
ಬಾಲಕ ಗಂಧಾರ್ ಆತ್ಮಹತ್ಯೆಗೆ 'ಡೆತ್ ನೋಟ್' ವೆಬ್ ಸೀರಿಸ್ ಕಾರಣವೇ ಎಂಬ ಸಂಶಯ ವ್ಯಕ್ತವಾಗಿದೆ.
'ಡೆತ್ ನೋಟ್' ಸೀರೀಸ್ನ ಕರಾಳ ನೆರಳು: ಬಾಲಕ ಗಾಂಧಾರ್ ನಿಗೂಢ ಸಾವಿನ ಹಿಂದೆ ವೆಬ್ ಸೀರೀಸ್ ಮೋಡಿ?
ಸಂತೋಷವಾಗಿದ್ದ ಮಗ ಏಕಾಏಕಿ ಸಾವಿಗೆ ಶರಣಾಗಿದ್ದು ಹೇಗೆಂಬ ಪ್ರಶ್ನೆಗೆ ಉತ್ತರ ಹುಡುಕಲು ತನಿಖೆಗೆ ಇಳಿದ ಪೊಲೀಸರಿಗೆ ಎದುರಾಗಿದ್ದು ಒಂದು ನಿಗೂಢ ಜಗತ್ತು.
ಮೂರು ದಿನಗಳ ಹಿಂದೆ ನಗರದಲ್ಲಿ ನಡೆದ 14 ವರ್ಷದ ಬಾಲಕನ ಆತ್ಮಹತ್ಯೆ ಪ್ರಕರಣವು ಇದೀಗ ಇಡೀ ರಾಜ್ಯವನ್ನು ಆತಂಕಕ್ಕೆ ದೂಡುವಂತಹ ತಿರುವು ಪಡೆದುಕೊಂಡಿದೆ. ಯಾವುದೇ ಕೌಟುಂಬಿಕ ಸಮಸ್ಯೆಯಿಲ್ಲದೆ, ಖುಷಿಯಾಗಿದ್ದ ಬಾಲಕನೊಬ್ಬನ ಸಾವಿನ ಹಿಂದೆ ಜಪಾನಿನ ಮಾರಣಾಂತಿಕ ವೆಬ್ ಸೀರೀಸ್ 'ಡೆತ್ ನೋಟ್'ನ ಕರಾಳ ನೆರಳು ಆವರಿಸಿದೆಯೇ ಎಂಬ ಬೆಚ್ಚಿಬೀಳಿಸುವ ಶಂಕೆ ದಟ್ಟವಾಗಿದೆ.
ಜಾನಪದ ಕಲಾವಿದರಾದ ಗಣೇಶ್ ಪ್ರಸಾದ್ ಮತ್ತು ಸವಿತಾ ದಂಪತಿಯ ಪುತ್ರ ಗಾಂಧರ್ (14), ರಾತ್ರಿ ಕುಟುಂಬದೊಂದಿಗೆ ಸಂತೋಷವಾಗಿ ಊಟ ಮಾಡಿ, ತನ್ನ ಪ್ರೀತಿಯ ನಾಯಿ 'ರಾಕಿ' ಜೊತೆ ಮಲಗಿದ್ದ. ಆದರೆ, ಬೆಳಗಾಗುವಷ್ಟರಲ್ಲಿ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದ. ಆತ ಬರೆದಿಟ್ಟಿದ್ದ ಡೆತ್ ನೋಟ್ನಲ್ಲಿ, "ನನ್ನನ್ನು ತಪ್ಪಾಗಿ ತಿಳಿಯಬೇಡಿ, 14 ವರ್ಷ ನನ್ನನ್ನು ಚೆನ್ನಾಗಿ ಸಾಕಿದ್ದೀರಿ, ನಿಮ್ಮೊಂದಿಗೆ ಖುಷಿಯಾಗಿದ್ದೆ. ಈಗ ನಾನು ಹೋಗುವ ಸಮಯ ಬಂದಿದೆ, ನೀವು ಈ ಪತ್ರ ಓದುವಾಗ ನಾನು ಸ್ವರ್ಗದಲ್ಲಿರುತ್ತೇನೆ" ಎಂಬ ಮನಕಲಕುವ ಮಾತುಗಳಿದ್ದವು.
ಸಂತೋಷವಾಗಿದ್ದ ಮಗ ಏಕಾಏಕಿ ಸಾವಿಗೆ ಶರಣಾಗಿದ್ದು ಹೇಗೆಂಬ ಪ್ರಶ್ನೆಗೆ ಉತ್ತರ ಹುಡುಕಲು ತನಿಖೆಗೆ ಇಳಿದ ಪೊಲೀಸರಿಗೆ ಎದುರಾಗಿದ್ದು ಒಂದು ನಿಗೂಢ ಜಗತ್ತು. ಗಾಂಧರ್, ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿದ್ದ ಜಪಾನೀಸ್ ವೆಬ್ ಸೀರೀಸ್ 'ಡೆತ್ ನೋಟ್'ನ ಕಟ್ಟಾ ಅಭಿಮಾನಿಯಾಗಿದ್ದ. ತನ್ನ ಕೋಣೆಯ ಗೋಡೆಯ ಮೇಲೆ ಆ ಸರಣಿಯ ಪಾತ್ರಗಳ ಚಿತ್ರಗಳನ್ನು ಬಿಡಿಸಿದ್ದ.
ಏನಿದು 'ಡೆತ್ ನೋಟ್'ನ ಮಾರಣಾಂತಿಕ ಕಥಾವಸ್ತು?
ಈ ವೆಬ್ ಸೀರೀಸ್ನ ಕಥಾನಾಯಕನಿಗೆ ಒಂದು ಮಾಂತ್ರಿಕ ನೋಟ್ಬುಕ್ ಸಿಗುತ್ತದೆ. ಆ ಪುಸ್ತಕದಲ್ಲಿ ಯಾರ ಹೆಸರನ್ನು ಬರೆದು, ಅವರು ಹೇಗೆ ಸಾಯಬೇಕು ಎಂದು ಕಲ್ಪಿಸಿಕೊಂಡರೆ, ಆ ವ್ಯಕ್ತಿ ಅದೇ ರೀತಿ ಸಾಯುತ್ತಾನೆ. ಕೆಟ್ಟವರನ್ನು ಈ ಭೂಮಿಯಿಂದ ಇಲ್ಲವಾಗಿಸುವುದೇ ಈ ಸರಣಿಯ ಉದ್ದೇಶ.
ಈ ವೆಬ್ ಸೀರೀಸ್ನ ಪ್ರಭಾವಕ್ಕೆ ಒಳಗಾಗಿಯೇ ಗಾಂಧರ್, ಸಾವನ್ನು ಒಂದು ಪ್ರಯೋಗವೆಂದು ಭಾವಿಸಿ ಆತ್ಮಹತ್ಯೆಗೆ ಶರಣಾದನೇ? ಅಥವಾ ಅತಿಯಾದ ಆಧ್ಯಾತ್ಮಿಕ ಚಿಂತನೆಯು ಅವನನ್ನು ಈ ದಾರಿಗೆ ತಳ್ಳಿತೇ? ಎಂಬ ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡುತ್ತಿವೆ. ಪೊಲೀಸರು ಬಾಲಕನ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಈ ನಿಗೂಢ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯಲು ತನಿಖೆ ತೀವ್ರಗೊಳಿಸಿದ್ದಾರೆ. ಈ ಘಟನೆಯು ಡಿಜಿಟಲ್ ಜಗತ್ತಿನ ಅಪಾಯಕಾರಿ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
(ಆತ್ಮಹತ್ಯೆಗಳನ್ನು ತಡೆಯಬಹುದು. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿಗಳಿಗೆ ಕರೆ ಮಾಡಿ: ನೇಹಾ ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ - 044-24640050; ಆತ್ಮಹತ್ಯೆ ತಡೆಗಟ್ಟುವಿಕೆ, ಭಾವನಾತ್ಮಕ ಬೆಂಬಲ ಮತ್ತು ಆಘಾತದ ಸಹಾಯಕ್ಕಾಗಿ ಆಸರಾ ಸಹಾಯವಾಣಿ - +91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ - 5900000 0019, ದಿಶಾ 0471- 2552056, ಮೈತ್ರಿ 0484 2540530, ಮತ್ತು ಸ್ನೇಹಾಳ ಆತ್ಮಹತ್ಯೆ ತಡೆ ಸಹಾಯವಾಣಿ 044-24640050.)