ಅಧಿಕಾರಿ ಆತ್ಯಹತ್ಯೆ ಪ್ರಕರಣ| ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ
x

ಅಧಿಕಾರಿ ಆತ್ಯಹತ್ಯೆ ಪ್ರಕರಣ| ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ


ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಆತ್ಮಹತ್ಯೆಯ ಬೆನ್ನಲ್ಲೇ ಬಿಜೆಪಿಗೆ ಬಹುದೊಡ್ಡ ಅಕ್ರಮದ ಅಸ್ತ್ರ ಸಿಕ್ಕಂತಾಗಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು (ಗುರುವಾರ) ನಡೆದಿದೆ.

ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಬಿಜೆಪಿ ಎಸ್‌ ಟಿ ಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ ನಲ್ಲಿನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್ ನಲ್ಲಿ ಮೂವರು ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದರು. ಇದೀಗ ಮೂವರಲ್ಲಿ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ʻʻಈ ಪ್ರಕರಣದ ತನಿಖೆನ್ನು ಸಿಬಿಐಗೆ ವಹಿಸಬೇಕು. ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು, ನಮ್ಮ ಈ 2 ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 1 ವಾರ ಗಡುವು ನೀಡುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದುʼʼ ಎಂದು ಎಚ್ಚರಿಕೆ ನೀಡಿದರು.

ʻʻಸಚಿವ ನಾಗೇಂದ್ರ ಗಮನಕ್ಕೆ ಬಾರದೇ ಈ ಅಕ್ರಮ ನಡೆದಿಲ್ಲ. ತೆಲಂಗಾಣ ರಾಜ್ಯದಲ್ಲಿ ಹಣಕಾಸಿನ ವರ್ಗಾವಣೆ ನಡೆದಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಈ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರವನ್ನು ಎಟಿಎಂ ರೀತಿಯಲ್ಲಿ ಬಳಕೆ ಮಾಡಿಕೊಂಡಿದೆ. ನಾವು ಆರೋಪ ಮಾಡಿದಾಗ ದಾಖಲೆ ಎಲ್ಲಿ ಎನ್ನುತ್ತಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಬಳಿ ದಾಖಲೆಗಳನ್ನು ಕೇಳುತ್ತಿದ್ದರು. ಈಗ ಸರ್ಕಾರ ಈ ಹಗರಣಕ್ಕೆ ಉತ್ತರವನ್ನು ನೀಡಬೇಕುʼʼ ಎಂದು ವಿಜಯೇಂದ್ರ ಆಗ್ರಹಿಸಿದರು.

ʻʻಇದು ರಾಜ್ಯದ ದೊಡ್ಡ ಅವ್ಯವಹಾರ. ಇದರಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇರುವುದು ಸ್ಪಷ್ಟವಾಗಿದೆ. ತಕ್ಷಣ ಸಚಿವ ನಾಗೇಂದ್ರ ರಾಜಿನಾಮೆ ಪಡೆಯಬೇಕುʼʼ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿಜಯೇಂದ್ರ ಒತ್ತಾಯ ಮಾಡಿದ್ದಾರೆ.

ʻʻವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮಾತ್ರ ಅವ್ಯವಹಾರ ನಡೆದಿಲ್ಲ. ಬೇರೆ ಇಲಾಖೆಗಳಲ್ಲೂ ಇದೇ ರೀತಿ ಅಕ್ರಮ ನಡೆದಿರುವ ಶಂಕೆ ಇದೆ. ಈ ರೀತಿ ಅವ್ಯವಹಾರ ನಡೆಸಿದ ಹಣವನ್ನು ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ. ಅಂತಾರಾಜ್ಯ ಮಟ್ಟದಲ್ಲಿ ಹಣಕಾಸು ವ್ಯವಹಾರ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ ಮಾಡಿದರು. ಜತೆಗೆ, ಎಲ್ಲಿಲ್ಲಿ ಹಣಕಾಸು ವ್ಯವಹಾರ ನಡೆದಿದೆ ಎಂಬ ಬಗ್ಗೆ ತನಿಖೆ ಆಗಬೇಕು. ಪ್ರಕರಣವನ್ನು ಸಿಬಿಐಗೆ ನೀಡಿದಾಗ ಮಾತ್ರ ಸತ್ಯ ಹೊರಬರಲಿದೆʼʼ ಎಂದರು.

Read More
Next Story