41 ಸಾವಿರ ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ; 20 ಸಾವಿರ ಮಕ್ಕಳು ಚಿಕಿತ್ಸೆಯಿಂದ ದೂರ
x

41 ಸಾವಿರ ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ; 20 ಸಾವಿರ ಮಕ್ಕಳು ಚಿಕಿತ್ಸೆಯಿಂದ ದೂರ

ಗರ್ಭಾವಸ್ಥೆಯಲ್ಲಿಯೇ ನಿಯಮಿತ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಭ್ರೂಣ ಅಥವಾ ಶಿಶುಗಳಲ್ಲಿ ಅನೇಕ ಹೃದಯ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದಾಗಿದೆ.


ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 41 ಸಾವಿರ ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆಗಳು (CHD) ಪತ್ತೆಯಾಗಿವೆ. ಈ ಪೈಕಿ ಕೇವಲ ಅರ್ಧದಷ್ಟು ಮಕ್ಕಳಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರೆತಿದ್ದು, ಉಳಿದವರಿಗೆ ಚಿಕಿತ್ಸೆ ಬಾಕಿ ಇದೆ ಎಂಬ ಸಂಗತಿಯನ್ನು ಆರೋಗ್ಯ ಇಲಾಖೆಯ ವರದಿ ಬಹಿರಂಗಪಡಿಸಿದೆ.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ದೊಡ್ಡ ಎಚ್ಚರಿಕೆ ಸಂಕೇತವಾಗಿದೆ ಎಂದು ಹೇಳಿದೆ.

ಜನ್ಮಜಾತ ಹೃದಯ ಕಾಯಿಲೆ ಎಂದರೇನು?

ಜನ್ಮಜಾತ ಹೃದಯ ಕಾಯಿಲೆ ಅಂದರೆ ಶಿಶು ಹುಟ್ಟುವಾಗಲೇ ಹೃದಯದಲ್ಲಿ ಬೆಳವಣಿಗೆ ಸಂಬಂಧಿತ ತೊಂದರೆ ಕಾಣಿಸಿಕೊಳ್ಲುವ ಸ್ಥಿತಿಯಾಗಿದೆ. ಗರ್ಭಧಾರಣೆಯ ಸಮಯದಲ್ಲೇ ಭ್ರೂಣದ ಹೃದಯದಲ್ಲಿ ಉಂಟಾಗುವ ಅಸಹಜತೆ, ಮಗುವು ಹುಟ್ಟಿದ ನಂತರವೂ ಮುಂದುವರಿಯಲಿದೆ. ಇದರಿಂದ ಹೃದಯಾಘಾತ ಇನ್ನಿತರ ಹೃದಯ ಸಂಬಂಧಿತ ಕಾಯಿಲೆಗಳಿಗೆ ಆಸ್ಪದ ನೀಡಲಿದೆ.

ಕರ್ನಾಟಕದಲ್ಲಿ ಚಿಕಿತ್ಸಾ ವ್ಯವಸ್ಥೆ ಹೇಗಿದೆ?

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಅಡಿಯಲ್ಲಿ ಶಿಶುಗಳು ಮತ್ತು ಮಕ್ಕಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಜನ್ಮಜಾತ ಹೃದಯ ಕಾಯಿಲೆ ಪತ್ತೆಯಾದರೆ, ಆ ಮಕ್ಕಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ.

ಆದರೆ, ಪ್ರತಿ ಮಗುವಿನ ನಿಯಮಿತ ಅನುಸರಣೆ ಮತ್ತು ದಾಖಲೆ ನಿರ್ವಹಣೆ ದೊಡ್ಡ ಸವಾಲಾಗಿದೆ‌. ಹಾಗಾಗಿ ರಾಜ್ಯದಲ್ಲಿ ಸುಮಾರು 20 ಸಾವಿರ ಮಕ್ಕಳಿಗೆ ಚಿಕಿತ್ಸೆ ಸಾಧ್ಯವಾಗಿಲ್ಲ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳು ಅಳಲಾಗಿದೆ.

ಬಹುತೇಕ ಕುಟುಂಬಗಳು ಮೊದಲ ಬಾರಿಗೆ ಚಿಕಿತ್ಸೆ ಪಡೆಯುತ್ತವೆ. ಆನಂತರದಲ್ಲಿ ಸಮಾಲೋಚನೆಗೆ ಬರುವುದಿಲ್ಲ.ಇದರಿಂದ ಚಿಕಿತ್ಸಾ ಪ್ರಕ್ರಿಯೆ ಅರ್ಧದಲ್ಲೇ ನಿಂತುಹೋಗಲಿದೆ ಎಂದು ವೈದ್ಯರು ಹೇಳುತ್ತಾರೆ.

ಕಾಯಿಲೆ ಪತ್ತೆ ಮಾಡುವುದು ಹೇಗೆ?

ಗರ್ಭಾವಸ್ಥೆಯಲ್ಲಿಯೇ ನಿಯಮಿತ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಭ್ರೂಣ ಅಥವಾ ಶಿಶುಗಳಲ್ಲಿ ಅನೇಕ ಹೃದಯ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದಾಗಿದೆ. ಅಲ್ಟ್ರಾಸೌಂಡ್ ಹಾಗೂ ಇತರ ಸ್ಕ್ಯಾನಿಂಗ್ ಮೂಲಕ ಗರ್ಭದಲ್ಲಿಯೇ ಮಕ್ಕಳ ಹೃದಯ ಸಮಸ್ಯೆ ಪತ್ತೆಹಚ್ಚಬಹುದಾಗಿದೆ.

ಸ್ಕ್ಯಾನಿಂಗ್‌ನಲ್ಲಿ ಅಸಹಜತೆ ಕಂಡುಬಂದರೆ, ಅದರ ದಾಖಲೆಯನ್ನು ಆರೋಗ್ಯ ಇಲಾಖೆಯ ದತ್ತಾಂಶಕ್ಕೆ ಸೇರಿಸುವುದು ಅನಿವಾರ್ಯ. ಇದರಿಂದ ಶಿಶು ಜನಿಸಿದ ನಂತರ ಚಿಕಿತ್ಸೆ ಹಾಗೂ ಅನುಸರಣೆ ಸುಲಭವಾಗುತ್ತದೆ.

ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಂತಾದ ಯೋಜನೆಗಳ ಮೂಲಕ ಸಿಗುವ ಉಚಿತ ಚಿಕಿತ್ಸೆಯನ್ನು ಪಡೆಯುವುದರಿಂದ ಮಕ್ಕಳನ್ನು ಗಂಭೀರ ಕಾಯಿಲೆಗಳಿಂದ ಪಾರು ಮಾಡಬಹುದಾಗಿದೆ. ಮಕ್ಕಳಲ್ಲಿ ಕಂಡು ಬರುವ ಜನ್ಮಜಾತ ಹೃದಯ ಕಾಯಿಲೆಗಳನ್ನು ಶೇ. 90ರಷ್ಟು ಸಂಪೂರ್ಣ ಗುಣಪಡಿಸಬಹುದು.

ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ಮತ್ತು ಔಷಧೋಪಚಾರ ದೊರೆತರೆ ಮಕ್ಕಳು ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಲಿದೆ. ತಡವಾದರೆ, ಜೀವನಪರ್ಯಂತ ಹೃದಯ ಸಂಬಂಧಿತ ಗಂಭೀರ ಸಮಸ್ಯೆಗಳು ಎದುರಾಗುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸುತ್ತಾರೆ.

ಆರೋಗ್ಯ ಇಲಾಖೆ ಮುಂದಿರುವ ಕ್ರಮಗಳೇನು?

ಗರ್ಭಾವಸ್ಥೆಯಲ್ಲಿ ತಾಯಿಯ ಆರೈಕೆ ಸರಿಯಾದ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ನಿಯಮಿತವಾಗಿ ಪೌಷ್ಠಿಕಾಂಶ ಪೂರೈಕೆ, ಆರೋಗ್ಯ ತಪಾಸಣೆಗಳನ್ನು ಮಾಡುವುದು ಕಡ್ಡಾಯವಾಗಿದೆ. ಸಮಸ್ಯೆ ಪತ್ತೆಯಾಗಿರುವ ಪ್ರಕರಣಗಳನ್ನು ನಿಯಮಿತವಾಗಿ ವೈದ್ಯಕೀಯ ಪರಿಶೀಲನೆಗೆ ಒಳಪಡಿಸಬೇಕು. ಆರೋಗ್ಯ ಇಲಾಖೆಯ ಮೇಲ್ವಿಚಾರಣೆ ಮತ್ತು ಕುಟುಂಬಗಳ ಸಹಕಾರ ಒಂದೇ ವೇಳೆ ಜಾರಿಗೆ ಬಂದಾಗ ಮಾತ್ರ ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ಸಾಧ್ಯವಾಗಲಿದೆ.

ಜನ್ಮಜಾತ ಇತರೆ ಕಾಯಿಲೆಗಳು ಯಾವುವು?

ಮಗುವಿಗೆ ಹುಟ್ಟಿನಿಂದಲೇ ಬರುವ ಅಂಗವಿಕಲತೆ, ಉಸಿರಾಟ ಸಮಸ್ಯೆ, ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಜನ್ಮಜಾತ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಗರ್ಭದಲ್ಲಿರುವಾಗಲೇ ಡೌನ್ ಸಿಂಡ್ರೋಮ್, ಸೀಳು ತುಟಿ ಮತ್ತು ಅಂಗುಳಿ(ಕೈ ಅಥವಾ ಕಾಲಿನ ಮೇಲೆ ಬೆಳೆಯುವ ಅಂಗ) ಮತ್ತು ಸ್ಪೈನಾ ಬೈಫಿಡಾ ಸೇರಿವೆ.

Read More
Next Story