Dengue Outbreak | 30 ಡೆಂಗ್ಯೂ ಹಾಟ್‌ಸ್ಪಾಟ್‌ ಗುರುತಿಸಿದ ಬಿಬಿಎಂಪಿ
x
ಡೆಂಗ್ಯೂ

Dengue Outbreak | 30 ಡೆಂಗ್ಯೂ ಹಾಟ್‌ಸ್ಪಾಟ್‌ ಗುರುತಿಸಿದ ಬಿಬಿಎಂಪಿ

ಬೆಂಗಳೂರಿನ ದೈನಂದಿನ ಡೆಂಗ್ಯೂ ಪ್ರಕರಣಗಳು 225-230 ಕ್ಕೆ ಏರಿದ್ದು, 30 ಹೊಸ ಹಾಟ್‌ಸ್ಪಾಟ್‌ಗಳನ್ನು ಬಿಬಿಎಂಪಿ ಗುರುತಿಸಿದೆ.


Click the Play button to hear this message in audio format

ರಾಜ್ಯದಲ್ಲಿ ಮಳೆಯ ಅಬ್ಬರದ ನಡುವೆ ಡೆಂಗ್ಯೂ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ದೈನಂದಿನ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಸರಾಸರಿ 200 ರಿಂದ 225-230 ಕ್ಕೆ ಏರಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದಾದ್ಯಂತ 30 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 100 ಮೀಟರ್ ವ್ಯಾಪ್ತಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾದರೆ ಆ ಪ್ರದೇಶಗಳನ್ನು ಡೆಂಗ್ಯೂ ಹಾಟ್‌ಸ್ಟಾಟ್‌ ಎಂದು ಗುರುತಿಸಲಾಗುತ್ತದೆ. ಪ್ರಸ್ತುತ ಪ್ರಕರಣದ ಡೇಟಾವನ್ನು ಆಧರಿಸಿ ನವೀಕರಿಸಲಾಗುತ್ತದೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 30 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೊಸ ಪ್ರಕರಣಗಳು ಉದ್ಭವಿಸಿದಾಗ ಪ್ರದೇಶಗಳನ್ನು ಈ ಹಾಟ್‌ಸ್ಟಾಟ್‌ಗೆ ಸೇರಿಸಲಾಗುತ್ತದೆ. ಹಾಗೂ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲದಿದ್ದಾಗ ಈ ಪ್ರದೇಶವನ್ನು ಹಾಟ್‌ಸ್ಟಾಟ್‌ನಿಂದ ತೆಗೆಯಲಾಗುತ್ತದೆ ಎಂದು ಅವರು ತಿಳಿಸಿದರು.

ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಕಾರಕ-ಹರಡುವ ರೋಗಗಳ ಹರಡುವಿಕೆಯನ್ನು ತಡೆಯಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. ಹೆಚ್ಚಿನ ಅಪಾಯದ ಕೊಳೆಗೇರಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಬೇವಿನ ಎಣ್ಣೆ ಮತ್ತು DEET ಕ್ರೀಮ್ ವಿತರಣೆಯನ್ನು ಬಿಬಿಎಂಪಿ ಪ್ರಾರಂಭಿಸಿದೆ. ನೈಸರ್ಗಿಕ ಕೀಟ-ನಿವಾರಕ ಗುಣಗಳಿಗೆ ಹೆಸರುವಾಸಿಯಾದ ಬೇವಿನ ಎಣ್ಣೆ ಮತ್ತು ದೀರ್ಘಕಾಲೀನ ರಕ್ಷಣೆ ನೀಡುವ DEET ಕ್ರೀಮ್ ಅನ್ನು ಸ್ಥಳೀಯರಿಗೆ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ವರ್ಷದ ಆರಂಭದಿಂದ ಸುಮಾರು 7,900 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಮೂರು ಸಾವುಗಳು ಸಂಭವಿಸಿವೆ. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಸೊಳ್ಳೆಗಳ ಉತ್ಪತ್ತಿ ತಾಣಗಳಲ್ಲಿ ಫಾಗಿಂಗ್ ಮತ್ತು ಕೀಟನಾಶಕ ಸಿಂಪಡಣೆ ಕಾರ್ಯವನ್ನು ತೀವ್ರಗೊಳಿಸುತ್ತಿದೆ. ಚಾಮರಾಜಪೇಟೆಯ ವಿವಿಧೆಡೆ ಫಾಗಿಂಗ್ ಮೂಲಕ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಗಳನ್ನು ನಾಶಪಡಿಸಲು ನಗರದಾದ್ಯಂತ ಫಾಗಿಂಗ್ ಮತ್ತು ಧೂಮೀಕರಣ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.

ಸಾರ್ವಜನಿಕರು ಡೆಂಗ್ಯೂ ನಿಯಂತ್ರಣದಲ್ಲಿ ಬಿಬಿಎಂಪಿ ಜೊತೆ ಕೈಜೋಡಿಸಬೇಕು ಮತ್ತು ತಮ್ಮ ಮನೆಗಳ ಸುತ್ತಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಸ್ವಚ್ಛತೆ ಕಾಪಾಡಬೇಕು. ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿ ನಾಥ್‌ ತಿಳಿಸಿದ್ದಾರೆ.

Read More
Next Story