
ಬಿಬಿಎಂಪಿ ಭ್ರಷ್ಟಾಚಾರ | 2000 ಕೋಟಿ ಗುತ್ತಿಗೆ ಅಕ್ರಮ: ಲೋಕಾಯುಕ್ತಕ್ಕೆ ಮುನಿರತ್ನ ದೂರು
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಎರಡು ಸಾವಿರ ಕೋಟಿ ರೂ. ಅಕ್ರಮದ ತನಿಖೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಲೋಕಾಯುಕ್ತ, ಇಡಿ ಮತ್ತು ಸಿಬಿಐಗೆ ದೂರು ನೀಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಎರಡು ಸಾವಿರ ಕೋಟಿ ರೂ. ಅಕ್ರಮದ ತನಿಖೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಲೋಕಾಯುಕ್ತ, ಇಡಿ ಮತ್ತು ಸಿಬಿಐಗೆ ದೂರು ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ವಿವಿಧ ಯೋಜನೆ ಕಾಮಗಾರಿಗಳ ಗುತ್ತಿಗೆಯಲ್ಲಿ ಈ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಅವರು, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ ಈ ಬಹುಕೋಟಿ ಭ್ರಷ್ಟಾಚಾರದ ಕರ್ಮಕಾಂಡದ ರೂವಾರಿ ಎಂದೂ ದೂರಿನಲ್ಲಿ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ಭ್ರಷ್ಟಾಚಾರದ ಮಾಹಿತಿಯನ್ನು ದೂರಿನಲ್ಲಿ ಒದಗಿಸಿರುವ ಅವರು, ಈ ಭಾರೀ ಅಕ್ರಮದ ವಿರುದ್ಧ ತನಿಖೆ ನಡೆಸಬೇಕು ಎಂದು ತನಿಖಾ ಸಂಸ್ಥೆಗಳಿಗೆ ಒತ್ತಾಯಿಸಿದ್ದಾರೆ.
2000 ಕೋಟಿ ರೂಪಾಯಿ ಅಕ್ರಮ
ಬೆಂಗಳೂರು ಮಹಾನಗರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಲು ಸುಮಾರು 2000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆ ಪೈಕಿ ವಿಶ್ವಬ್ಯಾಂಕ್ ಸಾಲದಿಂದ ಸುಮಾರು 1700 ಕೋಟಿ ರೂ. ಹಾಗೂ ಸಾರ್ವಜನಿಕರ ತೆರಿಗೆಯಿಂದ 300 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಹೇಳಿರುವ ಅವರು, ವಿಧಾನಸಭಾ ಕ್ಷೇತ್ರವಾರು ಮಾಹಿತಿಯನ್ನೂ ನೀಡಿದ್ದು, ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ 540 ಕೋಟಿ ರೂ., ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 232 ಕೋಟಿ ರೂ., ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ 226 ಕೋಟಿ ರೂ., ಈಸ್ಟ್ ವೆಸ್ಟ್ ಮತ್ತು ಸೌತ್ ವಿಭಾಗಗಳಿಗೆ 215 ಕೋಟಿ ರೂ., ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 208 ಕೋಟಿ ರೂ., ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 205 ಕೋಟಿ ರೂ., ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ 112 ಕೋಟಿ ರೂ., ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ 81 ಕೋಟಿ ರೂ. ಹಂಚಿಕೆ ಮಾಡಿದ್ದು, ಈ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅನುದಾನ ಬಿಡುಗಡೆಗೆ ಮುನ್ನವೇ ಕಮಿಷನ್ ಹಣ!
ಈ ಭಾರೀ ಅನುದಾನದ ಕಾಮಗಾರಿಗಳ ಗುತ್ತಿಗೆಯನ್ನು ಹೊರ ರಾಜ್ಯದವರಿಗೆ ನೀಡಲು ತಯಾರಿ ನಡೆದಿದೆ. ಈಗಾಗಲೇ ಹೊರ ರಾಜ್ಯದ ಗುತ್ತಿಗೆದಾರರೊಂದಿಗೆ ಶೇ.15ರಷ್ಟು ಕಮಿಷನ್ ಮುಂಗಡವನ್ನು ಪಡೆಯಲಾಗಿದೆ. ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮೂಲಕ ಮಂಗಡ ಹಣವನ್ನು ಸಂದಾಯ ಮಾಡಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳ ಸಂಬಂಧಿಕರಿಗೇ ಈ ಟೆಂಡರ್ ನೀಡಲು ಮುಂದಾಗಿದ್ದಾರೆ ಎಂದೂ ಮುನಿರತ್ನ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಪಕ್ಷದ ಶಾಸಕರು ಮತ್ತು ಅವರ ಸಂಬಂಧಿಯೊಬ್ಬರ ಜೆಎಂಸಿ ಕನ್ಸ್ಟ್ರಕ್ಷನ್ ಕಂಪನಿಯ ಹೆಸರಿಗೆ ಹಾಗೂ ಇತರೆ ಕೆಲವು ಆಂಧ್ರ ಗುತ್ತಿಗೆದಾರರಿಗೆ 1768 ಕೋಟಿ ರೂ.ಗಳ ಪ್ಯಾಕೆಜ್ ನೀಡಲು ಕಾರ್ಯಾದೇಶ ಹೊರಡಿಸಲು ಸಿದ್ಧತೆ ನಡೆದಿದೆ. ಹಾಗೆ, ಗುತ್ತಿಗೆದಾರ ಆರ್.ಎನ್.ಶೆಟ್ಟಿ ಜೊತೆಯಲ್ಲೂ ಈಗಾಗಲೇ ಮಾತುಕತೆ ನಡೆದಿದೆ. ಅದಕ್ಕೆ ಸಂಬಂಧಪಟ್ಟ ಸುಮಾರು ಶೇ.15 ರಷ್ಟು ಕಮಿಷನ್ ಮುಂಗಡ ಕೂಡ ತಲುಪಿಸಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.