Greater Bangalore Authority| ಜಿಬಿಎ ಚುನಾವಣೆ: ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ: ಐತಿಹಾಸಿಕ ಘೋಷಣೆ
x

Greater Bangalore Authority| ಜಿಬಿಎ ಚುನಾವಣೆ: ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ: ಐತಿಹಾಸಿಕ ಘೋಷಣೆ

ಬೆಂಗಳೂರಿನ ಪಾಲಿಗೆ ಇದೊಂದು ಐತಿಹಾಸಿಕ ದಿನ. ಈ ದಿನದಿಂದ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಸಿಎಂ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ಸಮಿತಿ ರಚನೆಯಾಗಿದೆ.


ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪಾಲಿಗೆ ಇದೊಂದು ಐತಿಹಾಸಿಕ ದಿನ. ಈ ದಿನದಿಂದ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಪಾಲಿಕೆಗಳನ್ನು ಬೆಂಗಳೂರಿನ ಹೆಸರಿನೊಂದಿಗೆ ರಚಿಸಲು ಕಾನೂನಿನಲ್ಲೇ ತಿಳಿಸಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ಸಮಿತಿ ರಚನೆಯಾಗಿದೆ. ಇದರಲ್ಲಿ 75 ಸದಸ್ಯರನ್ನು ನೇಮಕ ಮಾಡಲಾಗಿದೆ” ಎಂದು ಹೇಳಿದರು

ಗ್ರೇಟರ್‌ ಬೆಂಗಳೂರಿಗೆ ಚುನಾವಣೆ ನಡೆಸುವ ವೇಳೆ ಮಹಿಳಾ ಮೀಸಲಾತಿಯನ್ನು ಶೇ.50ರಷ್ಟು ಕಲ್ಪಿಸಲಾಗುವುದು. ಇದರಿಂದ ಮಹಿಳೆಯರಿಗೆ ಆದ್ಯತೆ ನೀಡಿದಂತಾಗುತ್ತದೆ. ಎಲ್ಲಾ ವಲಯಗಳಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳಾಗಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಆಯುಕ್ತರಿಗೆ ನೆರವಾಗಲು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಕೆಎಎಸ್ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಕಡ್ಡಾಯವಾಗಿ ಇರುತ್ತಾರೆ. ಈ ಹಿಂದೆ ಇದ್ದ 27 ವಿಭಾಗಗಳನ್ನು 50 ವಿಭಾಗಗಳಾಗಿ ಮಾಡಿದ್ದೇವೆ. 75 ಉಪ ವಿಭಾಗಗಳನ್ನು 150ಕ್ಕೆ ಏರಿಸಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಗರಿಷ್ಠ 150 ವಾರ್ಡ್ ಗಳವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಾಲಿಕೆಯಲ್ಲಿ ಸರಾಸರಿಯಲ್ಲಿ 100 ವಾರ್ಡ್ ಗಳಂತೆ ಬೆಂಗಳೂರಿನಲ್ಲಿ ಸುಮಾರು 500 ಹೊಸ ನಾಯಕರುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು 50:50 ಇರುತ್ತಾರೆ ಎಂದು ತಿಳಿಸಿದರು.

ಬುಧವಾರದಿಂದ ತೆರಿಗೆ ಹಣ ಆಯಾ ಪಾಲಿಗೆ ಸೇರ್ಪಡೆ

ಬುಧವಾರದಿಂದಲೇ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣ ಆಯಾ ಪಾಲಿಕೆಗೆ ಸೇರಲಿದೆ. ಈ ತೆರಿಗೆ ಹಣ ರಾಜ್ಯ ಸರ್ಕಾರಕ್ಕೆ ಬರುವುದಿಲ್ಲ. ನಾವು ಯಾವುದೇ ರೀತಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಸಧ್ಯ ನಗರದ ಜನಸಂಖ್ಯೆ 1.44 ಕೋಟಿ ಎಂದು ಅಂದಾಜಿಸಲಾಗಿದೆ. 2011ರ ಜನಗಣತಿ ಪ್ರಕಾರ ವಾರ್ಡ್ ನಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಈಗ 35-40 ಸಾವಿರ ಸರಾಸರಿಯಲ್ಲಿ ವಾರ್ಡ್ ರಚನೆ ಮಾಡಲಾಗುವುದು ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಇದನ್ನು ಜಾರಿಗೆ ತರಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ ಎಂದು ಹೇಳಿದರು.

ನ.1ರಂದು ಹೊಸ ಪಾಲಿಕೆಗಳ ಕಚೇರಿ ಕಟ್ಟಡಗಳಿಗೆ ಭೂಮಿ ಪೂಜೆ

ಉತ್ತಮ ಆಡಳಿತ, ಸೇವೆ ನೀಡಬೇಕು, ಸಂವಿಧಾನ ರಕ್ಷಣೆ ನೀಡಬೇಕು. ಈ ಹಿಂದೆ ನಗರದ ಸಣ್ಣಪುಟ್ಟ ವಿಚಾರಕ್ಕೂ ಬೆಂಗಳೂರು ಆಯುಕ್ತರಿಗೆ ಕರೆ ಮಾಡಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಜಿಬಿಎ ಅಧಿಕಾರಿಗಳು ನಗರದ ದೊಡ್ಡ ಯೋಜನೆಗಳ ಜವಾಬ್ದಾರಿ ಮಾತ್ರ ನಿಭಾಯಿಸುತ್ತಾರೆ. ಟನಲ್ ರಸ್ತೆ ಸೇರಿದಂತೆ ಬೇರೆ ಬೇರೆ ಪಾಲಿಕೆಗಳ ಮೂಲಕ ಹಾದುಹೋಗುವ ದೊಡ್ಡ ದೊಡ್ಡ ಯೋಜನೆ ನೋಡಿಕೊಳ್ಳುತ್ತಾರೆ. ಉಳಿದಂತೆ ಇತರೆ ವಿಚಾರಗಳಿಗೆ ಆಯಾ ಪಾಲಿಕೆಗೆ ನಿಯೋಜನೆಯಾಗಿರುವ ಆಯುಕ್ತರು ಹೊಣೆಗಾರಿಕೆ ಹೊಂದಿರುತ್ತಾರೆ. ಅಧಿಕಾರವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲೆಲ್ಲಿ ಕಚೇರಿ ಇರಬೇಕು ಎಂದು ಸೂಚಿಸಿದ್ದೇವೆ. ವಲಯವಾರು ಕಚೇರಿಗಳಲ್ಲಿ ಈ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ನ.1ರಂದು ಹೊಸ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಈ ಐದೂ ಪಾಲಿಕೆ ಕಚೇರಿಗಳು ಒಂದೇ ರೀತಿ ನಿರ್ಮಾಣವಾಗಬೇಕು. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪವನ್ನ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ರೂ. ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ನ.1ಕ್ಕೆ ವಾರ್ಡ್ ಪುನರ್ ವಿಂಗಡಣೆ, 30ಕ್ಕೆ ಮೀಸಲಾತಿ ಅಧಿಸೂಚನೆ ಪ್ರಕಟ

ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. ನ.1ಕ್ಕೆ ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30ರಂದು ವಾರ್ಡ್ ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಯಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು. ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ ಎಂದು ತಿಳಿಸಿದರು.

Read More
Next Story