
2025 Year Ender| ರಾಜ್ಯದ 'ಕ್ರೈಮ್ ಇಯರ್'; ಕಾನೂನು ಸುವ್ಯವಸ್ಥೆ ಮಕಾಡೆ ಮಲಗಿದ ಕರಾಳ ವರ್ಷ
2025ನೇ ಇಸವಿ ಕಾನೂನು ಸುವ್ಯವಸ್ಥೆ ಎಂಬುದು ಕೇವಲ ಕಾಗದದ ಮೇಲಿನ ಶಬ್ದವಾಗಿ ಉಳಿದು, ಅಪರಾಧಿಗಳು ಆಡಳಿತ ವ್ಯವಸ್ಥೆಯ ಮೂಗಿನಡಿಯಲ್ಲೇ ತಮ್ಮ 'ಸಾಮ್ರಾಜ್ಯ' ವಿಸ್ತರಿಸಿದ ವರ್ಷವಿದು.
2025ನೇ ಇಸವಿ ರಾಜ್ಯದ ಇತಿಹಾಸದಲ್ಲಿ ಅಭಿವೃದ್ಧಿಯ ಹೆಸರಿಗಿಂತ ಹೆಚ್ಚಾಗಿ, 'ಕ್ರೈಮ್ ಫೈಲ್ಸ್'ಗಳ ಸರಣಿ ಸ್ಫೋಟದಿಂದಲೇ ನೆನಪಿನಲ್ಲಿ ಉಳಿಯುವಂತಾಗಿದೆ. ನಿಶ್ಯಬ್ದವಾಗಿರಬೇಕಿದ್ದ ರಾತ್ರಿಗಳು ಗುಂಡಿನ ಸದ್ದಿಗೆ ಸಾಕ್ಷಿಯಾದರೆ, ಜನಜಂಗುಳಿಯ ಕ್ರೀಡಾಂಗಣ ಮರಣ ಮೃದಂಗ ಬಾರಿಸಿತು.
ಕಾನೂನು ಸುವ್ಯವಸ್ಥೆ ಎಂಬುದು ಕೇವಲ ಕಾಗದದ ಮೇಲಿನ ಶಬ್ದವಾಗಿ ಉಳಿದು, ಅಪರಾಧಿಗಳು ಆಡಳಿತ ವ್ಯವಸ್ಥೆಯ ಮೂಗಿನಡಿಯಲ್ಲೇ ತಮ್ಮ 'ಸಾಮ್ರಾಜ್ಯ' ವಿಸ್ತರಿಸಿದ ವರ್ಷವಿದು. ನಿವೃತ್ತ ಡಿಜಿಪಿ (ರಾಜ್ಯ ಪೊಲೀಸ್ ಮುಖ್ಯಸ್ಥ) ರಕ್ತ ಚೆಲ್ಲುವುದರಿಂದ ಹಿಡಿದು, ಬೆಳ್ಳಿತೆರೆಯ ಗ್ಲಾಮರ್ ಕಳ್ಳಸಾಗಣೆಯ ಕರಾಳ ಕೂಪಕ್ಕೆ ಇಳಿಯುವವರೆಗೆ, ಸಂಭ್ರಮದ ಮರೆಯಲ್ಲಿ ಅಡಗಿದ್ದ ಮೃತ್ಯುವಿನಿಂದ ಹಿಡಿದು, ನಡುರಸ್ತೆಯಲ್ಲಿ ಕೋಟ್ಯಂತರ ರೂಪಾಯಿಗಳು ಮಾಯವಾಗುವವರೆಗೆ 2025ರಲ್ಲಿ ನಡೆದ ಪ್ರತಿ ಘಟನೆಯೂ ವರ್ಷದ ಪ್ರಮುಖ ಕಪ್ಪುಚುಕ್ಕೆಗಳಾದವು.
ಗುಂಡು ಹಾರಿಸಿ ಎಟಿಎಂ ಹಣ ದರೋಡೆ
2025ನೇ ಸಾಲಿನ ಮೊದಲ ಹಬ್ಬ ಸಂಕ್ರಾಂತಿಯ ಹಬ್ಬಕ್ಕೆ ನಾಡಿನ ಜನತೆ ಸಜ್ಜಾಗುತ್ತಿದ್ದರು. ಆದರೆ, ಜ. 12ರ ಆ ಮಧ್ಯಾಹ್ನದ ಹೊತ್ತಿನಲ್ಲಿ ಬೀದರ್ ನಗರದ ಜನಜಂಗುಳಿಯ ರಸ್ತೆಯೊಂದರಲ್ಲಿ ನಡೆದ ಆ ಭೀಕರ ಘಟನೆ ರಾಜ್ಯದ ಕಾನೂನು ಸುವ್ಯವಸ್ಥೆಯ ಶವಪೆಟ್ಟಿಗೆಗೆ ಹೊಡೆದ ಮೊದಲ ಮೊಳೆಯಾಗಿತ್ತು. ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನವೊಂದು ದರೋಡೆಕೋರರ ಗುರಿಯಾಗಿತ್ತು. ಎಟಿಎಂ ಕೇಂದ್ರದ ಸಿಬ್ಬಂದಿ ಗಿರಿ ವೆಂಕಟೇಶ್ ಮತ್ತು ಶಿವಕುಮಾರ್ ಹಣದ ಪೆಟ್ಟಿಗೆಯೊಂದಿಗೆ ಕೆಳಗಿಳಿದರು. ಅಲ್ಲಿಯೇ ಸಮೀಪದಲ್ಲಿ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ದರೋಡೆಕೋರರು ಗಿರಿ ವೆಂಕಟೇಶ್ ಮತ್ತು ಶಿವಕುಮಾರ್ ಮೇಲೆ ಗುಂಡು ಹಾರಿಸಿ ಹಣದ ಬ್ಯಾಗ್‌ನೊಂದಿಗೆ ಪರಾರಿಯಾದರು. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬಿಹಾರದ ಇಬ್ಬರು ಪ್ರಮುಖ ಆರೋಪಿಗಳನ್ನು (ಅಮನ್ ಕುಮಾರ್, ಅಲೋಕ್ ಕುಮಾರ್) ಗುರುತಿಸಿದ್ದು, ಅವರಿಗೆ ಸಹಾಯ ಮಾಡಿದ ನಾಲ್ವರನ್ನು ಬಂಧಿಸಿದ್ದಾರೆ. ಆದರೆ ಮುಖ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಬ್ಯಾಂಕ್‌ಗೆ ನುಗ್ಗಿ ದರೋಡೆ
ಬೀದರ್‌ನಲ್ಲಿ ನಡೆದ ಘಟನೆ ಬೆನ್ನಲ್ಲೇ ಮಂಗಳೂರು ನಗರವನ್ನು ಬೆಚ್ಚಿಬೀಳಿಸಿದ ಘಟನೆ ಎಂದರೆ ಅದು ಕೋಟೆಕಾರ್‌ನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದ ಸಶಸ್ತ್ರ ದರೋಡೆ. ಕೇವಲ ಹಣದ ಲೂಟಿಯಷ್ಟೇ ಅಲ್ಲದೆ, ಜನನಿಬಿಡ ಪ್ರದೇಶದಲ್ಲಿ ಶಸ್ತ್ರಸಜ್ಜಿತ ತಂಡವೊಂದು ಹಾಡಹಗಲೇ ಬ್ಯಾಂಕ್‌ಗೆ ನುಗ್ಗಿದ್ದು ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಪ್ರಶ್ನೆಯನ್ನು ಎತ್ತಿತ್ತು. ಆದರೆ, ಮಂಗಳೂರು ಪೊಲೀಸರು ನಡೆಸಿದ 'ಹೈ-ವೋಲ್ಟೇಜ್' ಕಾರ್ಯಾಚರಣೆ ಅಪರಾಧ ಲೋಕಕ್ಕೆ ತಕ್ಕ ಉತ್ತರ ನೀಡಿತು. ಜನವರಿ 15 ರ ಮಧ್ಯಾಹ್ನದ ಸುಮಾರು 1:30ರ ಹೊತ್ತಿನಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಕೆಲವು ಗ್ರಾಹಕರು ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಆಗ ಎರಡು ಬೈಕ್‌ಗಳಲ್ಲಿ ಬಂದ ಐವರು ಮುಖವಾಡಧಾರಿಗಳು ಬ್ಯಾಂಕ್ ಒಳಗೆ ನುಗ್ಗಿದರು. ವ್ಯವಸ್ಥಾಪಕ ಮತ್ತು ಕ್ಯಾಷಿಯರ್ ತಲೆಗೆ ಪಿಸ್ತೂಲ್ ಇಟ್ಟು ಸ್ಟ್ರಾಂಗ್ ರೂಮ್ ಕೀಲಿ ಕೈ ಪಡೆದರು. ಕೇವಲ 15 ನಿಮಿಷಗಳಲ್ಲಿ ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ನಗದನ್ನು ಬ್ಯಾಗ್‌ಗಳಿಗೆ ತುಂಬಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾದರು. ತನಿಖೆ ಕೈಗೊಂಡ ಪೊಲೀಸರು ತಮಿಳುನಾಡು ಮೂಲದ ಮೂವರು ಕುಖ್ಯಾತ ದರೋಡೆಕೋರರನ್ನು ಬಂಧಿಸಲಾಯಿತು.
ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಕಾರ್ಯಾಚರಣೆ
ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ರನ್ಯಾ ರಾವ್ ಕೇವಲ ಬೆಳ್ಳಿತೆರೆಯ ನಟನೆಯಲ್ಲದೆ, ತೆರೆಯ ಹಿಂದೆ ಅಪಾಯಕಾರಿ 'ಗೋಲ್ಡ್ ರನ್ನಿಂಗ್' ಜಾಲದ ಭಾಗವಾಗಿದ್ದರು ಎಂಬ ಸತ್ಯ ಮಾ.3ರಂದು ಬಯಲಿಗೆ ಬಂದಿತು. ಗ್ಲಾಮರ್ ಪ್ರಪಂಚದ ಮಿಂಚಿನ ಹಿಂದೆ ಅಡಗಿರುವ ಆರ್ಥಿಕ ಹಪಾಹಪಿ ಮತ್ತು ಭೂಗತ ಲೋಕದ ನಂಟು ಈ ಪ್ರಕರಣದ ಮೂಲಕ ಜಗಜ್ಜಾಹೀರಾಯಿತು. ಮಾ.3ರ ಮುಂಜಾನೆ ದುಬೈನಿಂದ ವಿಮಾನವೊಂದರಲ್ಲಿ ಬೆಂಗಳೂರಿಗೆ ಬಂದಿಳಿದ ರನ್ಯಾ ರಾವ್ ಅವರನ್ನು ಗುಪ್ತಚರ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಪಾಸಣೆ ನಡೆಸಿದರು. ಆಕೆಯ ಬಳಿಯಿದ್ದ ಲಗೇಜ್ ಬ್ಯಾಗ್‌ನ ತಳಭಾಗದಲ್ಲಿ ಅತ್ಯಂತ ಚಾಣಾಕ್ಷತನದಿಂದ ಅಡಗಿಸಿಡಲಾಗಿದ್ದ 2.8 ಕೆಜಿ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾದವು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಕಾನೂನುಕ್ರಮ ಕೈಗೊಂಡರು. ಅಂತರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ನಿವೃತ್ತ ಡಿಜಿಪಿ ಓಂಪ್ರಕಾಶ್ ಹತ್ಯೆ
ಒಂದು ಕಾಲದಲ್ಲಿ ಇಡೀ ರಾಜ್ಯದ ಪೋಲೀಸ್ ಪಡೆಯನ್ನು ಮುನ್ನಡೆಸಿದ್ದರೋ, ಯಾರ ಆದೇಶಕ್ಕೆ ಸಾವಿರಾರು ಲಾಠಿಗಳು ಸನ್ನದ್ಧವಾಗುತ್ತಿದ್ದವೋ, ಅಂತಹ ಶಕ್ತಿಶಾಲಿ ಅಧಿಕಾರಿಯೇ ಸ್ವಂತ ಮನೆಯಲ್ಲೇ ಶವವಾಗಿ ಪತ್ತೆಯಾದರು. ನಿವೃತ್ತ ಡಿಜಿಪಿ ಓಂ ಪ್ರಕಾಶ್ ಏ.20 ರಂದು ಬೆಂಗಳೂರಿನ ಎಚ್‌ಎಸಾರ್ ಲೇಔಟ್‌ನಲ್ಲಿನ ಅವರ ನಿವಾಸದಲ್ಲಿ ಹತ್ಯೆಗೊಳಗಾದರು.
ಪ್ರಕರಣದಲ್ಲಿ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಶಂಕಿತರಾಗಿ ಬಂಧಿಸಲ್ಪಟ್ಟರು. ಪ್ರಾಥಮಿಕ ತನಿಖೆ ವೇಳೆ, ಪತಿ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯವರು 8 ರಿಂದ10 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಓಂ ಪ್ರಕಾಶ್ ಅವರು ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟರು ಎಂಬುದು ಪೊಲೀಸ್ ತನಿಖೆಯಲ್ಲಿ ಹೇಳಲಾಗಿದೆ.
ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕನಿಂದಲೇ ಕೃತ್ಯ
ಮೇ 18ರಂದು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣವು ಕೇವಲ ಒಂದು ಸುದ್ದಿಯಿಂದ ಇಡೀ ದೇಶದ ಗಮನ ಸೆಳೆಯಿತು. ಅಲ್ಲಿ ನಡೆದದ್ದು ಸಮಾನ್ಯ ದರೋಡೆಯಲ್ಲ, ಅದು ರಾಜ್ಯದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ಮತ್ತು ಅತ್ಯಂತ ಚಾಣಾಕ್ಷತನದ ಪ್ರಕರಣವಾಗಿತ್ತು. 53 ಕೋಟಿ ರೂ. ಬೃಹತ್ ಮೊತ್ತವು ಗುಂಡಿನ ಸದ್ದಿಲ್ಲದೆ, ರಕ್ತಪಾತವಿಲ್ಲದೆ ಮಾಯವಾಗಿತ್ತು. ಈ ದರೋಡೆಯ ಹಿಂದೆ ಇದ್ದಿದ್ದು ಒಬ್ಬ ವೃತ್ತಿಪರ ಅಪರಾಧಿಯಲ್ಲ, ಬದಲಿಗೆ ಅದೇ ಬ್ಯಾಂಕ್‌ನ ಗೌರವಾರ್ಹ ಸ್ಥಾನದಲ್ಲಿದ್ದ ಮಾಜಿ ವ್ಯವಸ್ಥಾಪಕ ಎಂಬುದು ಬಯಲಾದಾಗ ಪೊಲೀಸರೇ ಬೆಚ್ಚಿಬಿದ್ದರು.
ಪ್ರಕರಣದ ಮಾಸ್ಟರ್‌ಮೈಂಡ್ ಆಗಿದ್ದ ಮಾಜಿ ವ್ಯವಸ್ಥಾಪಕನಿಗೆ ಬ್ಯಾಂಕ್‌ನ ಪ್ರತಿ ಇಂಚು ಗೊತ್ತಿತ್ತು. ಸ್ಟ್ರಾಂಗ್ ರೂಮ್‌ನ ಡಿಜಿಟಲ್ ಕೋಡ್‌ಗಳು, ಸಿಸಿಟಿವಿ ಕ್ಯಾಮೆರಾಗಳ 'ಬ್ಲೈಂಡ್ ಸ್ಪಾಟ್'ಗಳುಮತ್ತು ಭದ್ರತಾ ಅಲಾರಂಗಳನ್ನು ಹೇಗೆ ನಿಷ್ಕ್ರಿಯಗೊಳಿಸಬೇಕು ಎಂಬ ಗುಟ್ಟು ಆತನಿಗೆ ಕರಗತವಾಗಿತ್ತು. ದರೋಡೆಗೆ ಸುಮಾರು ಆರು ತಿಂಗಳಿಂದ ಸಂಚು ರೂಪಿಸಲಾಗಿತ್ತು. ಬ್ಯಾಂಕ್‌ನ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡ ಮಾಜಿ ವ್ಯವಸ್ಥಾಪಕ ತನ್ನ ಸಹಚರರಿಗೆ ದಾರಿದೀಪವಾಗಿದ್ದ. ದರೋಡೆಕೋರರು ಮಾಜಿ ವ್ಯವಸ್ಥಾಪಕ ನೀಡಿದ್ದ ರಹಸ್ಯ ಪಾಸ್‌ವರ್ಡ್‌ಗಳನ್ನು ಬಳಸಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಕೇವಲ 45 ನಿಮಿಷಗಳಲ್ಲಿ 53 ಕೋಟಿ ರೂ. ಮೌಲ್ಯದ ನಗದು ಮತ್ತು ಗ್ರಾಹಕರ ಚಿನ್ನಾಭರಣಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಬ್ಯಾಗ್‌ಗಳಿಗೆ ತುಂಬಿಸಿ, ಕಾಯುತ್ತಿದ್ದ ವಾಹನದಲ್ಲಿ ಪರಾರಿಯಾದರು. ತಾಂತ್ರಿಕ ದಾಖಲೆಗಳು ಮತ್ತು ಮೊಬೈಲ್ ಲೊಕೇಶನ್‌ಗಳನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವ್ಯವಸ್ಥಾಪಕ ಸೇರಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಸಂಭ್ರಮದ ಮರೆಯಲ್ಲಿ ಅಡಗಿದ್ದ ಮೃತ್ಯು
ಜೂ. 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ ಕ್ರೀಡಾಂಗಣವಾಗಿ ಉಳಿಯದೆ,ದಶಕದ ಅತ್ಯಂತ ಭೀಕರ ಆಡಳಿತಾತ್ಮಕ ದುರಂತಕ್ಕೆ ಸಾಕ್ಷಿಯಾಯಿತು. ಆಡಳಿತಾತ್ಮಕ ವೈಫಲ್ಯ ಮತ್ತು ಪೊಲೀಸ್ ಇಲಾಖೆಯ ಅಸಮರ್ಥತೆಯಿಂದಾಗಿ 'ಮಸಣ'ವಾಗಿ ಮಾರ್ಪಟ್ಟಿತು. ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಕೇಳಬೇಕಿದ್ದ ಕ್ರೀಡಾಂಗಣದ ಹೊರಭಾಗದಲ್ಲಿ ಕಿರುಚಾಟ, ಆಕ್ರಂದನ ಮತ್ತು ಪ್ರಾಣಭಯದ ಸದ್ದು ಮೊಳಗಿತ್ತು. ಅಂತಾರಾಷ್ಟ್ರೀಯ ಪಂದ್ಯವೊಂದರ ಸಂಭ್ರಮದಲ್ಲಿದ್ದ ನಗರವು, ಕೇವಲ ಹದಿನೈದು ನಿಮಿಷಗಳ ಅವಧಿಯಲ್ಲಿ ನಡೆದ ಭೀಕರ ಕಾಲ್ತುಳಿತದಿಂದಾಗಿ ಶೋಕಸಾಗರದಲ್ಲಿ ಮುಳುಗಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಭೀಕರ ಕಾಲ್ತುಳಿತ ಸಂಭವಿಸಿದ್ದು, 11 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಪೂರ್ವಸಿದ್ಧತೆ ಇಲ್ಲದಿರುವುದು, ಪೊಲೀಸರ ಅನುಮತಿ ಪಡೆಯದಿರುವುದು ಮತ್ತು ಅತಿಯಾದ ಜನಸಂದಣಿಯೇ ಈ ದುರಂತಕ್ಕೆ ಕಾರಣ ಎಂದು ತನಿಖಾ ವರದಿಗಳು ತಿಳಿಸಿವೆ.
ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಮಾಡಿ ಅಮಾನತು ಮಾಡಲಾಯಿತು. ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ une ಏಕಸದಸ್ಯ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿತ್ತು. ಸಮಿತಿಯ ವರದಿಯಲ್ಲಿ, ಪೂರ್ವಸಿದ್ಧತೆಯ ಕೊರತೆ ಮತ್ತು ಅನುಮತಿ ಇಲ್ಲದಿದ್ದರೂ ಆಯೋಜಿಸಿದ್ದೇ ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಿದೆ.
ಚಡಚಣದಲ್ಲಿ ನಡೆದ 'ಗನ್ ಮ್ಯಾನ್'ಗಳ ಅಟ್ಟಹಾಸ!
ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಡಚಣ ಪಟ್ಟಣವು ಸೆ.14ರಂದು ರಣರಂಗವಾಗಿ ಮಾರ್ಪಟ್ಟಿತ್ತು. ರಾಜ್ಯದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಎಸ್‌ಬಿಐ ಹಾಡುಹಗಲಲ್ಲೇ ದರೋಡೆಕೋರರ ಗುರಿಯಾಗಿದ್ದು ಕಾನೂನು ಸುವ್ಯವಸ್ಥೆಯ ಶೋಚನೀಯ ಸ್ಥಿತಿಗೆ ಸಾಕ್ಷಿಯಂತಿತ್ತು. ಆದರೆ, ಈ ಬಾರಿ ಪೋಲೀಸರು ದರೋಡೆಕೋರರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನಡೆಸಿದ ಕಾರ್ಯಾಚರಣೆ ರಾಜ್ಯದ ಗಮನ ಸೆಳೆಯಿತು.
ಮುಖವಾಡ ಧರಿಸಿದ ಐವರು ದರೋಡೆಕೋರರು ಎರಡು ಬೈಕ್‌ನಲ್ಲಿ ಬಂದು ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿ ವ್ಯವಸ್ಥಾಪಕರಿಗೆ ಪಿಸ್ತೂಲ್‌ನಿಂದ ಬೆದರಿಸಿದರು. ಅಲ್ಲದೇ, ಬ್ಯಾಂಕ್ ಸಿಬ್ಬಂದಿ ಮತ್ತು ಕೆಲವು ಗ್ರಾಹಕರನ್ನು ಶೌಚಾಲಯ ಮತ್ತು ಲಾಕರ್ ರೂಂನಲ್ಲಿ ಸೇರಿಸಿ ಬೀಗ ಹಾಕಿದರು. ಕೇವಲ 10 ರಿಂದ 12 ನಿಮಿಷಗಳಲ್ಲಿ ಲಾಕರ್‌ನಲ್ಲಿದ್ದ ಸುಮಾರು 19 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 2 ಕೋಟಿ ರೂ. ನಗದನ್ನು ದೊಡ್ಡ ಚೀಲಗಳಿಗೆ ತುಂಬಿಸಿಕೊಂಡು, ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ ಮಹಾರಾಷ್ಟ್ರ ಗಡಿಯ ಕಡೆಗೆ ಪರಾರಿಯಾದರು.
ತಕ್ಷಣ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆಗಿಳಿದರು. ದರೋಡೆಕೋರರು ಬಳಸಿದ ಮೊಬೈಲ್ ಸಿಗ್ನಲ್‌ಗಳು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹಳ್ಳಿಗಳ ಕಡೆಗೆ ಚಲಿಸುತ್ತಿರುವುದು ಪತ್ತೆಯಾಯಿತು. ಕರ್ನಾಟಕ ಪೋಲೀಸರು ಮಹಾರಾಷ್ಟ್ರ ಪೋಲೀಸರ ಸಹಯೋಗದೊಂದಿಗೆ ಅಡಗುತಾಣದ ಮೇಲೆ ದಾಳಿ ನಡೆಸಿದರು. ಪ್ರಕರಣದ ಐವರು ಕಿಂಗ್‌ಪಿನ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಕಂಬಿಗಳ ಹಿಂದೆ ಹೈಟೆಕ್ ನೆಟ್‌ವರ್ಕ್: ಬಯಲಾದ ಜೈಲಿನ ಕರಾಳ ಮುಖ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ದಕ್ಷಿಣ ಭಾರತದ ಅತ್ಯಂತ ದೊಡ್ಡ ಮತ್ತು ಸುರಕ್ಷಿತ ಜೈಲು ಎಂದು ಕರೆಯಲ್ಪಡುತ್ತದೆ. ಆದರೆ, ನ. 8ರಂದು ಇಲ್ಲಿ ನಡೆದ ಘಟನೆಗಳು ಜೈಲು ಕೇವಲ ಶಿಕ್ಷೆಯ ತಾಣವಾಗಿರದೆ, ಪ್ರಭಾವಿ ಅಪರಾಧಿಗಳ ಪಾಲಿನ 'ಐಷಾರಾಮಿ ರೆಸಾರ್ಟ್' ಆಗಿ ಮಾರ್ಪಟ್ಟಿರುವುದನ್ನು ಸಾಬೀತುಪಡಿಸಿತು. ಕಂಬಿಗಳ ಹಿಂದಿದ್ದೂ ಅಪರಾಧಿಗಳು ಹೊರಜಗತ್ತಿನೊಂದಿಗೆ ಸಲೀಸಾಗಿ ಸಂಪರ್ಕ ಹೊಂದಿರುವುದು. ನ. 8ರಂದು ಮುಂಜಾನೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಕಾಡ್ಗಿಚ್ಚಿನಂತೆ ಹರಡಿತು.
ಅದರಲ್ಲಿ ಜೈಲಿನೊಳಗಿದ್ದ ರೌಡಿಶೀಟರ್‌ಗಳು ಮತ್ತು ಹೈ-ಪ್ರೊಫೈಲ್ ಕೈದಿಗಳು ಸ್ಮಾರ್ಟ್‌ಫೋನ್ ಹಿಡಿದು ವಿಡಿಯೋ ಕಾಲ್ ಮಾಡುತ್ತಾ, ಮದ್ಯ ಮತ್ತು ಸಿಗರೇಟ್ ಸೇವಿಸುತ್ತಾ ಮೋಜು ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿತು. ಪರಪ್ಪನ ಅಗ್ರಹಾರದ ಈ ಘಟನೆಯು 'ವರ್ಗಾವಣೆ ದಂಧೆ'ಯ ಮತ್ತೊಂದು ಮಗ್ಗಲನ್ನು ತೋರಿಸಿತು. ಪ್ರಭಾವಿ ಕೈದಿಗಳಿರುವ ಜೈಲಿಗೆ ಅಧಿಕಾರಿಯಾಗಿ ಹೋಗಲು ಲಕ್ಷಾಂತರ ರೂಪಾಯಿ ಲಂಚ ನೀಡಲಾಗುತ್ತದೆ ಎಂಬ ಆರೋಪಗಳು ಈ ಪ್ರಕರಣದ ಮೂಲಕ ಬಯಲಾಯಿತು.
ವಾಣಿಜ್ಯ ನಗರಿಯನ್ನು ಬೆಚ್ಚಿಬೀಳಿಸಿದ 'ಇಡಿ' ಸೋಗಿನ ಶಿಕಾರಿ
ನವೆಂಬರ್ ತಿಂಗಳು ರಾಜ್ಯದ ಕಾನೂನು ಸುವ್ಯವಸ್ಥೆಯ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ನ. 11ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಘಟನೆಯು ಅಪರಾಧ ಲೋಕದ ಹೊಸ ಆಯಾಮವನ್ನು ಅನಾವರಣಗೊಳಿಸಿತು. ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳೆಂದು ನಟಿಸಿ, ಬೆದರಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ದೋಚಿದ ತಂಡ, ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿತ್ತು. ಕೇರಳ ಮೂಲದ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿ ಸುದೀನ್ ಎಂ.ಆರ್. ತಮ್ಮ ವ್ಯಾಪಾರದ ನಿಮಿತ್ತ ಸುಮಾರು 3 ಕೋಟಿ ಮೌಲ್ಯದ ಚಿನ್ನಾಭರಣಗಳೊಂದಿಗೆ ಹುಬ್ಬಳ್ಳಿಗೆ ಬಂದಿದ್ದರು. ಈ ವೇಳೆ ಹಠಾತ್ ಆಗಿ ಸುದೀನ್ ಅವರನ್ನು ಅಡ್ಡಗಟ್ಟಿದ ಐದಾರು ಜನರ ತಂಡ, ತಾವು ಇಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡರು. ಅಷ್ಟೇ ಅಲ್ಲದೆ, ಅಸಲಿ ಅಧಿಕಾರಿಗಳಂತೆಯೇ ಕಾಣುವ ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ಸುದೀನ್ ಅವರನ್ನು ಬೆದರಿಸಿದರು.
ಅವರ ಬಳಿಯಿದ್ದ 3 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಿತ್ತುಕೊಂಡು ಅವರನ್ನು ಅರ್ಧ ಹಾದಿಯಲ್ಲೇ ಇಳಿಸಿ ದರೋಡೆಕೋರರು ಮಾಯವಾದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ 56.26 ಗ್ರಾಂ ಚಿನ್ನಾಭರಣ, 60 ಸಾವಿರ ರೂ. ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದರು.
15 ನಿಮಿಷಗಳಲ್ಲಿ 7.11 ಕೋಟಿ ಮಾಯ..!
ನ. 19ರಂದು ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ಸೌತ್ ಎಂಡ್ ಸರ್ಕಲ್‌ನಲ್ಲಿ ನಡೆದ ಘಟನೆ ಕೇವಲ ದರೋಡೆಯಾಗಿರಲಿಲ್ಲ, ಅದು ವ್ಯವಸ್ಥಿತವಾಗಿ ರೂಪಿಸಿದ ಒಂದು ಮಾಸ್ಟರ್ ಪ್ಲಾನ್. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ದರೋಡೆ ಕೇವಲ ಒಂದು ಲೂಟಿಯಾಗಿರಲಿಲ್ಲ; ಅದು ಭದ್ರತಾ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆಯ ಕಾರ್ಯಕ್ಷಮತೆಗೆ ಎಸೆದ ಬಹಿರಂಗ ಸವಾಲಾಗಿತ್ತು. ಆರ್‌ಬಿಐ ಹೆಸರಿನಲ್ಲಿ ನಡೆದ ಈ ದರೋಡೆ, ಬೆಂಗಳೂರಿನ ಭದ್ರತಾ ವ್ಯವಸ್ಥೆಯನ್ನೇ ಅಣಕಿಸಿತ್ತು. ಆದರೆ, ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕಾಯುತ್ತಿದ್ದದ್ದು ಕೇವಲ ದರೋಡೆಕೋರರಲ್ಲ, ಬದಲಿಗೆ ತನ್ನದೇ ಇಲಾಖೆಯ ಒಳಗಿದ್ದ 'ಕಪ್ಪು ಚುಕ್ಕೆ'!
ಸಿಎಂಎಸ್ ಏಜೆನ್ಸಿ ಸಿಬ್ಬಂದಿ ವಿವಿಧ ಎಟಿಎಂಗಳಿಗೆ ಹಣ ತುಂಬಿಸಲು 7.11 ಕೋಟಿ ರೂ. ನಗದಿನೊಂದಿಗೆ ಸೌತ್ ಎಂಡ್ ಸರ್ಕಲ್ ಬಳಿ ಸಾಗುತ್ತಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ 7-8 ಜನರ ತಂಡ ವಾಹನವನ್ನು ಅಡ್ಡಗಟ್ಟಿತು. ಆರ್‌ಬಿಐನಿಂದ ಬಂದಿದ್ದಾಗಿ ಹೇಳಿ, ಹಣದ ಸಾಗಣೆಯಲ್ಲಿ ಲೋಪದೋಷಗಳಿವೆ, ತನಿಖೆ ಮಾಡಬೇಕು" ಎಂದು ನಂಬಿಸಿ ಹಣ ದೋಚಲಾಗಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ತನಿಖಾ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಯಿತು. ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದಆರೋಪಿಗಳನ್ನು ಬಂಧಿಸಿದರು. ಐದು ಕೋಟಿ ರು.ಗಿಂತ ಹೆಚ್ಚಿನ ಮೊತ್ತವನ್ನು ವಶಕ್ಕೆ ಪಡೆದುಕೊಂಡರು.

