ಕೊಳವೆ ಬಾವಿ ದುರಂತ | ಮಗು ಸಾತ್ವಿಕ್ ರಕ್ಷಣೆಗಾಗಿ ಮುಂದುವರಿದ ಕಾರ್ಯಾಚರಣೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಎರಡು ವರ್ಷದ ಮಗುವನ್ನು ಮೇಲೆತ್ತಲು ಗುರುವಾರವೂ ಕಾರ್ಯಾಚರಣೆ ಮುಂದುವರಿದಿದೆ. ಎಸ್ ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸರು ಮಗು ರಕ್ಷಣೆಗೆ ಹರಸಾಹಸ ಮಾಡುತ್ತಿದ್ದಾರೆ.
ಸಾತ್ವಿಕ್ ಮುಜಗೊಂಡ ಎಂಬ ಎರಡು ವರ್ಷದ ಮಗು ಇತ್ತೀಚಿಗಷ್ಟೆ ಕೊರೆಸಲಾಗಿದ್ದ 180 ಅಡಿ ಆಳದ ಕೊಳವೆ ಬಾವಿಗೆ ಬುಧವಾರ ಬಿದ್ದಿತ್ತು. ಮೋಟರ್ ಇಳಿಸಲು ತಾತನ ಜೊತೆ ಸಾತ್ವಿಕ್ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
ಬುಧವಾರ ಸಂಜೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಆಹೋರಾತ್ರಿ ಕಾರ್ಯಾಚರಣೆ ನಡೆಸಿದರೂ ಕಲ್ಲು ಮತ್ತು ಬಂಡೆಗಳು ಅಡ್ಡ ಬಂದಿರುವ ಹಿನ್ನೆಲೆಯಲ್ಲಿ ಮಗು ರಕ್ಷಣೆ ಕಠಿಣವಾಗಿದೆ ಎನ್ನಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಮಗುವಿನ ಚಲನವಲನ ಸೆರೆಯಾಗಿದೆ. ಆಯಾತಪ್ಪಿ ತಲೆಕೆಳಗಾಗಿ 16 ಅಡಿ ಆಳದಲ್ಲಿ ಮಗು ಸಾತ್ವಿಕ್ ಇದ್ದಾನೆ. ಆಕ್ಸಿಜನ್ ಪೂರೈಸಿ SDRF ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡರುವ ಸಚಿವ ಎಂಬಿ ಪಾಟೀಲ್, ʻʻವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಎರಡು ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದ ಘಟನೆ ನನ್ನ ಮನಕಲುಕಿದೆ. ಮಗುವನ್ನು ರಕ್ಷಿಸಲು ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದು ಆ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿರುವೆ. ಈ ಸಂದರ್ಭದಲ್ಲಿ ಮಗುವು ಸುರಕ್ಷಿತವಾಗಿ ಪೋಷಕರ ಮಡಿಲು ಸೇರುವಂತಾಗಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆʼʼ ಎಂದು ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ 180 ಅಡಿಯಷ್ಟು ಆಳದ ಕೊಳವೆ ಬಾವಿ ಕೊರೆಯಲಾಗಿತ್ತು. 180 ಅಡಿಗೆ ಏರ್ ಪಾಸ್ ಆಗಿ ಪಾಯಿಂಟ್ ವಿಫಲವಾಗಿತ್ತು, ಹೀಗಾಗಿ ಪಕ್ಕದಲ್ಲಿ 480 ಅಡಿಯಷ್ಟು ಮತ್ತೊಂದು ಕೊಳವೆ ಬಾವಿ ಕೊರೆಯಲಾಗಿತ್ತು. ಅದರಲ್ಲಿ ನೀರು ಸಿಕ್ಕಿದ್ದರಿಂದ ಸಂಜೆ ಮೋಟರ್ ಇಳಿಸುವ ಕಾರ್ಯ ಮಾಡಲಾಗಿತ್ತು. ಮಗು ಪಕ್ಕದಲ್ಲಿ ಕೊರೆದ ಕೊಳವೆ ಬಾವಿಗೆ ತಲೆ ಕೆಳಗಾಗಿ ಬಿದ್ದಿದೆ. ವಿಫಲವಾದ ಕೊಳವೆ ಬಾವಿ ಮುಚ್ಚದೆ ಹಾಗೆ ಬಿಟ್ಟಿದ್ದರು.
16 ಅಡಿ ವರೆಗೂ ಕೇಸಿಂಗ್ ಪೈಪ್ ಹಾಕಿ ಡ್ರಿಲ್ ಮಾಡಿದ್ದರಿಂದ, ಅಲ್ಲಿ ಮಗು ಸಿಲುಕಿದೆ. ಸದ್ಯ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದ್ದು ಕ್ಯಾಮೆರಾ ಮೂಲಕ ಮಗುವಿನ ಚಲನವಲನ ಗಮನಿಸಲಾಗುತ್ತಿದೆ. ಕೊಳವೆ ಬಾವಿಯ ಮೂರು ದಿಕ್ಕಿನಲ್ಲಿ ಜೆಸಿಬಿ ಮೂಲಕ ಭೂಮಿ ಅಗೆಯುತ್ತಿದ್ದಾರೆ. ಸದ್ಯ ಕಾರ್ಯಾಚರಣೆಗೆ ಬಂಡೆ ಅಡ್ಡಿಯಾಗಿದ್ದು, ಕಲ್ಲನ್ನು ಒಡೆಯುವ ಕಾರ್ಯ ಮಾಡಲಾಗುತ್ತಿದೆ.
ಸತತ 12 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ನಿನ್ನೆ ಸಾಯಂಕಾಲ 5.30ಕ್ಕೆ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಇವತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ. ಈಗಾಗಲೇ 20 ಅಡಿಯವರೆಗೆ ಡಿಗ್ಗಿಂಗ್ ಕಾರ್ಯಾಚರಣೆ ಪೂರ್ಣಗೊಂಡಿದ್ದು, 20 ಅಡಿಯವೆರೆಗೆ ಅಗೆದ ಬಳಿಕ ಅಡ್ಡಲಾಗಿ 3-4 ಅಡಿ ರಂಧ್ರ ಕೊರೆದು ಬಾಲಕನನ್ನು ಹೊರತೆಗೆಯಲು ಯೋಜಿಸಲಾಗಿದೆ. ಕಲ್ಲು ಅಡ್ಡ ಬಂದಿರೋ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.