
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿ 3 ಲಕ್ಷ ರೂಪಾಯಿ ಕಳವು
ವಿಜಯಲಕ್ಷ್ಮಿ ಮತ್ತು ನಾಗರಾಜ್ ಅವರು ಮನೆಯಲ್ಲೆಲ್ಲಾ ಹುಡುಕಾಡಿದರೂ ಹಣ ಪತ್ತೆಯಾಗಿಲ್ಲ. ನಂತರ ಮನೆಯ ಕೆಲಸದವರನ್ನು ವಿಚಾರಿಸಿದಾಗ, ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬೆಂಗಳೂರಿನ ಫ್ಲ್ಯಾಟ್‌ನಲ್ಲಿ 3 ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ, ಮನೆಗೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ದರ್ಶನ್ ಅವರ ಮ್ಯಾನೇಜರ್ ನಾಗರಾಜ್ ಅವರು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿರುವ ವಿಜಯಲಕ್ಷ್ಮಿ ಅವರ ಫ್ಲ್ಯಾಟ್‌ನಲ್ಲಿ ಈ ಕಳ್ಳತನ ನಡೆದಿದೆ. ಸೆಪ್ಟೆಂಬರ್ 4 ರಂದು ವಿಜಯಲಕ್ಷ್ಮಿ ಅವರು ಮೈಸೂರಿಗೆ ತೆರಳುವ ಮುನ್ನ, ತಮ್ಮ ಮ್ಯಾನೇಜರ್ ನಾಗರಾಜ್ ಅವರಿಗೆ ಮನೆಯ ವಾರ್ಡ್‌ರೋಬ್‌ನಲ್ಲಿದ್ದ ಹಣದಿಂದ ಸ್ವಲ್ಪ ಹಣವನ್ನು ತೆಗೆದುಕೊಡುವಂತೆ ಸೂಚಿಸಿದ್ದರು. ನಾಗರಾಜ್ ಅವರು ಹಣ ತೆಗೆದು ಕೊಟ್ಟ ನಂತರ ಉಳಿದ ಹಣವನ್ನು ಅಲ್ಲೇ ಇಟ್ಟಿದ್ದರು ಎನ್ನಲಾಗಿದೆ.
ಅದೇ ದಿನ ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದು, ಮನೆಯ ಬೀಗವನ್ನು ತಮ್ಮ ತಾಯಿಗೆ ನೀಡಿ ಮ್ಯಾನೇಜರ್ ನಾಗರಾಜ್ ಕೂಡ ತಮ್ಮ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಸೆಪ್ಟೆಂಬರ್ 7 ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸಾಗಿದ್ದರು.
ಸೆಪ್ಟೆಂಬರ್ 8 ರಂದು ವಾರ್ಡ್‌ರೋಬ್‌ನಲ್ಲಿ ಹಣವನ್ನು ಪರಿಶೀಲಿಸಿದಾಗ, ಸುಮಾರು 3 ಲಕ್ಷ ರೂಪಾಯಿ ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ವಿಜಯಲಕ್ಷ್ಮಿ ಮತ್ತು ನಾಗರಾಜ್ ಅವರು ಮನೆಯಲ್ಲೆಲ್ಲಾ ಹುಡುಕಾಡಿದರೂ ಹಣ ಪತ್ತೆಯಾಗಿಲ್ಲ. ನಂತರ ಮನೆಯ ಕೆಲಸದವರನ್ನು ವಿಚಾರಿಸಿದಾಗ, ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ, ಮನೆಗೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ಮ್ಯಾನೇಜರ್ ನಾಗರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.