Bangalore Bioinnovation Center | 20 ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಕಂಪೆನಿಗಳ ಪ್ರಯೋಗಾಲಯಗಳು ಭಸ್ಮ
x
ಬೆಂಗಳೂರು ಬಯೋ ಇನ್ನೊವೇಶನ್‌ ಸೆಂಟರ್‌

Bangalore Bioinnovation Center | 20 ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಕಂಪೆನಿಗಳ ಪ್ರಯೋಗಾಲಯಗಳು ಭಸ್ಮ

ಬೆಂಗಳೂರು ಬಯೋ ಇನ್ನೊವೇಶನ್‌ ಸೆಂಟರ್‌ನಲ್ಲಿ ಮಂಗಳವಾರ ಸಂಜೆ ನಡೆದ ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಯುತ್ತಿದೆ. ಅತಿಯಾದ ರಾಸಾಯನಿಕಗಳನ್ನು ಸಂಗ್ರಹಿಸಿದ್ದೇ ಅಗ್ನಿಅನಾಹುತಕ್ಕೆ ಕಾರಣವಾಗಿದೆ ಎಂಬ ಮಾಹಿತಿ ದೊರೆತಿದೆ.


ಬೆಂಗಳೂರಿನ ಬಯೋ ಇನ್ನೊವೇಶನ್ ಸೆಂಟರ್‌ನಲ್ಲಿ (ಬಿಬಿಸಿ) ಸಂಭವಿಸಿದ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಕಂಪನಿಗಳು ಹಾನಿಗೊಳಗಾಗಿವೆ. ಫರ್ಮಾಸೂಟಿಕಲ್‌, ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ಕಂಪನಿಯ ಪ್ರಯೋಗಾಲಯಗಳು ಸುಟ್ಟು ಬೂದಿಯಾಗಿವೆ. ಇದರಿಂದ ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಯಾವ ಸ್ಟಾರ್ಟ್ ಅಪ್‌ಗಳಿಗೆ ಹಾನಿ?

ಫರ್ಮ್ ಬಾಕ್ಸ್‌ನ ಮೂರು ಪ್ರಯೋಗಾಲಯಗಳು, ಫಿಕ್ಸ್ 44ನ 3ಲ್ಯಾಬ್, ಅಜಿತಾ ಪ್ರೊಡ್ರಗ್ ಲ್ಯಾಬ್, ಗ್ಯಾಲೋರ್ ಟಿಎಕ್ಸ್ ಲ್ಯಾಬ್, ಇಕೇಶಿಯಾ ಲ್ಯಾಬ್, ಇಮ್ಯುನಿಟಸ್ ನ ಎರಡು ಲ್ಯಾಬ್, ಯೋಕೊಗಾವ ಲ್ಯಾಬ್, ಅಟ್ರಿಮ್ ಪ್ರೊಡೊ, 4 ಬೇಸ್ ಕೇರ್, ಅನಾಬಿಯೊ, ಪಂಡೋರಿಯಂ, ಅಕ್ಸೊನೆಕ್ಸ್ ಪ್ರೆಸೂಡ್ ಲೈಫ್‌ ಸೈನ್ಸ್‌, ಝುಚು ಸೇರಿದಂತೆ ಹಲವು ಸ್ಟಾರ್ಟ್ ಅಪ್ ಕಂಪನಿಗಳ ಪ್ರಯೋಗಾಲಯಗಳು ಹಾನಿಯಾಗಿವೆ.

ಪ್ರತಿನಿಧಿಗಳೊಂದಿಗೆ ಸಚಿವರ ಸಭೆ

ಬೆಂಗಳೂರು ಬಯೋ ಇನ್ನೊವೇಶನ್ ಸೆಂಟರ್‌ನಲ್ಲಿ ಸ್ಟಾರ್ಟ್‌ ಅಪ್‌ ಕಂಪೆನಿಗಳನ್ನು ಆರಂಭಿಸಿದ್ದ ಪ್ರತಿನಿಧಿಗಳೊಂದಿಗೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಸಭೆ ನಡೆಸಿದರು.

ಅಗ್ನಿ ಅವಘಡದಲ್ಲಿ ಆಗಿರುವ ಹಾನಿಯ ಸಂಬಂಧ ಪ್ರತಿನಿಧಿಗಳಿಂದ ಮಾಹಿತಿ ಪಡೆದರು. ತಮ್ಮ ಕಚೇರಿಯಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ 25 ಕ್ಕೂ ಹೆಚ್ಚು ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿ, ಹಾನಿಯ ಬಗ್ಗೆ ಸಚಿವರಿಗೆ ವಿವರಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಸೂಕ್ತ ಪರಿಹಾರದ ಮಾರ್ಗಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಘಟನೆ ನಡೆದಿದ್ದು ಹೇಗೆ?

ಜ.14 ರಂದು ಬೆಳಗಿನ ಜಾವ 4.35ಕ್ಕೆ ಎರಡನೇ ಮಹಡಿಯ ಗ್ಯಾಲೋರ್ ಟಿಎಕ್ಸ್ ಸ್ಟಾರ್ಟ್ ಅಪ್ ಕೊಠಡಿಯ ESF07 ಪ್ರಯೋಗಾಲಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಐದು ತಾಸುಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ 20 ಕ್ಕೂ ಹೆಚ್ಚು ಪ್ರಯೋಗಾಲಯಗಳು ಬೆಂಕಿಗೆ ಆಹುತಿಯಾಗಿದ್ದು, ಅಂದಾಜು 152ಕೋಟಿ ರೂ. ನಷ್ಟವಾಗಿದೆ ಎಂದು ಐಟಿ-ಬಿಟಿ ಇಲಾಖೆ ಅಂದಾಜಿಸಿದೆ. ಸ್ಟಾರ್ಟ್ ಅಪ್‌ ಕಂಪನಿಗಳ 110 ಕೋಟಿ, ಬೆಂಗಳೂರು ಇನ್ನೊವೇಶನ್ ಸೆಂಟರ್‌ಗೆ ಸೇರಿದ 42 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ವ್ಯವಸ್ಥೆ ಸಂಪೂರ್ಣ ಹಾನಿಯಾಗಿದೆ.

ರಾಸಾಯನಿಕ ಸಂಗ್ರಹವೇ ಕಾರಣ

ಬೆಂಗಳೂರು ಇನ್ನೊವೇಶನ್‌ ಸೆಂಟರ್‌ನಲ್ಲಿರುವ ಸ್ಟಾರ್ಟ್ ಅಪ್‌ಗಳಲ್ಲಿ ಹೆಚ್ಚು ರಾಸಾಯನಿಕ ಬಳಸದಂತೆ ಹಾಗೂ ಸಂಗ್ರಹಿಸದಂತೆ ಐಟಿ-ಬಿಟಿ ಇಲಾಖೆ ಈ ಹಿಂದೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ರಾಸಾಯನಿಕಗಳನ್ನು ಸಂಗ್ರಹಿಸಿದ್ದೇ ಅಗ್ನಿಅನಾಹುತಕ್ಕೆ ಕಾರಣ ಎನ್ನಲಾಗಿದೆ. ಸ್ಟಾರ್ಟ್ ಅಪ್‌ಗಳು ಸಾಲ್ವೆಂಟ್, ಎಥೆನಾಲ್ ಹಾಗೂ ಇನ್ನಿತರೆ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವ ಸಲುವಾಗಿ ಅಪಾರ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದರು. ಇದರಿಂದ ಅಗ್ನಿ ಅನಾಹುತ ಸಂಭವಿಸಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಅಗ್ನಿ ದುರಂತದಿಂದ ಮೊದಲ ಹಾಗೂ ಕೆಳ ಮಡಿಯಲ್ಲಿ ಸಂಪರ್ಕ ಕಲ್ಪಿಸಿದ್ದ HVAC ಲೈನ್‌ಗಳು ಹಾನಿಯಾಗಿವೆ. ಅಲ್ಲದೇ ಬೆಂಗಳೂರು ಬಯೋ ಬ್ಯಾಂಕ್, ಕ್ಲೀನ್‌ ರೂಂ, ಫ್ಲೋಸೈಟೋಮೆಟ್ರಿ, ಎಚ್‌ವಿಎಸಿ ಯೂನಿಟ್, ಎಸಿ ಯೂನಿಟ್ ಸೇರಿ ಮೂಲಸೌಕರ್ಯ ವ್ಯವಸ್ಥೆ ಬೆಂಕಿಗಾಹುತಿಯಾಗಿದೆ. ಬಹುತೇಕ ಸ್ಟಾರ್ಟ್ ಅಪ್ ಯೂನಿಟ್‌ಗಳು ಸ್ವಂತ ಉಪಕರಣಗಳನ್ನು ಒಳಗೊಂಡಿದ್ದವು.

ಏನಿದು ಬಯೋ ಇನ್ನೊವೇಶನ್ ಸೆಂಟರ್?

ರಾಜ್ಯ ಸರ್ಕಾರಿ ಸ್ವಾಮ್ಯದ ಬೆಂಗಳೂರು ಬಯೋ ಇನ್ನೊವೇಶನ್ ಸೆಂಟರ್ ಜೀವ ವಿಜ್ಞಾನ ಕುರಿತ ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡಿರುವ ಸ್ಟಾರ್ಟ್ ಅಪ್ ಗಳ ಸಮುಚ್ಚಯವಾಗಿತ್ತು. ಬಿಬಿಸಿ ಸೆಂಟರ್‌ನಲ್ಲಿ ಸುಮಾರು 120 ಸ್ಟಾರ್ಟ್ ಅಪ್ ಕಂಪನಿಗಳ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿದ್ದವು. 2015 ರಲ್ಲಿ ಆರಂಭಿಸಲಾದ ಬೆಂಗಳೂರು ಬಯೋ ಇನ್ನೊವೇಶನ್ ಸೆಂಟರ್ ಏಷ್ಯಾದಲ್ಲಿ ಅತ್ಯುತ್ತಮ ಸಂಶೋಧನಾ ಕೇಂದ್ರವಾಗಿ ಗುರುತಿಸಿಕೊಂಡಿತ್ತು.10ಎಕರೆ ವಿಸ್ತೀರ್ಣದಲ್ಲಿರುವ ಬಿಬಿಸಿ ಕೇಂದ್ರದಲ್ಲಿಆರೋಗ್ಯ, ಕೃಷಿ, ಆಹಾರ/ ಪೌಷ್ಟಿಕಾಂಶ, ಕೈಗಾರಿಕಾ ಜೈವಿಕ ತಂತ್ರಜ್ಞಾನ ಹಾಗೂ ಪರಿಸರ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿದ್ದವು.

Read More
Next Story