ಎಚ್.ಡಿಕೆ ಮೇಲೆ ವಿದ್ಯುತ್ ವೇಗದಲ್ಲಿ ಪ್ರಕರಣ, ಬೇರೆಯವರ ಮೇಲೆ ಏಕಿಲ್ಲ: ಜೆಡಿಎಸ್ ಪ್ರಶ್ನೆ
x
ಜೆಡಿಎಸ್‌

ಎಚ್.ಡಿಕೆ ಮೇಲೆ ವಿದ್ಯುತ್ ವೇಗದಲ್ಲಿ ಪ್ರಕರಣ, ಬೇರೆಯವರ ಮೇಲೆ ಏಕಿಲ್ಲ: ಜೆಡಿಎಸ್ ಪ್ರಶ್ನೆ

ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಿದ್ಯುತ್ ವೇಗದಲ್ಲಿ ಪ್ರಕರಣ ದಾಖಲಿಸುವ ರಾಜ್ಯ ಮಹಿಳಾ ಆಯೋಗ, ಕಾಂಗ್ರೆಸ್ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲಿಸುತ್ತಿಲ್ಲ ಎಂದು ಜೆಡಿಎಸ್‌ ಪ್ರಶ್ನಿಸಿದೆ.


ʻಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಿದ್ಯುತ್ ವೇಗದಲ್ಲಿ ಪ್ರಕರಣ ದಾಖಲಿಸುವ ರಾಜ್ಯ ಮಹಿಳಾ ಆಯೋಗ, ಕಾಂಗ್ರೆಸ್ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲಿಸುತ್ತಿಲ್ಲವೇಕೆ?ʼ ಎಂದು ಜೆಡಿಎಸ್ ಪ್ರಶ್ನಿಸಿದೆ.

ಈ ಸಂಬಂಧ ಜೆಡಿಎಸ್‌ನ ಖಾತೆಯಿಂದ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ರೀತಿ ಬರೆಯಲಾಗಿದೆ, ʻಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸುವ ವಿಚಾರದಲ್ಲಿ ವಿದ್ಯುತ್ ವೇಗದಲ್ಲಿ ಕೆಲಸ ಮಾಡಿದ ರಾಜ್ಯ ಮಹಿಳಾ ಆಯೋಗ, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಮಾತ್ರ ಆಮೆವೇಗಕ್ಕೆ ಶರಣಾಗಿದೆʼ ಎಂದು ಟೀಕಿಸಿದೆ.

ʻಕುಮಾರಸ್ವಾಮಿ ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿ ಅತ್ಯುತ್ಸಾಹದಿಂದ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರು, ಹಿರಿಯ ನಟಿ, ಸಂಸದೆ ಹೇಮಾಮಾಲಿನಿ ಅವರ ಬಗ್ಗೆ ಅತ್ಯಂತ ನೀಚ, ನಿಕೃಷ್ಟ ಹೇಳಿಕೆ ಕೊಟ್ಟ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲ ಬಗ್ಗೆ ಚಕಾರ ಎತ್ತುತ್ತಿಲ್ಲ. ಮಹಿಳೆಯರು ಅಡುಗೆ ಮನೆಗೇ ಲಾಯಕ್ಕು ಎನ್ನುವ ಮೂಲಕ ನಾರಿಶಕ್ತಿಯನ್ನು ತುಚ್ಛವಾಗಿ ಕಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಜಾಣಮೌನ ವಹಿಸಿದ್ದಾರೆʼ ಎಂದು ದೂರಿದೆ.

ʻಮಹಿಳಾ ಆಯೋಗದಲ್ಲಿ ಪಕ್ಷಗಳವಾರು ನೀತಿ ನಿಯಮಗಳು ಇವೆಯೇ? ಅಂತಹ ತಾರತಮ್ಯ ಇದೆ ಎನ್ನುವುದು ಇಲ್ಲಿ ಸ್ಪಷ್ಟ. ಏಕೆಂದರೆ; ರಂದೀಪ್ ಸುರ್ಜೇವಾಲ, ಶಾಮನೂರು ಶಿವಶಂಕರಪ್ಪ ಅವರಿಬ್ಬರ ವಿರುದ್ಧ ಮಹಿಳೆಯರೇ ದೂರು ನೀಡಿ ನಾಲ್ಕು ದಿನಗಳೇ ಕಳೆದರೂ ಕ್ರಮದ ಮಾತು ಇರಲಿ, ಪ್ರಕರಣವನ್ನೇ ದಾಖಲಿಸಿಲ್ಲ. ಇದೆಂಥಾ ವಿಪರ್ಯಾಸʼ ಎಂದು ಪ್ರಶ್ನಿಸಿದ್ದು, ʻಕೂಡಲೇ ಈ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಮಹಿಳಾ ಆಯೋಗ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಾತ್ಯತೀತ ಜನತಾದಳ ಬಯಸುತ್ತದೆʼ ಎಂದು ಟ್ವೀಟ್ ಮಾಡಲಾಗಿದೆ.

Read More
Next Story