ನೇರವಾಗಿ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು: ಮಧು ಬಂಗಾರಪ್ಪ
ಶಾಲೆಗಳಿಗೆ ಈಗಾಗಲೇ ಶೇ 95 ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಉಳಿದವುಗಳನ್ನು ಈ ತಿಂಗಳೊಳಗೆ ಸರಬರಾಜು ಮಾಡಲಾಗುವುದು.
ಶಾಲೆಗಳಿಗೆ ಈಗಾಗಲೇ ಶೇ 95ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಉಳಿದವುಗಳನ್ನು ಈ ತಿಂಗಳೊಳಗೆ ಸರಬರಾಜು ಮಾಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಮಂಗಳವಾರ ( ಮೇ 28) ತಿಳಿಸಿದರು. ಬೇಸಿಗೆ ರಜೆ ಮುಗಿದು ಬುಧವಾರ ( ಮೇ 29) ಶಾಲೆಗಳು ಪುನರಾರಂಭಗೊಳ್ಳಲಿವೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ವರ್ಷ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದ್ದು, ಈ ಬಾರಿ ಒಂದು ಪದ ಅಥವಾ ಸಾಲನ್ನು ಹೊರತುಪಡಿಸಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ. ಪರಿಷ್ಕೃತ ಪಠ್ಯಪುಸ್ತಕಗಳು ಈಗಾಗಲೇ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಇನ್ನು ಸೈಕಲ್ ವಿತರಣೆಯ ಬಗ್ಗೆ ಮಾತನಾಡಿದ ಸಚಿವರು,ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ನಂತರ ಸೈಕಲ್ ವಿತರಣೆಯನ್ನು ನಿಲ್ಲಿಸಲಾಗಿದೆ. ಆದರೆ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 6,000 ಗ್ರಾಮ ಪಂಚಾಯಿತಿಗಳಿದ್ದು, ಎರಡು ಗ್ರಾಮ ಪಂಚಾಯಿತಿಗಳಿಗೆ ತಲಾ ಒಂದು ಶಾಲೆಗಳಂತೆ ಒಟ್ಟು 3,000 ಕರ್ನಾಟಕ ಸಾರ್ವಜನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು. 600 ಶಾಲೆಗಳನ್ನು ಸರಕಾರ ಮೇಲ್ದರ್ಜೆಗೇರಿಸಲಿದೆ. ಇನ್ನು ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿಗಳಿಗೆ (ಎಸ್‌ಡಿಎಂಸಿ) ಈಗಾಗಲೇ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.