256 acres land leased Mysore lords handed family Minister Krishna Byre Gowda clarifies
x

ಕಂದಾಯ ಸಚಿವ ಕೃಷ್ಣಬೈರೇಗೌಡ

Land Scam| ಮೈಸೂರು ರಾಜರಿಂದ ಭೋಗ್ಯ, 256 ಎಕರೆ ಕುಟುಂಬಕ್ಕೆ ಹಸ್ತಾಂತರ: ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ

ಕೋಲಾರ ಗರಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ನನ್ನ ಹೆಸರನ್ನೂ ತಳುಕು ಹಾಕಿ, ಒತ್ತುವರಿ ಮಾಡಿದ್ದೇನೆ ಎಂದು ಆರೋಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.


Click the Play button to hear this message in audio format

ಬೆಳಗಾವಿ ಅಧಿವೇಶನದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದ ಭೂಹಗರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಪಕ್ಷಗಳಿಗೆ ಸ್ಪಷ್ಟನೆ ನೀಡಿದ್ದು, ತಮ್ಮ ವಿರೋಧದ ಆರೋಪಗಳಿಗೆ ಉತ್ತರ ನೀಡಿದ್ದಾರೆ.

ಶುಕ್ರವಾರ(ಡಿ.19) ಹೇಳಿಕೆ ನೀಡಿರುವ ಅವರು, ಕಳೆದ ಮೂರು ದಿನಗಳಿಂದ ಕೋಲಾರ ತಾಲೂಕು ಗರಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ನನ್ನ ಹೆಸರನ್ನೂ ತಳುಕು ಹಾಕಿ, ನಾನೇ ಒತ್ತುವರಿ ಮಾಡಿದ್ದೇನೆ ಎಂದೂ ಆರೋಪಿಸಲಾಗಿದೆ. ಸಾರ್ವಜನಿಕ ಜೀವನದಲ್ಲಿ ನಾವು ಕೆಲಸ ಮಾಡುವಾಗ ನಮ್ಮ ಕೆಲಸವನ್ನು ಒಪ್ಪುವವರು-ವಿರೋಧಿಸುವವರು ಇದ್ದೇ ಇರುತ್ತಾರೆ. ಇದು ಸಾರ್ವಜನಿಕ ಜೀವನದ ಅವಿಭಾಗ್ಯ ಅಂಗ. ನಿಷ್ಠುರವಾಗಿ ಕೆಲಸ ಮಾಡುವಾಗ ಅದನ್ನು ಒಪ್ಪುವವರು ಇರುತ್ತಾರೆ. ಬಾಧಿತರಾಗುವುದೂ ಇರುತ್ತದೆ. ಕೆಲಸ ಮಾಡುವವರನ್ನು ಸಿಲುಕಿಸಲು ಯತ್ನಿಸುವ ಪ್ರಯತ್ನವನ್ನು ಹಲವರು ಮಾಡುತ್ತಾರೆ. ಅದಕ್ಕೆ ಚಿಂತೆಗೀಡಾಗುವ ಅಗತ್ಯವಿಲ್ಲ ಎಂದರು.

ಮೈಸೂರು ಮಹಾರಾಜರಿಂದ ಭೋಗ್ಯ

ಗರಡುಪಾಳ್ಯ ಗ್ರಾಮವು ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ್ದ ಗ್ರಾಮ. 1923ರಲ್ಲಿ ಮಹಾರಾಜರು ಖರೀದಿದ್ದರು. ಅವರು ಅಲ್ಲಿ ಕೃಷಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ರಸಾಯನಿಕ ಗೊಬ್ಬರವನ್ನ ಹೊರದೇಶದಿಂದ ಆಮದು ಮಾಡಿ, ಇಲ್ಲಿ ರೈತರಿಗೆ ಪರಿಚಯ ಮಾಡಿಸುವ ಕೇಂದ್ರವನ್ನಾಗಿ ನಡೆಸಲಾಗುತ್ತಿತ್ತು. ಇದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟ್ರಸ್ಟ್‌ಗೆ ಸೇರಿದ ಜಮೀನು. ಇದರ ವ್ಯವಹಾರವನ್ನು ಮಹಾರಾಜರ ಕಾರ್ಯದರ್ಶಿ ನಾರಾಯಣ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಅದನ್ನು ಆ ನಾರಾಯಣ ಸ್ವಾಮಿ ಅವರು 1953ರಲ್ಲಿ ನಮ್ಮ ತಾತ ಚೌಡೇಗೌಡರಿಗೆ 10 ವರ್ಷಗಳ ಭೋಗ್ಯಕ್ಕೆ ನೀಡಿದ್ದರು ಎಂದು ತಿಳಿಸಿದರು.

ಅಬೀಬುಲ್ಲಾ ಖಾನ್‌ಗೆ ಮಾರಾಟ

ಭೋಗ್ಯದ ಅವಧಿ ಮುಗಿಯುವುದಕ್ಕೂ ಮೊದಲೇ ರಾಜಮನೆತನದವರು ಆ ಭೂಮಿಯನ್ನು ಮಾರಾಟಕ್ಕೆ ಇಟ್ಟರು. ಚೌಡೇಗೌಡರು ಆ ಜಮೀನು ಖರೀದಿಸುವುದಾಗಿ ಹೇಳಿದರೂ, ಸರಿಯಾದ ಸಮಯಕ್ಕೆ ಹಣ ಹೊಂದಿಸಲಾಗಲಿಲ್ಲ. ಆದ್ದರಿಂದ, ಜಮೀನನ್ನು 1959ರಲ್ಲಿ ಅಬೀಬುಲ್ಲಾ ಖಾನ್ ಅವರಿಗೆ ಮಾರಾಟ ಮಾಡಿದರು. ಅದರ ವಿರುದ್ಧ ನಮ್ಮ ತಾತ ಕೋಲಾರ ವಿಶೇಷ ಜಿಲ್ಲಾಧಿಕಾರಿ ಬಳಿ ದೂರು ದಾಖಲಿದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಅಬೀಬುಲ್ಲಾ ಖಾನ್ ಅವರೇ ಭೂಮಿ ಮಾಲೀಕರು ಎಂದು ಆದೇಶ ನೀಡಿದ್ದರು.

256 ಎಕರೆ ಹಸ್ತಾಂತರ

ಜಿಲ್ಲಾಧಿಕಾರಿಯ ಆದೇಶದಲ್ಲಿ “ಗರಡುಪಾಳ್ಯ ಎಂಬ ಇಡೀ ಹಳ್ಳಿಯು ಒಬ್ಬ ಮಾಲೀಕನಿಗೆ ಸೇರಿದ್ದು. ಯಾರೂ ವಾಸ ಮಾಡದೇ ಇರುವ ‘ಬೇಚರಾಗ್’ ಗ್ರಾಮ. ಈ ಹಳ್ಳಿಯು ಶ್ರೀಕಂಠದತ್ತ ಒಡೆಯರ್ ಟ್ರಸ್ಟ್‌ಗೆ ಸೇರಿದ್ದಾಗಿದ್ದು, 1953ರಲ್ಲಿ ಇಡೀ ಹಳ್ಳಿಯನ್ನು ರಾಜಮನೆತನವು ಭೋಗ್ಯಕ್ಕೆ ನೀಡಿತ್ತು. ಬಳಿಕ, ಅಬೀಬುಲ್ಲಾ ಖಾನ್ ಅವರಿಗೆ 47,601 ರೂ. ಮಾರಾಟ ಮಾಡಿದೆ” ಎಂದು ಬರೆದಿದ್ದರು. ಬಳಿಕ, ಈ ಆದೇಶವನ್ನು ಪ್ರಶ್ನಿಸಿ ಮೈಸೂರ್ ಅಪಿಲೇಟ್ ಟ್ರಿಬ್ಯೂನಲ್‌ನಲ್ಲಿ ಚೌಡೇಗೌಡರು ಮೇಲ್ಮನವಿ ದಾಖಲಿಸಿದ್ದರು. ಆಗ, ಅಬೀಬುಲ್ಲಾ ಖಾನ್ ಅವರು ಒಪ್ಪಂದಕ್ಕೆ ಬಂದರು. ಗ್ರಾಮದ ಸಂಪೂರ್ಣ 256 ಎಕರೆ ಒಡೆತನವನ್ನು ಚೌಡೇಗೌಡರಿಗೆ ಬಿಟ್ಟುಕೊಟ್ಟರು. ಇದೆಲ್ಲವೂ ‘ಸೇಲ್ ಡೀಡ್’ (ಕ್ರಯ)ನಲ್ಲಿ ಸ್ಪಷ್ಟವಾಗಿದೆ. ಅಂದಿನಿಂದ ಈವರೆಗೆ ನಾವು ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇವೆ.

ಕೆರೆ ಒತ್ತುವರಿಯಾಗಿಲ್ಲ

ಈ ಜಮೀನಿನಲ್ಲಿ ಎರಡು ಕೆರೆಗಳಿವೆ. ಆ ಕಾರಣಕ್ಕಾಗಿಯೇ, ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಆ ಕೆರೆಗಳ ಭೂಮಿಯು ನಮ್ಮ ಕುಟುಂಬದ ಹೆಸರಿನಲ್ಲಿದೆ. ಆದರೆ, ಆ ಕೆರೆಗೆಳು ಅಸ್ತಿತ್ವದಲ್ಲಿವೆ. ಕೆರೆಗಳು ಮತ್ತು ಕೆರೆಗಳಿಗೆ ಹೊಂದಿಕೊಂಡಿರುವ ನಾಲೆಗಳ ಯಾವುದೇ ಒಂದಿಂಚೂ ಭೂಮಿಯನ್ನು ಒತ್ತುವರಿ ಮಾಡಲಾಗಿಲ್ಲ. ಬೇಕಿದ್ದರೆ ಯಾರು ಬೇಕಿದ್ದರೂ ಪರಿಶೀಲಿಸಲು ಬರಬಹುದು. ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು.

ಏನಿದು ವಿವಾದ ?

ಭೂ ದಾಖಲೆಗಳ ರಕ್ಷಕರಾಗಬೇಕಾದ ಕಂದಾಯ ಸಚಿವರೇ ಸ್ಮಶಾನ ಮತ್ತು ಕೆರೆ ಭೂಮಿಯನ್ನು ಕಬಳಿಸಿದ್ದಾರೆ. ಸರ್ಕಾರದ ನೈತಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದರು . ಸರ್ಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಒತ್ತುವರಿಯಾದ ಜಮೀನನ್ನು ವಾಪಸ್ ಪಡೆಯಬೇಕು. ಮೊದಲನೆಯ ಪ್ರಕರಣ ಕೋಲಾರ ಜಿಲ್ಲೆ ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ ಸರ್ವೇ ನಂಬರ್ 47ರ 1 ಎಕರೆ ಜಾಗ ಮತ್ತು 46 ಸರ್ವೇ ನಂಬರ್‌ ವಿಚಾರವಾಗಿದ್ದು, ಎರಡನೆಯದು ಕೆರೆ ಅಂಗಳ, 20 ಎಕರೆ 16 ಗುಂಟೆ ಜಾಗ ಆಗಿದೆ. ಒಟ್ಟು ಸೇರಿದರೆ 21 ಎಕರೆ 16 ಗುಂಟೆ. ಪ್ರತಿ ಎಕರೆಗೆ 5ರಿಂದ 6 ಕೋಟಿ ಬೆಲೆಯ ಜಮೀನುಗಳು ಇವಾಗಿದೆ. ಸರ್ವೇ ನಂಬರ್ 47ರ 1 ಎಕರೆ ಜಾಗ ಸ್ಮಶಾನದ ಜಮೀನು. ಇದನ್ನು ಯಾರೂ ತಮ್ಮ ಹೆಸರಿಗೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಗಮನ ಸೆಳೆದಿದ್ದರು.

ಮೂಲ ದಾಖಲೆಗಳ ಪ್ರಕಾರ ಸರ್ಕಾರಿ ಖರಾಬು ಸ್ಮಶಾನ ಎಂದಿದೆ. ಇದನ್ನು ಕಂದಾಯ ಸಚಿವರ ಹೆಸರಿಗೆ ವರ್ಗಾಯಿಸಿದ್ದು ಹೇಗೆ ? ಸ್ಮಶಾನವನ್ನು ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಎರಡನೆಯದಾಗಿ 20 ಎಕರೆ 16 ಗುಂಟೆ ಜಮೀನಿನಲ್ಲಿ ಮೂಲ ದಾಖಲೆಯಡಿ ಕೆರೆ ಎಂದಿದೆ. ಕೆಳಗಡೆ ಡಾಟ್ ಹಾಕಿ ಖರಾಬು ಎಂದು ಬರೆದಿದ್ದಾರೆ. ಎರಡೂ ಜಮೀನನ್ನು ವಾಪಸ್ ಪಡೆಯಬೇಕು. ಇಂತಹ ಅನೇಕ ಪ್ರಕರಣಗಳು ಇನ್ನು ಮುಂದೆ ಬರಲಿವೆ ಎಂದು ತಿಳಿಸಿದ್ದರು.

Read More
Next Story