ಅಳಿವಿನಂಚಿನ ಆಲಿವ್ ರಿಡ್ಲೆ ಆಮೆ ಮೊಟ್ಟೆಗಳಿಗೆ ಶ್ವಾನ ಕಂಟಕ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಹೊನ್ನಾವರದ ಟೊಂಕ ಪ್ರದೇಶದಲ್ಲಿ ಆಲಿವ್ ರಿಡ್ಲೆ ಆಮೆಗಳ ಸುಮಾರು ಏಳು ಗೂಡಿನ 700 ಮೊಟ್ಟೆಗಳನ್ನು ಬೀದಿ ನಾಯಿಗಳು ನಾಶಪಡಿಸಿವೆ.\
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕದ ಕಡಲತೀರದಲ್ಲಿ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳು 700 ಕ್ಕೂ ಅಧಿಕ ಆಲಿವ್ ರಿಡ್ಲೇ ಕಡಲಾಮೆ ಮೊಟ್ಟೆಗಳನ್ನು ನಾಶಪಡಿಸಿವೆ.
ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದವಾದ ಆಲಿವ್ ರಿಡ್ಲೇಯನ್ನು ಭಾರತ ಸರ್ಕಾರವು, 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿಯಲ್ಲಿ ಶೆಡ್ಯೂಲ್ 1 ಪ್ರಾಣಿಗಳಾಗಿ ಗುರುತಿಸಿದ್ದು, ಹುಲಿಗಳು ಮತ್ತು ಆನೆಗಳಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರರ್ಥ ಅವುಗಳಿಗೆ ಕಾನೂನಿನ ಮೂಲಕ ಅತ್ಯುನ್ನತ ರಕ್ಷಣೆಯನ್ನು ನೀಡಲಾಗಿದ್ದು, ಅವುಗಳಿಗೆ ಮಾಡುವ ಯಾವುದೇ ಹಾನಿಯು ಶಿಕ್ಷಾರ್ಹ ಅಪರಾಧವಾಗಿದೆ.
ಇದನ್ನೂ ಓದಿ: HPPL Project | ಆಲಿವ್ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ
ನಿರ್ಜನ ಕಡಲ ತೀರದ ಪ್ರದೇಶದಲ್ಲಿ ಸುಮಾರು ಎರಡಡಿ ಗುಂಡಿ ತೋಡಿ ಮೊಟ್ಟೆಗಳನ್ನು ಇಡುವ ಈ ಆಮೆಗಳು ಸಂತಾನೋತ್ಪತ್ತಿಗಾಗಿ ಮಾತ್ರ ಕಡಲಿನಿಂದ ಹೊರ ಬರುತ್ತವೆ. ಕಡಲಾಮೆ ಮೊಟ್ಟೆ ಇಟ್ಟಿರುವ ಗೂಡುಗಳು ತಜ್ಞರಿಗೆ ಮತ್ತು ಪರಿಣಿತರಿಗಷ್ಟೇ ಗುರುತು ಹಿಡಿಯಲು ಸಾಧ್ಯವಿದೆ. ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಮೊಟ್ಟೆ ಇಟ್ಟು ಹೋಗುತ್ತಿರುವ ಆಮೆ ಗೂಡುಗಳನ್ನು ಸ್ಥಳೀಯ ಮೀನುಗಾರ ಯುವಕರು ಸಂರಕ್ಷಿಸುತ್ತಿದ್ದು, ಗೂಡುಗಳು ಕಂಡೊಡನೆ ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಅದರ ರಕ್ಷಣೆಗೆ ಬೇಕಾದ ನೆಟ್ ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಾರೆ.
ಕಾಸರಕೋಡು ಟೊಂಕವು ಕರಾವಳಿ ಕರ್ನಾಟಕದ ಕಡಲಾಮೆಗಳ ಗೂಡುಕಟ್ಟುವ ಪ್ರಮುಖ ತಾಣಗಳಲ್ಲಿ ಒಂದು. ಅರಣ್ಯಾಧಿಕಾರಿಗಳ ಪ್ರಕಾರ ಹೊನ್ನಾವರ ವಿಭಾಗದಲ್ಲಿ ಅಳಿವಿನಂಚಿನಲ್ಲಿರುವ ಆಮೆಗಳ 56 ಗೂಡುಕಟ್ಟುವ ತಾಣಗಳನ್ನು ಗುರುತಿಸಲಾಗಿದ್ದು, ಕೇವಲ ಟೊಂಕಾದಲ್ಲೇ 36ಕ್ಕೂ ಅಧಿಕ ಆಮೆ ಗೂಡುಗಳನ್ನು ಪತ್ತೆ ಹಚ್ಚಲಾಗಿದೆ.
ಇಂತಹ ಒಂದೊಂದು ಗೂಡುಗಳಲ್ಲಿ 100-150 ಮೊಟ್ಟೆಗಳು ಇರುತ್ತವೆ. ಅಂತಹ ಏಳು ಗೂಡುಗಳನ್ನು ಕಳೆದ ವಾರ ಬೀದಿ ನಾಯಿಗಳು ನಾಶಪಡಿಸಿದ್ದು, 700 ಕ್ಕೂ ಅಧಿಕ ಆಮೆ ಮೊಟ್ಟೆಗಳು ನಾಶವಾಗಿವೆ ಎಂದು ಆಮೆ ಮೊಟ್ಟೆ ರಕ್ಷಣೆ ಮಾಡುತ್ತಾ ಬಂದಿರುವ ಸ್ಥಳೀಯ ಮೀನುಗಾರ ಗಣಪತಿ ತಾಂಡೇಲ ದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
“ನಾಲ್ಕು ದಿನಗಳ ಹಿಂದೆ 3 ಗೂಡುಗಳನ್ನು ಬೀದಿನಾಯಿಗಳು ನಾಶಪಡಿಸಿದ್ದವು. ನಿನ್ನೆ ಮತ್ತೆ ನಾಲ್ಕು ಗೂಡುಗಳನ್ನು ಕೆದಕಿ ಮೊಟ್ಟೆಗಳನ್ನು ತಿಂದು ಹಾಕಿವೆ. ಈ ಪ್ರದೇಶದ ಆಸುಪಾಸು ಸುಮಾರು 2 ಕಿಮೀ ತನಕ ಯಾರೂ ಇರುವುದಿಲ್ಲ. ಬೀದಿ ನಾಯಿಗಳಿಗೆ ಹಸಿದಾಗ ಏನು ಸಿಗುವುದೂ ಇಲ್ಲ. ಹಾಗಾಗಿ, ಆಮೆ ಮೊಟ್ಟೆಗಳನ್ನು ಹುಡುಕಿ ತಿನ್ನುತ್ತವೆ” ಎಂದು ಗಣಪತಿ ಹೇಳಿದರು.
“ಆದರೆ, ಅರಣ್ಯ ಇಲಾಖೆಯವರು ಕೇವಲ ಮೂರು ಗೂಡುಗಳು ಮಾತ್ರ ನಾಶವಾಗಿದೆ ಎಂದು ಹೇಳುತ್ತಿದ್ದಾರೆ. ಮೂರು ಗೂಡುಗಳು ನಾಶವಾಗಿದ್ದನ್ನು ನಾವು ಮೊದಲೇ ತಿಳಿಸಿದ್ದೆವು. ಅದಾಗಿ ಎರಡು ದಿನಗಳ ನಂತರ ಸೋಮವಾರ ರಾತ್ರಿ ಮತ್ತೆ ನಾಲ್ಕು ಗೂಡುಗಳನ್ನು ಬೀದಿನಾಯಿಗಳು ನಾಶಪಡಿಸಿವೆ. ಗುರುತಿಸಿರುವ ಗೂಡುಗಳನ್ನು ಕಾಯಲು ಯಾರನ್ನಾದರೂ ಅರಣ್ಯ ಇಲಾಖೆ ನೇಮಿಸಬೇಕಿತ್ತು. ರಾತ್ರಿ ಹೊತ್ತು ಇಲ್ಲಿ ಕಾವಲಿಗೆ ಯಾರಾದರೂ ಇದ್ದರೆ ಬೀದಿ ನಾಯಿಗಳಿಂದ ಆಮೆ ಮೊಟ್ಟೆಗಳನ್ನು ರಕ್ಷಿಸಬಹುದು” ಎಂದು ಅವರು ಹೇಳುತ್ತಾರೆ.
ಅರಣ್ಯ ಇಲಾಖೆಯ ಬೇಜವಾಬ್ದಾರಿ ಬಗ್ಗೆ ಸ್ಥಳೀಯ ಮೀನುಗಾರ ರಾಜು ಟೊಂಕ ಅವರು ದಿ ಫೆಡೆರಲ್ ಕರ್ನಾಟಕ ದೊಂದಿಗೆ ಮಾತನಾಡುತ್ತಾ ಆಕ್ರೋಶ ಹೊರ ಹಾಕಿದ್ದು, “ಅರಣ್ಯ ಇಲಾಖೆಯವರಿಗೆ ಆಮೆ ಮೊಟ್ಟೆ ಇಡುತ್ತೆ ಅನ್ನುವುದು ಗೊತ್ತಾಗಲ್ಲ. ನಮ್ಮ ಮೀನುಗಾರರೇ ಆಮೆ ಗೂಡುಗಳನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆಗೆ ತಿಳಿಸಬೇಕು, ಅದರ ಸುತ್ತ ಕಟ್ಟಲೂ ನೆಟ್ ಕೂಡಾ ನಾವೇ ಕೊಡುತ್ತೇವೆ. ಆದರೆ, ಅವುಗಳ ಕಾವಲಿಗೆ ಬೇಕಾದ ಜನರನ್ನು ನೇಮಿಸುತ್ತಲೂ ಇಲ್ಲ. ಕಳೆದ ವರ್ಷ ಒಂದಿಬ್ಬರನ್ನು ನೇಮಿಸಲಾಗಿತ್ತು. ಈ ಬಾರಿ ಓರ್ವ ಹಿರಿಯ ವ್ಯಕ್ತಿಯನ್ನು ಮಾತ್ರ ನೇಮಿಸಿದ್ದಾರೆ. ಅವರಿಗೆ 24 ಗಂಟೆಯೂ ಕಾವಲಿರಲು ಆಗುತ್ತದೆಯೇ? ಅರಣ್ಯ ಇಲಾಖೆಯವರು ಅದರ ತಂಟೆಗೆ ಬಾರದಿದ್ದರೆ ನಾವೇ ಅವುಗಳನ್ನು ಕಾಪಾಡುತ್ತೇವೆ. ಹೀಗೆ, ಬೀದಿನಾಯಿಗಳ ಆಹಾರವಾಗಲು ಬಿಡಬಾರದು” ಎಂದು ಅವರು ಹೇಳಿದ್ದಾರೆ.
"ಆಮೆಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಗೂಡುಕಟ್ಟುವ ಪ್ರದೇಶಗಳಲ್ಲಿ ಹೆಚ್ಚಿನ ಗಸ್ತು ತಿರುಗಲು ಅಧಿಕಾರಿಗಳಿಗೆ ನಾವು ಒತ್ತಾಯಿಸುತ್ತಿದ್ದೇವೆ. ಸ್ಥಳೀಯ ಆಡಳಿತವು ಬೀದಿನಾಯಿಗಳನ್ನು ಸೆರೆಹಿಡಿಯಬೇಕು ಮತ್ತು ಮೊಟ್ಟೆ ಇಡುವ ಸಂದರ್ಭದಲ್ಲಿ ಬೀಚ್‌ಗಳಿಗೆ ನಾಯಿಗಳು ಹೋಗದಂತೆ ತಡೆಯಬೇಕು" ಎಂದು ಸ್ಥಳೀಯರೂ ಆಗಿರುವ ಸಮುದ್ರ ಜೀವಶಾಸ್ತ್ರಜ್ಞ ಪ್ರಕಾಶ್ ಮೇಸ್ತಾ ಹೇಳಿದ್ದಾರೆ.
ಆದರೆ, ಏಳು ಆಮೆ ಗೂಡುಗಳು ನಾಶವಾಗಿರುವುದನ್ನು ಆರ್‌ಎಫ್‌ಒ ವಿಕ್ರಮ್ ನಿರಾಕರಿಸುತ್ತಾರೆ. ಸ್ಥಳೀಯರ ಆರೋಪಗಳ ಬಗ್ಗೆ ದಿ ಫೆಡೆರಲ್ ಕರ್ನಾಟಕ ವಿಕ್ರಮ್ ಅವರನ್ನು ಸಂಪರ್ಕಿಸಿದೆ.
“ಏಳು ಗೂಡುಗಳು ನಾಶವಾಗಿಲ್ಲ, ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮೂರು ಗೂಡುಗಳು ನಾಶವಾಗಿರುವುದು ಹೌದು” ಎಂದು ಆರ್‌ಎಫ್‌ಒ ತಿಳಿಸಿದ್ದಾರೆ. ಕಾವಲಿಗೆ ಜನರನ್ನು ನೇಮಿಸಿಲ್ಲ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದಾಗ, ʼಹಾಗೇನೂ ಇಲ್ಲ, ನಾವು ರಾತ್ರಿ ಹೊತ್ತಲ್ಲೂ ಗಸ್ತು ತಿರುಗುತ್ತೇವೆʼ ಎಂದು ಉತ್ತರಿಸಿದ ಅವರು ಸ್ಥಳೀಯರ ಆರೋಪಗಳನ್ನು ನಿರಾಕರಿಸಿದ್ದಾರೆ.
“ಈಗಾಗಲೇ, ಹೊನ್ನಾವರದ ಖಾಸಗಿ ಬಂದರು ಯೋಜನೆಯ ಕಾಮಗಾರಿಗಳಿಂದಾಗಿ ಆಮೆಗಳು ಮೊಟ್ಟೆ ಇಡುವ ಸ್ಥಳಗಳು ನಾಶವಾಗುತ್ತಿವೆ. ಭಾರೀ ವಾಹನಗಳ ಅನಿಯಂತ್ರಿತ ಓಡಾಟವು ಆಮೆಗಳು ಮೊಟ್ಟೆ ಇಡುವಂತಹ ಸೂಕ್ಷ್ಮ ಪ್ರದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ, ಈ ಪ್ರದೇಶದಲ್ಲಿ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ ಇಡುವುದಿಲ್ಲ ಎಂದು ದಿಕ್ಕು ತಪ್ಪಿಸಲು ಬಂದರು ಕಂಪೆನಿಯು ಪ್ರಯತ್ನ ಪಡುತ್ತಿದೆ. ಅದಕ್ಕಾಗಿ, ಆಮೆ ಮೊಟ್ಟೆ ಇಡುವ ಪ್ರದೇಶಗಳಿಗೆ ಬಾಲ್ಡ್ರಸ್ ಕಲ್ಲು, ಕೆಮ್ಮಣ್ಣುಗಳನ್ನು ತಂದು ಸುರಿಯುತ್ತಿದ್ದಾರೆ. ಇದೆಲ್ಲದರ ನಡುವೆ, ನಾವು ಆಮೆಗಳ ಗೂಡುಗಳನ್ನು ರಕ್ಷಿಸುತ್ತಿದ್ದೇವೆ. ಅವನ್ನು ಅರಣ್ಯ ಇಲಾಖೆ ಸುಪರ್ದಿಗೆ ಬಿಟ್ಟು ಕೊಟ್ಟರೆ ಅವರು ಬೇಜವಾಬ್ದಾರಿಯಿಂದ ವರ್ತಿಸಿ ಬೀದಿ ನಾಯಿಗಳಿಗೆ ಆಹಾರ ಮಾಡಿಕೊಡುತ್ತಿದ್ದಾರೆ” ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ಯುವಕರೊಬ್ಬರು ಹೇಳಿದ್ದಾರೆ.