7th pay commission | ಅತ್ತ ವೇತನ ಆಯೋಗದ ದರಿ, ಇತ್ತ ಗ್ಯಾರಂಟಿ ಪುಲಿ: ಸರ್ಕಾರ ಇಕ್ಕಟ್ಟಿಗೆ
x

7th pay commission | ಅತ್ತ ವೇತನ ಆಯೋಗದ ದರಿ, ಇತ್ತ ಗ್ಯಾರಂಟಿ ಪುಲಿ: ಸರ್ಕಾರ ಇಕ್ಕಟ್ಟಿಗೆ

ರಾಜ್ಯ ಸರ್ಕಾರದ ಮುಂದಿನ ಆಯ್ಕೆಗಳು ಬಿಗಡಾಯಿಸಿವೆ. ಗ್ಯಾರಂಟಿ ಯೋಜನೆಗಳ ಹಣಕಾಸು ವೆಚ್ಚದ ಭಾರದಿಂದ ಕುಸಿಯುತ್ತಿರುವ ಸರ್ಕಾರಿ ಖಜಾನೆಗೆ ಈಗ ಆ ಏಟಿನ ಜೊತೆಗೆ ವೇತನ ಆಯೋಗದ ಶಿಫಾರಸು ಜಾರಿಯ ಮತ್ತೊಂದು ಮರ್ಮಾಘಾತವನ್ನು ತಡೆದುಕೊಳ್ಳುವ ಚೈತನ್ಯ ಉಳಿದಿಲ್ಲ ಎನ್ನಲಾಗುತ್ತಿದೆ.


ಏಳನೇ ವೇತನ ಆಯೋಗದ ಶಿಫಾರಸು ಜಾರಿಯ ವಿಷಯ ಇದೀಗ ರಾಜ್ಯ ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವೆ ಹಗ್ಗಜಗ್ಗಾಟದ ಸಂಗತಿಯಾಗಿದೆ. ವೇತನ ಆಯೋಗ ವರದಿ ಸಲ್ಲಿಸಿ ಐದು ತಿಂಗಳು ಕಳೆದರೂ ಸರ್ಕಾರ, ಅದರ ಶಿಫಾರಸುಗಳ ಜಾರಿಗೆ ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದಾರೆ.

ಲೋಕಸಭಾ ಚುನಾವಣಾ ಮುನ್ನ ರಾಜ್ಯ ಸರ್ಕಾರಿ ನೌಕರರ ಸಮಾವೇಶದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇತನ ಆಯೋಗದ ವರದಿ ಜಾರಿಗೆ ತಮ್ಮ ಸರ್ಕಾರ ಬದ್ಧ ಎಂದಿದ್ದರು. ಆದರೆ, ಆಯೋಗ ವರದಿ ಕೊಟ್ಟ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಹಾಗಾಗಿ ನೌಕರರು ಚುನಾವಣೆ ಮುಗಿಯಲಿ, ರಾಜ್ಯ ಸರ್ಕಾರ ಕೂಡಲೇ ತಮ್ಮ ನಿರೀಕ್ಷೆ ನಿಜ ಮಾಡಲಿದೆ ಎಂದು ಕಾದಿದ್ದರು.

ಆದರೆ, ಇದೀಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದ ಎರಡೆರಡು ಸಂಪುಟ ಸಭೆಗಳು ನಡೆದರೂ ವೇತನ ಆಯೋಗದ ವಿಷಯವನ್ನು ನೆನಪಿಸಿಕೊಳ್ಳಲಾಗದ ಮಟ್ಟಿಗೆ ರಾಜ್ಯ ಸರ್ಕಾರ ಮರೆವಿಗೆ ಜಾರಿದೆ. ಸರ್ಕಾರದ ಈ ಜಾಣ ಮರೆವು ಸಹಜವಾಗೇ 12 ಲಕ್ಷ ಸರ್ಕಾರಿ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ಆ ಹಿನ್ನೆಲೆಯಲ್ಲಿಯೇ ಭಾನುವಾರ(ಜು.07) ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿಣಿಯಲ್ಲಿ ನೌಕರರು ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಣಯ ಕೈಗೊಂಡಿದ್ದಾರೆ. ಕಚೇರಿಗೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸುವುದೂ ಸೇರಿದಂತೆ ವಿವಿಧ ಹಂತದ ಹೋರಾಟ ಆರಂಭಿಸಲು ಕಾರ್ಯಕಾರಿಣಿ ನಿರ್ಧರಿಸಿದೆ.

ಅದರಂತೆ ಹೋರಾಟದ ಮೊದಲ ಹಂತವಾಗಿ ಜುಲೈ ಎರಡನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವೇತನ ಆಯೋಗದ ಶಿಫಾರಸು ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಮನವಿ ಸಲ್ಲಿಸುವುದು, ಸರ್ಕಾರ ಆ ಮನವಿಗಳಿಗೆ ಸ್ಪಂದಿಸಿ ಘೋಷಣೆ ಮಾಡದೇ ಇದ್ದಲ್ಲಿ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಿಂದಲೇ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲು ನೌಕರರ ಸಂಘ ನಿರ್ಧರಿಸಿದೆ.

ಇದು ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಕ್ಕೆ ನೀಡುತ್ತಿರುವ ಮತ್ತೊಂದು ಗಡುವು. ಈ ಮೊದಲು ಸಂಘ ಹಲವು ಗುಡುವುಗಳನ್ನು ನೀಡಿದೆ. ಆದರೆ, ಎರಡು ಸಂಪುಟ ಸಭೆಗಳಲ್ಲಿಯೂ ಆ ವಿಷಯವೇ ಪ್ರಸ್ತಾಪಕ್ಕೆ ಬರದೇ ಇರುವುದು ಮತ್ತು ಹಣಕಾಸು ಇಲಾಖೆ ವೇತನ ಹೆಚ್ಚಳದ ಕುರಿತು ನಕಾರಾತ್ಮಕ ಅಭಿಪ್ರಾಯ ನೀಡಿರುವುದು ಸಹಜವಾಗೇ ನೌಕರರನ್ನು ಆತಂಕಕ್ಕೆ ದೂಡಿದೆ.

“ನೌಕರರು ಸರ್ಕಾರದ ಧೋರಣೆಯಿಂದ ವಿಚಲಿತರಾಗಿದ್ದಾರೆ. ತಿಂಗಳುಗಳೇ ಕಳೆದರೂ ಆಯೋಗದ ವರದಿ ಜಾರಿಗೆ ಸರ್ಕಾರ ಮುಂದಾಗಿಲ್ಲ. ಈ ಹಿಂದೆ ನೌಕರರ ಸಮಾವೇಶದಲ್ಲಿ ತಾವೇ ಕೊಟ್ಟಿದ್ದ ಮಾತನ್ನು ಕೂಡ ಮುಖ್ಯಮಂತ್ರಿಗಳು ಮರೆತಿದ್ದಾರೆ. ಹಾಗಾಗಿ ಎಲ್ಲಾ ಜಿಲ್ಲೆಗಳ ಎಲ್ಲಾ ಇಲಾಖೆಗಳಿಂದ ನೌಕರರು ಸಂಘದ ಮೇಲೆ ಒತ್ತಡ ಹಾಕಿ ಹೋರಾಟಕ್ಕೆ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ ಹೋರಾಟ ತೀವ್ರಗೊಳಿಸುವುದು ಈಗ ನಮಗೆ ಅನಿವಾರ್ಯ” ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಹೇಳಿದ್ದಾರೆ.

ಅತ್ತ ವೇತನ ಆಯೋಗದ ಧರಿ, ಇತ್ತ ಗ್ಯಾರಂಟಿ ಪುಲಿ

ಆದರೆ, ರಾಜ್ಯ ಸರ್ಕಾರದ ಮುಂದಿನ ಆಯ್ಕೆಗಳು ಬಿಗಡಾಯಿಸಿವೆ. ಗ್ಯಾರಂಟಿ ಯೋಜನೆಗಳ ಹಣಕಾಸು ವೆಚ್ಚದ ಭಾರದಿಂದ ಕುಸಿಯುತ್ತಿರುವ ಸರ್ಕಾರದ ಖಜಾನೆಗೆ ಈಗ ಆ ಏಟಿನ ಜೊತೆಗೆ ವೇತನ ಆಯೋಗದ ಶಿಫಾರಸು ಜಾರಿಯ ಮತ್ತೊಂದು ಮರ್ಮಾಘಾತವನ್ನು ತಡೆದುಕೊಳ್ಳುವ ಚೈತನ್ಯ ಉಳಿದಿಲ್ಲ ಎನ್ನಲಾಗುತ್ತಿದೆ.

ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಮುಖ್ಯಮಂತ್ರಿಗಳಿಗೆ ಇದನ್ನೇ ವರದಿ ನೀಡಿದ್ದಾರೆ. ಒಂದು ಕಡೆ ಗ್ಯಾರಂಟಿ ಯೋಜನೆಗಳು ಖಜಾನೆ ಬರಿದುಮಾಡುತ್ತಿದ್ದರೆ ಮತ್ತೊಂದು ಕಡೆ ನಿರೀಕ್ಷಿತ ಪ್ರಮಾಣದಲ್ಲಿ ಜಿಎಸ್ಟಿ ಮತ್ತು ಇತರೆ ಆದಾಯ ಮೂಲಗಳಿಂದ ಆದಾಯ ಬರುತ್ತಿಲ್ಲ. ಹಾಗಾಗಿ ವೇತನ ಪರಿಷ್ಕರಣೆ ಮಾತ್ರವಲ್ಲ; ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದು ಕೂಡ ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.

ವಾರ್ಷಿಕ 52 ಸಾವಿರ ಕೋಟಿಯಷ್ಟು ಹೆಚ್ಚುವರಿ ಹೊರೆಯನ್ನು ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ಹೊರಿಸಿವೆ. ವಾರ್ಷಿಕ ಸರ್ಕಾರಿ ವೆಚ್ಚಗಳು ಮತ್ತು ಹಣಕಾಸು ಬದ್ಧತೆಗಳ ಹೊರತಾಗಿ ಬೀಳುವ ಈ ಹೊರೆಯಿಂದ ಬೊಕ್ಕಸ ಬಡವಾಗುತ್ತಿದೆ. ರಾಜ್ಯದ ಹಣಕಾಸು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರದ ಪಾಲಿಗೆ ಗ್ಯಾರಂಟಿ ಯೋಜನೆಗಳು ಒಂದು ರೀತಿಯಲ್ಲಿ ಹುಲಿ ಸವಾರಿಯಂತಾಗಿದೆ.

ಈ ನಡುವೆ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪಟ್ಟು ಹಿಡಿದಿದ್ದಾರೆ. ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದಲ್ಲಿ ಸರ್ಕಾರಕ್ಕೆ ತತಕ್ಷಣಕ್ಕೆ ವಾರ್ಷಿಕ 17 ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಅಂದರೆ, ಈಗ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗೆ ಮಾಡುತ್ತಿರುವ ವೆಚ್ಚಕ್ಕಿಂತ ಹೆಚ್ಚುವರಿಯಾಗಿ ಶೇ.25ರಷ್ಟು ವೆಚ್ಚ ಮಾಡಬೇಕಾಗುತ್ತದೆ.

ಹಾಗಾಗಿ ವೇತನಕ್ಕಾಗಿ 80,500 ಕೋಟಿ, ಪಿಂಚಣಿಗಾಗಿ 32,500 ಕೋಟಿ ಸೇರಿದಂತೆ ಒಟ್ಟು 1.12 ಲಕ್ಷ ಕೋಟಿಯಷ್ಟು ವಾರ್ಷಿಕ ವೇತನ ಮತ್ತು ಪಿಂಚಣಿಗಾಗಿ ವ್ಯಯಿಸಬೇಕಾಗುತ್ತದೆ ಎನ್ನಲಾಗಿದೆ.

ಹಾಗಾಗಿ ಸರ್ಕಾರಕ್ಕೆ ಸದ್ಯ ಅತ್ತ ವೇತನ ಆಯೋಗದ ಜಾರಿಯ ಧರಿ, ಇತ್ತ ಗ್ಯಾರಂಟಿ ಯೋಜನೆಯ ಪುಲಿ ಎಂಬ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ.

Read More
Next Story