
ಲಕ್ಸಿ Z ಫೋಲ್ಡ್ 7 ಕದ್ದು, ಅದೇ ತೂಕದ ಟೈಲ್
1.86 ರೂ. ಲಕ್ಷದ ಫೋನ್‌ಗೆ ಆರ್ಡರ್ ಬಾಕ್ಸ್‌ನಲ್ಲಿ ಸಿಕ್ಕಿದ್ದು ಸೆರಾಮಿಕ್ ಟೈಲ್; ಬೆಂಗಳೂರಿನ ಟೆಕ್ಕಿಗೆ ವಂಚನೆ
ಫೋನ್‌ನ ತೂಕಕ್ಕೆ ಸರಿಸಮನಾದ ಒಂದು ಟೈಲ್ಸ್ ತುಂಡನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಈ ವಿಡಿಯೋ ಈಗ ಪೊಲೀಸರ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ 1.86 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 7 ಆರ್ಡರ್ ಮಾಡಿದ್ದರು. ಆದರೆ, ಡೆಲಿವರಿ ಬಂದಾಗ ಬಾಕ್ಸ್‌ನಲ್ಲಿ ಫೋನ್ ಬದಲಿಗೆ ಒಂದು ಸೆರಾಮಿಕ್ ಟೈಲ್ ತುಂಡು ಕಳುಹಿಸಿ ವಂಚಿಸಿರುವ ಘಟನೆ ನಡೆದಿದೆ.
ಅ. 19 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಲಚೇನಹಳ್ಳಿಯ ನಿವಾಸಿ, 43 ವರ್ಷದ ಪ್ರೇಮಾನಂದ್ ಎಂಬ ಟೆಕ್ಕಿ ಅ. 14 ರಂದು ಫೋನ್‌ಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದರು.
ಬಹಳಷ್ಟು ಆನ್‌ಲೈನ್ ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿದ್ದ ಪ್ರೇಮಾನಂದ್ ಅವರು, ಡೆಲಿವರಿ ಸಿಬ್ಬಂದಿಯಿಂದ ಪ್ಯಾಕೇಜ್ ಸ್ವೀಕರಿಸಿದ ಕೂಡಲೇ ಅದನ್ನು ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಫೋನ್ ತೂಕಕ್ಕೆ ಸರಿಸಮನಾದ ಒಂದು ಟೈಲ್ ತುಂಡನ್ನು ಬಾಕ್ಸ್‌ನಲ್ಲಿ ವ್ಯವಸ್ಥಿತವಾಗಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಈ ವಿಡಿಯೋವೇ ಈಗ ಪೊಲೀಸರ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದೆ.
ಸೈಬರ್ ಪೋರ್ಟಲ್ ಮೂಲಕ ದೂರು
ವಂಚನೆಗೆ ಒಳಗಾದ ಕೂಡಲೇ, ಪ್ರೇಮಾನಂದ್ ಅವರು ಮೊದಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಮೂಲಕ ದೂರು ದಾಖಲಿಸಿದರು. ಬಳಿಕ ಅಕ್ಟೋಬರ್ 19 ರಂದು ಅವರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದೂರು ನೀಡಿದರು. ಪೊಲೀಸರು ಈ ವಂಚನೆ ಪ್ರಕರಣದ ಕುರಿತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮುಖ್ಯವಾಗಿ, ಐಟಿ ಕಾಯ್ದೆಯ ಸೆಕ್ಷನ್ 66 (ಡಿ) (ವ್ಯಕ್ತಿತ್ವದ ಮೂಲಕ ವಂಚನೆ) ಮತ್ತು ಬಿಎನ್‌ಎಸ್‌ನ ಸೆಕ್ಷನ್ 318 (4) (ಮೌಲ್ಯಯುತ ಭದ್ರತೆ ಅಥವಾ ಆಸ್ತಿಯನ್ನು ಒಳಗೊಂಡ ವಂಚನೆ) ಮತ್ತು 319 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಗುರುಗ್ರಾಮದಲ್ಲಿ ಬೆಂಗಳೂರಿಗೆ ರವಾನೆಯಾಗಬೇಕಿದ್ದ ಅಮೆಜಾನ್ ಆರ್ಡರ್‌ಗಳನ್ನು ಕದಿಯುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ, ದುಬಾರಿ ಬೆಲೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಡೆಲಿವರಿ ಮಾಡುವ ಹಂತದಲ್ಲಿ ಕದಿಯುವ ಮತ್ತು ಅವುಗಳ ಪ್ಯಾಕೇಜ್‌ಗಳನ್ನು ಮಾರ್ಪಡಿಸಿ ಕಳುಹಿಸುವ ಒಂದು ದೊಡ್ಡ ಜಾಲವು ಕಾರ್ಯನಿರ್ವಹಿಸುತ್ತಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರೇಮಾನಂದ್ ಪ್ರಕರಣದಲ್ಲೂ ಡೆಲಿವರಿ ಪಾಲುದಾರರ ಪಾತ್ರದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.




