
ಬಸನಗೌಡ ಪಾಟೀಲ್ ಯತ್ನಾಳ್
ಮುಸ್ಲಿಂ ಯುವತಿಯನ್ನು ಮದುವೆಯಾಗುವ ಹಿಂದೂ ಯುವಕನಿಗೆ 5 ಲಕ್ಷ ರೂ ಬಹುಮಾನ: ಯತ್ನಾಳ್ ವಿವಾದಾತ್ಮಕ ಘೋಷಣೆ
ರಾಜ್ಯದಲ್ಲಿ ಹಿಂದೂ ಯುವಕರಿಗೆ ಯಾವುದೇ ರಕ್ಷಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ಸಂಪೂರ್ಣವಾಗಿ ಮುಸ್ಲಿಂ ಪರವಾಗಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
"ಮುಂದಿನ ದಿನಗಳಲ್ಲಿ ನಾವು ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ, ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವ ಅಭಿಯಾನ ಆರಂಭಿಸಲಿದ್ದೇವೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಘೋಷಣೆಯೊಂದನ್ನು ಮಾಡಿದ್ದಾರೆ.
ಕೊಪ್ಪಳದಲ್ಲಿ ಇತ್ತೀಚೆಗೆ ಹತ್ಯೆಯಾದ ಹಿಂದೂ ಯುವಕ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್, "ರಾಜ್ಯದಲ್ಲಿ ಹಿಂದೂ ಯುವಕರಿಗೆ ಯಾವುದೇ ರಕ್ಷಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ಸಂಪೂರ್ಣವಾಗಿ ಮುಸ್ಲಿಂ ಪರವಾಗಿದೆ. ಇದು 'ಅಹಿಂದ' ಸರ್ಕಾರವಲ್ಲ, ಕೇವಲ ಅಲ್ಪಸಂಖ್ಯಾತರನ್ನು ರಕ್ಷಿಸುವ ಸರ್ಕಾರ" ಎಂದು ಕಿಡಿಕಾರಿದರು.
ಯತ್ನಾಳ್ ಅವರು ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಹೊಸ ಅಭಿಯಾನವನ್ನು ಪ್ರಾರಂಭಿಸುವುದಾಗಿ ಹೇಳಿದರು. ಈ ಕುರಿತು ಮಾತನಾಡಿದ ಅವರು, "ಯಾರೂ ಮುಸ್ಲಿಂ ಯುವತಿಯರನ್ನು ಪ್ರೀತಿಸಬಾರದು ಅಥವಾ ಮದುವೆಯಾಗಬಾರದು ಎಂದು ಯಾವ ಕಾನೂನು ಹೇಳುತ್ತದೆ?" ಎಂದು ಪ್ರಶ್ನಿಸಿದರು.
ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಯತ್ನಾಳ್, ಈ ಕೊಲೆಯಲ್ಲಿ ಸರ್ಕಾರದ ಪಾತ್ರವೂ ಇದೆ ಎಂದು ಆರೋಪಿಸಿದರು. "ಕೊಲೆ ಮಾಡಿದ ಆರೋಪಿ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರೂ, ಸರ್ಕಾರ ಪೊಲೀಸರ ಕೈಗಳನ್ನು ಕಟ್ಟಿಹಾಕಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಮುಂಬರುವ ಅಧಿವೇಶನದಲ್ಲಿ ನಾವು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತೇವೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.