ಕಾಲರಾ ಶಂಕೆ | ಬೆಂಗಳೂರು ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ
x

ಕಾಲರಾ ಶಂಕೆ | ಬೆಂಗಳೂರು ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ


ಬೆಂಗಳೂರಿನ ಬೆಂಗಳೂರು ಮೆಡಿಕಲ್ ಕಾಲೇಜ್ (BMCRI) ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟ್ರಾಮಾ ಕೇರ್ ಸೆಂಟರ್ನಲ್ಲಿ 28 ವಿದ್ಯಾರ್ಥಿನಿಯರು, ಐಸಿಯುನಲ್ಲಿ ನಾಲ್ವರು ಹಾಗೂ ವಾರ್ಡ್ನಲ್ಲಿ 15 ಯುವತಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಂದು ಬೆಂಗಳೂರು ಮೆಡಿಕಲ್ ಕಾಲೇಜ್ ಡೀನ್ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ. ಇನ್ನು ಕಾಲರಾ ಇರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು, ʻʻಕಾಲರಾ ಎಂಬುದು ಇನ್ನೂ ಖಚಿತವಾಗಿಲ್ಲ. ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿರುವ ನಾಲ್ವರು ವಿದ್ಯಾರ್ಥಿನಿಯರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನುಳಿದ 15 ಮಂದಿಗೆ H ಬ್ಲಾಕ್ ನಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ವಿದ್ಯಾರ್ಥಿಗಳು ಅಕ್ಯೂಟ್ ಗಾಸ್ಟ್ರೋ ಎಂಟರ್ಐಟಿಸ್ (ತೀವ್ರತರವಾದ ಹೊಟ್ಟೆ ನೋವು) ಬಳಲುತ್ತಿರುವುದು ಪ್ರಾಥಮಿಕ ಮಾಹಿತಿಯಿಂದ ದೃಢಪಟ್ಟಿದೆ" ಎಂದು ತಿಳಿಸಿದ್ದಾರೆ.

ಹೆಚ್ಚು ತಾಪಮಾನ ನಡುವೆ ಬೆಂಗಳೂರಿನಲ್ಲಿ ಕಾಲರಾ ಭೀತಿ ಶುರುವಾಗಿದೆ. ಈ ನಡುವೆ ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಏಕಾಏಕಿ ವಾಂತಿ-ಭೇದಿಯಿಂದಾಗಿ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲರಾ ಶಂಕೆ ವ್ಯಕ್ತವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ ಕುರಿತು ಮುಂಜಾಗ್ರತಾ ಕ್ರಮವಹಿಸಲಾಗಿದೆ. ಮಲ್ಲೇಶ್ವರಂನ ನಿವಾಸಿ ಮಹಿಳೆಯರೊಬ್ಬರಿಗೆ ಕಾಲರಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಶಂಕಿತ ಮಹಿಳೆಯು ವಾಸ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ರೋಗ ಹರಡುವ ವಿಧಾನಗಳು, ಶುದ್ಧ ನೀರಿನ ಬಳಕೆ, ಕೈಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

Read More
Next Story