Road Accident| ರಾಜ್ಯದಲ್ಲಿ ಒಂದೇ ದಿನ ಪ್ರತ್ಯೇಕ ರಸ್ತೆ ಅಪಘಾತಗಳಿಗೆ  51 ಬಲಿ
x

Road Accident| ರಾಜ್ಯದಲ್ಲಿ ಒಂದೇ ದಿನ ಪ್ರತ್ಯೇಕ ರಸ್ತೆ ಅಪಘಾತಗಳಿಗೆ 51 ಬಲಿ


ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಭಾನುವಾರ ಹಾಸನದಲ್ಲಿ ನಡೆದ ಅಪಘಾತದ ಬಳಿಕ ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻಭಾನುವಾರ ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 51 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ ಹಲವು ಪ್ರಕರಣಗಳು ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ಸಂಭವಿಸಿದೆ. ರಸ್ತೆ ಸುರಕ್ಷತೆಗೆ ಎಲ್ಲ ಪಾಲುದಾರರಿಂದ ಜವಾಬ್ದಾರಿಯುತ ನಡವಳಿಕೆಯ ಅಗತ್ಯವಿದೆʼʼ ಎಂದಿದ್ದಾರೆ.

ಸಂಚಾರಿ ನಿಯಮಗಳನ್ನು ಪಾಲಿಸಿ, ಅತಿ ವೇಗದಿಂದ ವಾಹನ ಚಲಾಯಿಸದಿರಿ ಎಂದು ಟ್ರಾಫಿಕ್​ ಪೊಲೀಸರು ಅರಿವು ಮೂಡಿಸುತ್ತಿದ್ದರೂ, ಕೆಲ ವಾಹನ ಸವಾರರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕಳೆದ ಚ ಸಂಭವಿಸಿದ ರಸ್ತೆ ಅಪಘತಕ್ಕೆ 51 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಹೆಚ್ಚಿನ ಅಪಘಾತಗಳು ವರದಿಯಾಗಿದ್ದು, ಈ ಬಗ್ಗೆ ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮಾಧ್ಯಮಗಳ ಜೊತೆ ಮಾತನಾಡಿ, ʻʻಅಧಿಕಾರಿಗಳು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಹೆಚ್ಚಿನ ಅಪಘಾತಗಳು ಕಳಪೆ ಸವಾರಿ/ಚಾಲನಾ ಕೌಶಲ್ಯ ಇಲ್ಲದಿರುವುದರಿಂದ ಆಗುತ್ತವೆ. ಚಾಲಕರನ್ನು ಪರೀಕ್ಷಿಸಲು ಆರ್‌ಟಿಒ ನಿಯಮಗಳು ಕಠಿಣವಾಗಿರಬೇಕುʼʼ ಎಂದು ಹೇಳಿದರು.

ಹಾಸನ ಅಪಘಾತ: ಒಂದೇ ಕುಟುಂಬದ ಆರು ಜನ ಸಾವು

ಹಾಸನ ನಗರದ ಹೊರವಲಯದಲ್ಲಿ ಭಾನುವಾರ ಬೆಳಗ್ಗೆ 6.30ರ ಸುಮಾರಿಗೆ ಕಾರು ಮತ್ತು ಕಂಟೈನರ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಮತ್ತು ಒಂದು ಮಗು ಸಾವನ್ನಪ್ಪಿದ್ದಾರೆ. ಮೃತರನ್ನು ಒಂದೇ ಕುಟುಂಬದ ನಾರಾಯಣಸ್ವಾಮಿ, ಸುನಂದಾ, ರವಿಕುಮಾರ್, ನೇತ್ರಾ, ಚೇತನ್, ರಾಕೇಶ್ ಎಂದು ಗುರುತಿಸಲಾಗಿದೆ.

ಮೃತರು ಚಿಕ್ಕಬಳ್ಳಾಪುರ ಜಿಲ್ಲೆ ಹೊಸಕೋಟೆ ತಾಲೂಕಿನ ಕಾರಹಳ್ಳಿ ಮೂಲದವರು ಎನ್ನಲಾಗಿದೆ. ನಿದ್ದೆ ಮಂಪರಿನಲ್ಲಿ ಚಾಲಕ ಕಾರು ಚಲಾಯಿಸಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಮುಂದಿನ ಲೇನ್‌ಗೆ ಪಲ್ಟಿಯಾಗಿ ಎದುರು ದಿಕ್ಕಿನಿಂದ ಬರುತ್ತಿದ್ದ ಸರಕು ಸಾಗಣೆ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ.

ಇನ್ನು ಮೇ 23ರ ರಾತ್ರಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಜನ ಗಾಯಗೊಂಡಿದ್ದರು. ಅಜಾಗರೂಕ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಎಡಿಜಿಪಿ ಅಲೋಕ್​ ಕುಮಾರ್​ ಹೇಳಿದ್ದಾರೆ.

Read More
Next Story