ಕಬ್ಬನ್ ಪಾರ್ಕ್‌ಗೆ 5 ಕೋಟಿ ರೂ. ಅನುದಾನ, ಹೈಕೋರ್ಟ್ ಸ್ಥಳಾಂತರಕ್ಕೆ ಸೂಕ್ತ ಜಾಗ: ಡಿಸಿಎಂ
x

ಕಬ್ಬನ್ ಪಾರ್ಕ್‌ಗೆ 5 ಕೋಟಿ ರೂ. ಅನುದಾನ, ಹೈಕೋರ್ಟ್ ಸ್ಥಳಾಂತರಕ್ಕೆ ಸೂಕ್ತ ಜಾಗ: ಡಿಸಿಎಂ

ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ 'ಬೆಂಗಳೂರು ನಡಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಾಗರಿಕರೊಂದಿಗೆ ನೇರ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಸ್ವೀಕರಿಸಿ ಅವರು ಈ ಮಹತ್ವದ ಘೋಷಣೆಗಳನ್ನು ಮಾಡಿದರು.


Click the Play button to hear this message in audio format

"ನಗರದ ಶ್ವಾಸಕೋಶ" ಎಂದೇ ಪ್ರಖ್ಯಾತವಾಗಿರುವ, ಬೆಂಗಳೂರಿನ ಹೆಮ್ಮೆಯ ಕಬ್ಬನ್ ಪಾರ್ಕ್‌ನ ಸಮಗ್ರ ಅಭಿವೃದ್ಧಿಗೆ ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ₹5 ಕೋಟಿ ಅನುದಾನ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಇದರೊಂದಿಗೆ, ಸ್ಥಳಾವಕಾಶದ ತೀವ್ರ ಕೊರತೆ ಎದುರಿಸುತ್ತಿರುವ ಹೈಕೋರ್ಟ್‌ನ ಸ್ಥಳಾಂತರಕ್ಕೆ ನಗರದೊಳಗೆ ಸೂಕ್ತ ಜಾಗವನ್ನು ಪರಿಶೀಲಿಸಿ, ನ್ಯಾಯಾಲಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ 'ಬೆಂಗಳೂರು ನಡಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಾಗರಿಕರೊಂದಿಗೆ ನೇರ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಸ್ವೀಕರಿಸಿ ಅವರು ಈ ಮಹತ್ವದ ಘೋಷಣೆಗಳನ್ನು ಮಾಡಿದರು.

ಉದ್ಯಾನಗಳ ಸಂರಕ್ಷಣೆಗೆ ಸರ್ಕಾರದ ಬದ್ಧತೆ ಮತ್ತು ಹೊಸ ಯೋಜನೆಗಳು

"ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ಗಳು ಕೇವಲ ಉದ್ಯಾನಗಳಲ್ಲ, ಅವು ನಮ್ಮ ನಾಡಿನ ಮತ್ತು ದೇಶದ ಹೆಗ್ಗುರುತುಗಳು" ಎಂದು ಬಣ್ಣಿಸಿದ ಡಿಸಿಎಂ, ಇವುಗಳ ಸಂರಕ್ಷಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. "ಈ ಐತಿಹಾಸಿಕ ಉದ್ಯಾನಗಳ ಆವರಣದಲ್ಲಿ ಯಾವುದೇ ಕಾರಣಕ್ಕೂ ಹೊಸ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಈ ಹಿಂದೆ ಇದ್ದ 330 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕ್ ಈಗ 196 ಎಕರೆಗೆ ಕುಗ್ಗಿದೆ. ಇದನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಪಾರ್ಕ್‌ನೊಳಗಿನ ಗುತ್ತಿಗೆ ಕಟ್ಟಡಗಳನ್ನು ತೆರವುಗೊಳಿಸಿ, ವಾಣಿಜ್ಯೀಕರಣವನ್ನು ತಡೆಯಬೇಕು" ಎಂಬ ನಾಗರಿಕರ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಲಾಲ್‌ಬಾಗ್‌ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂಪಾಯಿ ಘೋಷಿಸಿರುವುದನ್ನು ಸ್ಮರಿಸಿದ ಅವರು, "ನಗರದಾದ್ಯಂತ ಇರುವ ಅರಣ್ಯ ಇಲಾಖೆಯ ಜಾಗಗಳಲ್ಲಿ 'ಟ್ರೀ ಪಾರ್ಕ್'ಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಹಸಿರು ಹೊದಿಕೆಯನ್ನು ಹೆಚ್ಚಿಸುವುದರ ಜೊತೆಗೆ ಕಾಡಿನ ಸಂರಕ್ಷಣೆಗೂ ಒತ್ತು ನೀಡಲಾಗುವುದು" ಎಂದು ಹೊಸ ಯೋಜನೆಯನ್ನು ಪ್ರಕಟಿಸಿದರು. ಕಬ್ಬನ್ ಪಾರ್ಕ್‌ನ ಭದ್ರತೆಗಾಗಿ, ಯಾರು ಒಳಬಂದರು, ಯಾರು ಹೊರಹೋದರು ಎಂಬುದನ್ನು ದಾಖಲಿಸಲು ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಿ, ಪೊಲೀಸ್ ಆಯುಕ್ತರ ಕಚೇರಿಯಿಂದಲೇ ನಿಗಾ ವಹಿಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೈಕೋರ್ಟ್ ಸ್ಥಳಾಂತರದ ಬೇಡಿಕೆ ಗಂಭೀರ ಪರಿಶೀಲನೆ

ಹೈಕೋರ್ಟ್ ಸ್ಥಳಾಂತರದ ಕುರಿತ ಪ್ರಶ್ನೆಗೆ ವಿವರವಾಗಿ ಉತ್ತರಿಸಿದ ಅವರು, "ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮವೊಂದರಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ವಕೀಲರ ಸಂಘವು 15-20 ಎಕರೆ ಜಾಗವನ್ನು ಒದಗಿಸುವಂತೆ ಮನವಿ ಸಲ್ಲಿಸಿದೆ. ಪ್ರಸ್ತುತ ಹೈಕೋರ್ಟ್ ಐತಿಹಾಸಿಕ ಕಟ್ಟಡವಾದರೂ, ಸ್ಥಳಾವಕಾಶದ ಕೊರತೆ ತೀವ್ರವಾಗಿದೆ. ಇದನ್ನು ನಗರದ ಹೊರಗೆ ಸ್ಥಳಾಂತರಿಸಲು ಸಾಧ್ಯವಿಲ್ಲ, ಅದು ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆಯಾಗುತ್ತದೆ. ಹೀಗಾಗಿ, ಎಲ್ಲರಿಗೂ ಅನುಕೂಲವಾಗುವಂತಹ ಸ್ಥಳವನ್ನು ನಗರದ ವ್ಯಾಪ್ತಿಯಲ್ಲಿಯೇ ಗುರುತಿಸಲು ಪರಿಶೀಲನೆ ನಡೆಸಲಾಗುವುದು. ರೇಸ್ ಕೋರ್ಸ್ ಜಾಗವನ್ನು ಬಳಸಿಕೊಳ್ಳುವ ಬಗ್ಗೆಯೂ ಕೆಲ ವಕೀಲರು ಪ್ರಸ್ತಾಪಿಸಿದ್ದು, ಕಾನೂನಾತ್ಮಕ ತೊಡಕುಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು" ಎಂದರು.

ನಾಗರಿಕರ ಅಹವಾಲು ಸ್ವೀಕಾರ ಮತ್ತು ಡಿಸಿಎಂ ಭರವಸೆ

ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 35ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಡಿಕೆಶಿ, ಬೀದಿ ದೀಪ, ಪಾದಚಾರಿ ಮಾರ್ಗ, ಹಾಳಾದ ಮರಗಳ ತೆರವು, ಬೀದಿ ನಾಯಿಗಳ ಹಾವಳಿ, ಹೈಕೋರ್ಟ್ ಸುತ್ತಲಿನ ಪಾರ್ಕಿಂಗ್ ಮತ್ತು ಕಸದ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ಗಮನ ಸೆಳೆದ ನಾಗರಿಕರಿಗೆ, "ಈ ಎಲ್ಲಾ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ, ಕಾಲಮಿತಿಯೊಳಗೆ ಬಗೆಹರಿಸಲಾಗುವುದು" ಎಂದು ಭರವಸೆ ನೀಡಿದರು. ಇದೇ ವೇಳೆ, 'ಬಿ' ಖಾತೆಯಿಂದ 'ಎ' ಖಾತೆಗೆ ಬದಲಾಯಿಸುವ ಯೋಜನೆಯನ್ನು 'ಕ್ರಾಂತಿಕಾರಕ' ಎಂದು ಬಣ್ಣಿಸಿದ ಅವರು, "ಇದರಿಂದ ಸಾವಿರಾರು ಜನರಿಗೆ ಉಪಯೋಗವಾಗಲಿದೆ, ಟೀಕೆ ಮಾಡುವವರು ಮಾಡಲಿ" ಎಂದರು.

ಸಂವಾದದ ವೇಳೆ ನಾಗರಿಕರೊಬ್ಬರು "ಪಕ್ಷಗಳು ಹಣ ಪಡೆದು ಟಿಕೆಟ್ ನೀಡುತ್ತಿವೆ" ಎಂದು ಆರೋಪಿಸಿದಾಗ, "ಅಂತಹ ನಿರ್ದಿಷ್ಟ ಮಾಹಿತಿ ಇದ್ದರೆ, ಇಂದು ಸಂಜೆಯೇ ತನಿಖೆಗೆ ಆದೇಶಿಸುತ್ತೇನೆ. ನನ್ನ ಪ್ರಕಾರ, ಯಾವ ಪಕ್ಷವೂ ಹಣ ಪಡೆದು ಟಿಕೆಟ್ ನೀಡುವುದಿಲ್ಲ, ಕೇವಲ ಅರ್ಜಿ ಶುಲ್ಕ ಪಡೆಯುತ್ತವೆ" ಎಂದು ಡಿಕೆಶಿ ಸ್ಪಷ್ಟಪಡಿಸಿದರು. "ನಾನು 35 ವರ್ಷಗಳಿಂದ ಶಾಸಕನಾಗಿದ್ದೇನೆ" ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, "ಜಿಬಿಎ ಚುನಾವಣೆಯಲ್ಲಿ ಜನರಿಗೆ ಹೆಚ್ಚು ಸ್ಪಂದಿಸುವವರಿಗೆ ಅವಕಾಶ ನೀಡಲಾಗುವುದು" ಎಂದರು.

Read More
Next Story