ಲೈಂಗಿಕ ದೌರ್ಜನ್ಯ ಪ್ರಕರಣ | ರೇವಣ್ಣ ಜಾಮೀನು ಅರ್ಜಿ: ಆದೇಶ ಮೇ 20ಕ್ಕೆ ಕಾಯ್ದಿರಿಸಿದ ಕೋರ್ಟ್
x

ಲೈಂಗಿಕ ದೌರ್ಜನ್ಯ ಪ್ರಕರಣ | ರೇವಣ್ಣ ಜಾಮೀನು ಅರ್ಜಿ: ಆದೇಶ ಮೇ 20ಕ್ಕೆ ಕಾಯ್ದಿರಿಸಿದ ಕೋರ್ಟ್


ಅಪಹರಣ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರು ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಶುಕ್ರವಾರ (ಮೇ 17) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ರೇವಣ್ಣಗೆ ನಿರಾಸೆಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ​ಎಸಿಎಂಎಂ ನ್ಯಾಯಾಲಯವು ಆದೇಶವನ್ನು ಮೇ 20ಕ್ಕೆ ಕಾಯ್ದಿರಿಸಿದೆ.

ಕಳೆದ ಎರಡು ದಿನಗಳಿಂದ ಎಸ್​ಐಟಿ ಹಾಗೂ ರೇವಣ್ಣ ಪರ ವಕೀಲರಿಂದ ವಾದ-ಪ್ರತಿವಾದ ಆಲಿಸಿದ್ದು, ಇದೀಗ ಅಂತಿಮವಾಗಿ ಕೋರ್ಟ್​ ರೇವಣ್ಣ ಅವರ ಜಾಮೀನು ಆದೇಶವನ್ನು ಮೇ 20ಕ್ಕೆ ಕಾಯ್ದಿರಿಸಿದೆ. ಇದರೊಂದಿಗೆ ಸೋಮವಾರದವರೆಗೆ ಮಧ್ಯಂತರ ಜಾಮೀನು ಮುಂದುವರಿಕೆಯಾಗಿದೆ.

ನಿನ್ನೆ(ಮೇ 16) ಜಾಮೀನು ಅರ್ಜಿಯ ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್​, ಒಂದು ದಿನ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಅದನ್ನು ಸೋಮವಾರದವರೆಗೆ ವಿಸ್ತರಿಸಿದೆ.

ಕೋರ್ಟ್‌ ವಾದ-ಪ್ರತಿವಾದ

ಸಂತ್ರಸ್ತೆಯ ಸ್ವ-ಇಚ್ಚಾ ಹೇಳಿಕೆಯನ್ನು ಓದಿದ ಎಸ್‍ಪಿಪಿ (ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್), ‌ʻʻನಾನು ಆ ಮನೆಗೆ ಸೇರಿದಾಗ ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಜನರು ಎಚ್ಚರಿಕೆ ನೀಡುತ್ತಾ ಇದ್ದರು. ಪ್ರಜ್ವಲ್ ಪದೇಪದೆ ಬಂದು ಮೈ ಮುಟ್ಟಿ ಮಾತನಾಡುತ್ತಿದ್ದರು. ರೇವಣ್ಣ ಅವರು ಕೂಡ ನನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಹೊಟ್ಟೆ ಎದೆಯ ಭಾಗವನ್ನು ಮುಟ್ಟಿ ಎಳೆದಾಡಿದ್ದಾರೆ. ರೇವಣ್ಣ ವರ್ತನೆ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಭವಾನಿ ಅವರಿಗೂ ಈ ಮಾಹಿತಿಯನ್ನು ನೀಡಿದ್ದೇನೆ ಯಾವುದೇ ಉಪಯೋಗ ಆಗಿಲ್ಲ. ಭವಾನಿ ಇಲ್ಲದ ಸಮಯದಲ್ಲಿ ರೇವಣ್ಣ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯೇ ಹೇಳಿಕೊಂಡಿದ್ದಾರೆ. ಈಗ ಅದೇ ಎಫ್ ಐ ಆರ್ ಗೆ 376 ಅನ್ನು ಸೇರಿಸಲಾಗಿದೆ. ಸೆಕ್ಷನ್ ಸೇರ್ಪಡೆಯಾಗಿರುವುದರಿಂದ ಈ ಪ್ರಕರಣ ಸೆಷನ್ಸ್ ಕೋರ್ಟ್ ಅಲ್ಲಿ ನಡೆಯಬೇಕು. 376 ಜಾಮೀನು ರಹಿತ ಪ್ರಕರಣ; ಹಾಗಾಗಿ ಈ ಅರ್ಜಿ ವಿಚಾರಣೆ ನಡೆಯಲು ಇಲ್ಲಿ ಅವಕಾಶ ಇಲ್ಲʼʼ ಎಂದು ಅವರು ತಿಳಿಸಿದರು.

ಎಸ್‍ಐಟಿ ಪರ ವಕೀಲರು, ʻʻಸೆಷನ್ ಕೋರ್ಟಿನಲ್ಲಿ ವಿಚಾರಣೆ ನಡೆಯಬೇಕಾಗಿರುವುದರಿಂದ ಈ ಜಾಮೀನು ಅರ್ಜಿ ವಿಚಾರಣೆ ನಡೆಯುವುದು ಸರಿಯಲ್ಲ. ಇದೆಲ್ಲವನ್ನೂ ಕೂಡ ಓಪನ್ ಕೋರ್ಟ್ ನಲ್ಲಿ ಹೇಳಲು ಸಾಧ್ಯವಿಲ್ಲ. ಇನ್ ಕ್ಯಾಮರಾ ಅಲ್ಲಿ ವಿವರವಾಗಿ ಹೇಳಬಹುದು. ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಗೆ ಜಾಮೀನು ನೀಡುವ ವ್ಯಾಪ್ತಿ ಇಲ್ಲ. ಜಾಮೀನು ನೀಡಬಹುದಾದ ಸೆಕ್ಷನ್ ಇದ್ದಾಗ ಮಾತ್ರ ಜಾಮೀನು ನೀಡಬಹುದು. ಆದರೆ ಈ ಪ್ರಕರಣದಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಇರುವುದರಿಂದ ಸೆಕ್ಷನ್‌ 436 ಅಡಿ ಜಾಮೀನು ನೀಡುವಂತಿಲ್ಲ. ನಾನ್ ಬೇಲೆಬಲ್ ಸೆಕ್ಷನ್ ಇರುವುದರಿಂದ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕು. ಹೀಗಾಗಿ ಸೆಕ್ಷನ್ 436 ಅಡಿ ಈ ಕೋರ್ಟ್ ನಿಂದ ಜಾಮೀನು ನೀಡಲು ಸಾಧ್ಯವಿಲ್ಲʼʼ ಎಂದರು.

ಈ ವೇಳೆ ರೇವಣ್ಣ ಪರ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿ, ʻʻಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಇದಾಗಿದೆ. ಆ ಪೊಲೀಸ್ ಠಾಣೆಯಲ್ಲಿ 354ಎ ಹಾಗೂ 506-509 ಪ್ರಕರಣ ದಾಖಲಾಗಿದ್ದು, ಇವೆಲ್ಲಾ ಜಾಮೀನು ಸಹಿತ ಪ್ರಕರಣಗಳಾಗಿವೆ. ಹೀಗಾಗಿ ಜಾಮೀನು ನೀಡಬಹುದಾಗಿದೆ. ಸಂತ್ರಸ್ತ ಮಹಿಳೆ ಏ. 28 ರಂದು ದೂರು ನೀಡಿದ್ದಾಳೆ. ಅಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಆಗಿದೆ. ಲೈಂಗಿಕ ದೌರ್ಜನ್ಯ 28 ಏಪ್ರಿಲ್ ಅಲ್ಲಿ ಆಗಿದ್ಯಾ? ಅತ್ಯಾಚಾರ ಏ.28 ರಂದು ಆಗಿದ್ಯಾ?. ಇಲ್ಲ ಏಪ್ರಿಲ್ ತಿಂಗಳ ಯಾವುದಾದರೂ ದಿನದಂದು ನಡೆದಿದ್ಯಾ? ಅಪರಾಧ ಎರಡು ದಿನ, ಎರಡು ತಿಂಗಳ ಮುಂಚೆ ಆಗಿಲ್ಲ. ಇದು ಐದು ವರ್ಷಗಳ ಹಿಂದೆ ನಡೆದಿದೆ ಎಂಬುದಲ್ಲ. ಅನೇಕ ವರ್ಷಗಳಾಗಿವೆʼʼ ಎಂದು ತಿಳಿಸಿದರು.

ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರ ಜಾಮೀನು ಭವಿಷ್ಯ ಮೇ 20 ಕ್ಕೆ ನಿರ್ಧಾರವಾಗಲಿದೆ.

ಪ್ರಕರಣದ ಹಿನ್ನೆಲೆ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಜಿಲ್ಲೆಯಾದ್ಯಂತ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ​ ವಿಡಿಯೋಗಳ ಪೆನ್‌ಡ್ರೈವ್​ ಹರಿದಾಡಲು ಆರಂಭಿಸಿತ್ತು. ಈ ಸಂಬಂಧ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ನಡುವೆ ಮನೆ ಕೆಲಸದವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆ ನರಸೀಪುರ ಪೊಲೀಸ್​ ಠಾಣೆಯಲ್ಲಿ ಸಂಸದ ಪ್ರಜ್ವಲ್​ ರೇವಣ್ಣ ಮತ್ತು ಹೆಚ್‌ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶಾಸಕ ರೇವಣ್ಣ ಎ1 ಆರೋಪಿಯಾಗಿದ್ದರೆ, ಪುತ್ರ ಪ್ರಜ್ವಲ್ ಎ2 ಆರೋಪಿಯಾಗಿದ್ದಾರೆ. ಇನ್ನು ಈ ಪ್ರಕರಣ ಸಾಕಷ್ಟು ಸುದ್ದಿಯಾಗುತ್ತಿದ್ದಂತೆ, ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ದಳ (SIT) ರಚಿಸಿದೆ. ಇದೀಗ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ, ಎ2 ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಕೊಂಡಿದ್ದಾರೆ.

Read More
Next Story