
ಪೊಲೀಸ್ ಮಕ್ಕಳಿಗಾಗಿ ಏಳು ಪಬ್ಲಿಕ್ ಶಾಲೆ: ಸಿಎಂ ಸಿದ್ದರಾಮಯ್ಯ ಘೋಷಣೆ
ಜನರ ಪ್ರಾಣ, ಆಸ್ತಿ ರಕ್ಷಿಸುವ ಪೊಲೀಸ್ ಸಿಬ್ಬಂದಿಯ ಹಿತ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ 10 ಸಾವಿರ ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ 2000 ಕೋಟಿ ರೂ ನೀಡಲಾಗಿದೆ.
ಪೊಲೀಸ್ ಮಕ್ಕಳಿಗಾಗಿ ಏಳು ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಸಂಸ್ಮರಣಾ ದಿನದಂದು ಘೋಷಿಸಿದ್ದಾರೆ.
ಅವರು ಸೋಮವಾರ ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದರು. ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಜನರ ಪ್ರಾಣ, ಆಸ್ತಿ ರಕ್ಷಿಸುವ ಪೊಲೀಸ್ ಸಿಬ್ಬಂದಿಯ ಹಿತ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ 10 ಸಾವಿರ ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ 2000 ಕೋಟಿ ರೂ ನೀಡಲಾಗಿದೆ. 200 ಕೋಟಿ ರೂ ವೆಚ್ಚದಲ್ಲಿ 100 ಹೊಸ ಠಾಣೆಗಳ ನಿರ್ಮಾಣ ಆಗುತ್ತಿವೆ ಎಂದರು.
ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಮಂದಿ, ರಾಜ್ಯದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದ ಮೇಲಿದ್ದಾಗಲೇ ಹುತಾತ್ಮರಾಗಿದ್ದಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಾಗ, ಜನರ ಪ್ರಾಣ, ಮಾನ ಕಾಪಾಡುವ ಹೊತ್ತಲ್ಲಿ ಇವರೆಲ್ಲಾ ಹುತಾತ್ಮರಾಗಿದ್ದಾರೆ ಎಂದರು.
ದೇಶದಲ್ಲಿ ಆಂತರಿಕ ಭದ್ರತೆ ಕಾಪಾಡುವಲ್ಲಿ, ದೌರ್ಜನ್ಯ, ಅಪರಾಧ, ದುರಂತಗಳನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು ಪೊಲೀಸ್ ಸಿಬ್ಬಂದಿ. ಹೀಗಾಗಿ ಇವರ ಜವಾಬ್ದಾರಿ ಬಹಳ ದೊಡ್ಡದು ಎಂದರು. ರಾಜ್ಯದಲ್ಲಿ ಅಪರಾಧ ತಡೆಯಲು 6000 ಸಾವಿರ ಸಿಸಿಟಿವಿ ಕ್ಯಾಮೆರಾಗಳು, 260 ಕ್ಕೂ ಹೆಚ್ಚು ಹೆದ್ದಾರಿ ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅತೀಕ್ ಎಲ್.ಕೆ, ಗೃಹ ಕಾರ್ಯದರ್ಶಿ ಉಮಾಶಂಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.