
200 ರೂ. ಟಿಕೆಟ್ ದರ: ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ವಾಣಿಜ್ಯ ಮಂಡಳಿಯಿಂದ ಮೇಲ್ಮನವಿ
ಸರ್ಕಾರದ 200 ರೂಪಾಯಿ ಟಿಕೆಟ್ ದರ ನಿಗದಿ ತೀರ್ಮಾನವು ಸಾರ್ವಜನಿಕರಿಗೆ ಅನುಕೂಲಕರವಾಗಿತ್ತು ಎಂದು ವಾಣಿಜ್ಯ ಮಂಡಳಿ ಪ್ರತಿಪಾದಿಸಿದೆ. "ಈ ನಿಯಮ ಜಾರಿಯಲ್ಲಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಿದ್ದರು.
ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು 200 ರೂಪಾಯಿಗೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ನಿರ್ಧರಿಸಿದೆ. ಈ ಮೂಲಕ, ಟಿಕೆಟ್ ದರ ಮಿತಿ ನಿಯಮವನ್ನು ಮರು ಜಾರಿಗೊಳಿಸಲು ಕಾನೂನು ಹೋರಾಟವನ್ನು ಮುಂದುವರಿಸಲು ಸಜ್ಜಾಗಿದೆ.
ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ಕ್ಕೆ ಮಾಹಿತಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಆರ್. ನರಸಿಂಹಲು, "ಹೈಕೋರ್ಟ್‌ನ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ನಾವು ಮೇಲ್ಮನವಿ ಸಲ್ಲಿಸಲಿದ್ದೇವೆ. ಈ ಕುರಿತು ನಮ್ಮ ವಕೀಲರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಕಲಾವಿದರ ಸಂಘ ಸೇರಿದಂತೆ ಇಡೀ ಚಲನಚಿತ್ರೋದ್ಯಮದ ಪರವಾಗಿ ಇಂದು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು," ಎಂದು ಖಚಿತಪಡಿಸಿದ್ದಾರೆ.
ವಾಣಿಜ್ಯ ಮಂಡಳಿಯ ವಾದವೇನು?
ಸರ್ಕಾರದ 200 ರೂಪಾಯಿ ಟಿಕೆಟ್ ದರ ನಿಗದಿ ತೀರ್ಮಾನವು ಸಾರ್ವಜನಿಕರಿಗೆ ಅನುಕೂಲಕರವಾಗಿತ್ತು ಎಂದು ವಾಣಿಜ್ಯ ಮಂಡಳಿ ಪ್ರತಿಪಾದಿಸಿದೆ. "ಈ ನಿಯಮ ಜಾರಿಯಲ್ಲಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಿದ್ದರು. ಆದರೆ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮತ್ತು ಹೊಂಬಾಳೆ ಫಿಲ್ಮ್ಸ್‌ನಂತಹ ಕೆಲವು ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಈ ಆದೇಶಕ್ಕೆ ತಡೆ ಸಿಕ್ಕಿತು. ಇದರಿಂದಾಗಿ, ಬೇರೆ ಭಾಷೆಯ ಚಲನಚಿತ್ರಗಳ ಟಿಕೆಟ್ ದರಗಳು ಮತ್ತೆ ಗಗನಕ್ಕೇರಿದ್ದು, ಅವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ," ಎಂದು ನರಸಿಂಹಲು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ, ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ವಿಧಿಸುತ್ತಿದ್ದ ದುಬಾರಿ ಟಿಕೆಟ್ ದರಗಳಿಗೆ ಕಡಿವಾಣ ಹಾಕಲು, ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿಗೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರವಿ ಹೊಸಮನಿ ಅವರ ನೇತೃತ್ವದ ನ್ಯಾಯಪೀಠವು, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ವಾಣಿಜ್ಯ ಮಂಡಳಿ ಕಾನೂನು ಹೋರಾಟಕ್ಕೆ ಮುಂದಾಗಿದೆ.