮ ಆಗುವ ದಿನ ಬಹಳ ದೂರವಿಲ್ಲ" ಎಂದು ಅಶೋಕ್‌ ಹೇಳಿದ್ದಾರೆ.

ಮೌಲ್ವಿ ಅವರು ಬಹಿರಂಗ ಸಭೆಯಲ್ಲಿ ಮಾತನಾಡುತ್ತಿರುವ ವಿಡಿಯೋ ಎನ್ನಲಾಗಿರುವ ವಿಡಿಯೋ ತುಣುಕನ್ನು ಕೂಡ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

Read More
Next Story