
ಸಾಂದರ್ಭಿಕ ಚಿತ್ರ
ಗ್ಯಾರಂಟಿಗಳಿಗೆ 1.06 ಲಕ್ಷ ಕೋಟಿ ವೆಚ್ಚ; ಉತ್ತರ ಕರ್ನಾಟಕಕ್ಕೆ 46,277 ಕೋಟಿ: ಸಿಎಂ
ಯುವನಿಧಿ ಯೋಜನೆಯಡಿ ಉತ್ತರ ಕರ್ನಾಟಕದ 1,73,772 ಅಭ್ಯರ್ಥಿಗಳಿಗೆ 456 ಕೋಟಿ ರೂ. ಹಾಗೂ ರಾಜ್ಯಾದ್ಯಂತ 2,84, 802 ಫಲಾನುಭವಿಗಳಿಗೆ ಒಟ್ಟು 757 ಕೋಟಿ ರೂ. ವ್ಯಯ ಮಾಡಲಾಗಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ 1,06,076 ಕೋಟಿ ರೂಪಾಯಿಗಳನ್ನು ಖರ್ಚುಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಮಾಹಿತಿ ನೀಡಿದ್ದಾರೆ. ಇದರ ಪೈಕಿ ಉತ್ತರ ಕರ್ನಾಟಕದ ಜನರಿಗಾಗಿ 46,277 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದು, ಇದು ಒಟ್ಟು ವೆಚ್ಚದ ಶೇಕಡಾ 43.63ರಷ್ಟಾಗಿದೆ ಎಂದು ಅವರು ತಿಳಿಸಿದರು.
ಶುಕ್ರವಾರ (ಡಿ.19) ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, "ಅನೇಕರಿಗೆ ಗ್ಯಾರಂಟಿ ಯೋಜನೆಗಳ ಕುರಿತು ನಕಾರಾತ್ಮಕ ಅಭಿಪ್ರಾಯವಿದೆ. ಆದರೆ ಇಡೀ ದೇಶದ ಆರ್ಥಿಕತೆ ಕುಸಿಯುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ರಾಜ್ಯದ ಆರ್ಥಿಕತೆ ದೃಢವಾಗಿರಲು ಈ ಯೋಜನೆಗಳ ಕೊಡುಗೆ ಅಪಾರ" ಎಂದರು.
ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ಹಾಗೂ ದಕ್ಷಿಣ ಕರ್ನಾಟಕ ಪ್ರದೇಶಗಳ ಶೈಕ್ಷಣಿಕ ಮತ್ತು ಆರೋಗ್ಯ ಮೂಲಸೌಕರ್ಯ ಕುರಿತಂತೆ ಹಲವು ಅಂಕಿ ಅಂಶಗಳನ್ನು ಪ್ರಸ್ತಾಪಿಸಿದ್ದರೆ, ಆ ಅಂಕಿ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಗ್ಯಾರಂಟಿ ಯೋಜನೆಗಳ ವ್ಯಾಪ್ತಿ ಮತ್ತು ಅನುದಾನ ವಿವರಗಳು
ಗೃಹ ಲಕ್ಷ್ಮೀ: ರಾಜ್ಯಾದ್ಯಂತ ಒಟ್ಟು 1.24 ಕೋಟಿ ಫಲಾನುಭವಿಗಳಿದ್ದು, ಇದರಲ್ಲಿ ಉತ್ತರ ಕರ್ನಾಟಕದ 54.92 ಲಕ್ಷ ಮಹಿಳೆಯರು ಸೇರಿದ್ದಾರೆ. ನವೆಂಬರ್ ಅಂತ್ಯದವರೆಗೂ ಈ ಯೋಜನೆಯಡಿಯಲ್ಲಿ ಉತ್ತರ ಕರ್ನಾಟಕಕ್ಕೆ 24,638 ಕೋಟಿ ಹಾಗೂ ರಾಜ್ಯದ ಮಟ್ಟದಲ್ಲಿ 52,416 ಕೋಟಿ ರೂಪಾಯಿ ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ.
ಗೃಹ ಜ್ಯೋತಿ: ಉತ್ತರ ಕರ್ನಾಟಕದ 56.70 ಲಕ್ಷ ಫಲಾನುಭವಿಗಳಿಗೆ 6,308 ಕೋಟಿ ರೂಪಾಯಿ ನೆರವು ನೀಡಲಾಗಿದ್ದು, ರಾಜ್ಯಾದ್ಯಂತ 1.65 ಕೋಟಿ ಫಲಾನುಭವಿಗಳಿಗೆ ಒಟ್ಟು 20,438 ಕೋಟಿ ರೂಪಾಯಿ ವೆಚ್ಚವಾಗಿದೆ.
ಅನ್ನಭಾಗ್ಯ: ಉತ್ತರ ಕರ್ನಾಟಕದ ಫಲಾನುಭವಿಗಳಿಗೆ ₹7,848 ಕೋಟಿ ಹಾಗೂ ರಾಜ್ಯಾದ್ಯಂತ ₹16,475 ಕೋಟಿ ರೂಪಾಯಿಗಳು ಖರ್ಚಾಗಿವೆ.
ಶಕ್ತಿ: ಉತ್ತರ ಕರ್ನಾಟಕದಲ್ಲಿ 232 ಕೋಟಿ ಟ್ರಿಪ್‌ಗಳಿಗೆ 7,027 ಕೋಟಿ ರೂಪಾಯಿ ಸಾರಿಗೆ ವೆಚ್ಚವಾಗಿದ್ದು, ರಾಜ್ಯಾದ್ಯಂತ 617 ಕೋಟಿ ಟ್ರಿಪ್‌ಗಳಿಗೆ 15,887 ಕೋಟಿ ರೂಪಾಯಿ ವೆಚ್ಚವಾಗಿದೆ.
ಯುವನಿಧಿ: ಉತ್ತರ ಕರ್ನಾಟಕದ 1.73 ಲಕ್ಷ ಯುವಕರಿಗೆ 456 ಕೋಟಿ ರೂ. ನೆರವು ದೊರೆತಿದ್ದು, ರಾಜ್ಯಾದ್ಯಂತ ಒಟ್ಟು 2.84 ಲಕ್ಷ ಫಲಾನುಭವಿಗಳಿಗೆ 757 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಗ್ಯಾರಂಟಿ ಯೋಜನೆಗಳು ಕೇವಲ ಕಲ್ಯಾಣಕಾರಿ ಕ್ರಮಗಳಷ್ಟೇ ಅಲ್ಲ, ರಾಜ್ಯದ ಆರ್ಥಿಕ ಚಟುವಟಿಕೆಗೂ ಜೀವ ತುಂಬುವ ಸಾಧನವಾಗಿವೆ ಎಂದಿರುವ ಸಿಎಂ ಉತ್ತರ ಕರ್ನಾಟಕದ ಕೃಷಿ, ಮಹಿಳಾ ಶಕ್ತೀಕರಣ ಹಾಗೂ ಸಾಮಾಜಿಕ ಭದ್ರತಾ ಕ್ಷೇತ್ರಗಳಲ್ಲಿ ಈ ಯೋಜನೆಗಳು ಮಹತ್ವದ ಬದಲಾವಣೆ ತಂದಿವೆ ಎಂದು ಮಾಹಿತಿ ನೀಡಿದ್ದಾರೆ.

