
ಆರೋಪಿಗಳನ್ನು ಬಂಧಿಸಿದ ಪೊಲೀಸರು
6 ವರ್ಷದ ಹಳೆ ಕೊಲೆ ಪ್ರಕರಣ ಭೇದಿಸಿದ ಚಿಕ್ಕಬಳ್ಳಾಪುರ ಪೊಲೀಸರು: ಐವರ ಬಂಧನ
ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆ ಆಗಿದ್ದಾನೆ. ದಿವಾಕರ್, ಹರೀಶ್, ಮಾರ್ತಾಂಡ ಅಲಿಯಾಸ್ ಆಟೋ ಚಂದ್ರ, ರಂಜೀತ್ ಕುಮಾರ್, ಮಂಜುನಾ ಅಲಿಯಾಸ್ ಕಬಾಬ್ ಮಂಜು ಬಂಧಿತರು.
ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ 27 ವರ್ಷದ ಯುವಕನ ಕೊಲೆ ಪ್ರಕರಣವನ್ನು ಕೋಲಾರ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇದಿಸುವ ಮೂಲಕ ಆರು ವರ್ಷಗಳ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ.
ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆ ಆಗಿದ್ದಾನೆ. ದಿವಾಕರ್, ಹರೀಶ್, ಮಾರ್ತಾಂಡ ಅಲಿಯಾಸ್ ಆಟೋ ಚಂದ್ರ, ರಂಜೀತ್ ಕುಮಾರ್, ಮಂಜುನಾ ಅಲಿಯಾಸ್ ಕಬಾಬ್ ಮಂಜು ಬಂಧಿತರು.
ಪ್ರಕರಣದ ಹಿನ್ನೆಲೆ
ಶಿಡ್ಲಘಟ್ಟ ನಗರದ ಆಟೋ ಚಾಲಕನಾಗಿದ್ದ ಗಿರೀಶ್ (27) ನನ್ನು ಹಳೆ ದ್ವೇಷದ ಕಾರಣ 2019ರ ಮೇ 12ರಂದು ಕೊಲೆ ಮಾಡಲಾಗಿತ್ತು. ಗಿರೀಶ್ ಕಾಣೆಯಾದ ಬಗ್ಗೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಗಿರೀಶ್‌ನನ್ನು ಕಿಡ್ನಾಪ್ ಮಾಡಿ ನರಸಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಆರೋಪಿಗಳು ಶವವನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲಿಪಿಲಿ ಮಂಗಲ ಗ್ರಾಮದ ಬಳಿ ಎಸೆದಿದ್ದರು.
ಈ ಕುರಿತು ತಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಳಿ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಆದರೆ ಸರಿಯಾದ ಸಾಕ್ಷ್ಯಾಧಾರ ಕೊರತೆ ಮತ್ತು ಚಾರ್ಜ್ಶೀಟ್ ಸಲ್ಲಿಸಿರಲಿಲ್ಲ. ಹೀಗಾಗಿ ಕೋರ್ಟ್ ಬಂಧಿತ ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಿತ್ತು. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪ ಕೇಳಿಬಂದಿತ್ತು. ಕೇಸ್ ಹಾಗೇ ಉಳಿದುಕೊಂಡಿತ್ತು. ಬಳಿಕ ಬೇರೆ ಅಧಿಕಾರಿಗಳ ಗಮನಕ್ಕೆ ಬಂದು ಪ್ರಕರಣವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಸದ್ಯ ಐವರು ಆರೋಪಿಗಳನ್ನು ಬಂಧಿಸಿ, ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.