ಎಂಟು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ: ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್
ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಹೀಗಾಗಿ ನಾನು ಬಿಜೆಪಿ ಶಾಸಕನಾಗಿದ್ದರೂ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗುತ್ತಿರುತ್ತೇನೆ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರಿನ ಇಬ್ಬರು ಶಾಸಕರು ಸೇರಿದಂತೆ ಒಟ್ಟು ಎಂಟು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂದು ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸಿ ಪಿ ಯೋಗೇಶ್ವರ್ ಅವರಿಂದ ಚೆನ್ನಾಗಿ ದುಡಿಸಿಕೊಂಡು ಇದೀಗ ಅವರನ್ನು ಕೈಬಿಟ್ಟಿದ್ದಾರೆ. ಯೋಗೇಶ್ವರ್ ವಿಚಾರದಲ್ಲಿ ಪಕ್ಷ ಈ ರೀತಿ ಮಾಡಬಾರದಿತ್ತು. ಯೋಗೇಶ್ವರ್ ಮಾತ್ರವಲ್ಲ; ನೋಡ್ತಾ ಇರಿ, ಮುಂದೆ ಬೆಂಗಳೂರಿನ ಇಬ್ಬರು ಶಾಸಕರು ಸೇರಿದಂತೆ ಒಟ್ಟು ಎಂಟು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿದ್ದಾರೆ.
ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಹೀಗಾಗಿ ನಾನು ಬಿಜೆಪಿ ಶಾಸಕನಾಗಿದ್ದರೂ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗುತ್ತಿರುತ್ತೇನೆ. ನನ್ನ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸಿದರೂ ನನಗೆ ಭಯವಿಲ್ಲ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಎಸ್ಟಿ ಸೋಮಶೇಖರ್ ಅವರು ಈ ಮೊದಲು ಜೆಡಿಎಸ್ನಲ್ಲಿದ್ದರು. ಬಳಿಕ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 2019 ರಲ್ಲಿ ನಡೆದ ರಾಜಕೀಯ ಸ್ಥಿತ್ಯಂತರದ ವೇಳೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಳಿಕ ಬಿಜೆಪಿಯಿಂದ ಉಪ ಚುನಾವಣೆ ಎದುರಿಸಿ ಗೆದ್ದು ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು, ಕಳೆದ ಚುನಾವಣೆಯಲ್ಲಿಯೂ ಬಿಜೆಪಿಯಿಂದಲೇ ಚುನಾವಣೆಗೆ ನಿಂತು ಗೆದ್ದಿದ್ದಾರೆ. ಆದರೆ, ಈಗ ಬಿಜೆಪಿಯ ಕೆಲ ನಾಯಕರ ನಡೆಗೆ ಬೇಸರಗೊಂಡಿರುವ ಸೋಮಶೇಖರ್ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದಾರೆ.
ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಸದ್ಯಕ್ಕೆ ಕಾಂಗ್ರೆಸ್ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿತ್ತು.