Traffic Violation | ಸಂಚಾರ ನಿಯಮ ಉಲ್ಲಂಘನೆ: ಬಿತ್ತು ವಾಹನಕ್ಕಿಂತ ದುಪ್ಪಟ್ಟು ದಂಡ!
ಕ್ಯಾಮೆರಾ ಕಣ್ಗಾವಲು, ಕಟ್ಟುನಿಟ್ಟಿನ ಗಸ್ತು ನಡುವೆಯೂ ವಾಹನ ಸವಾರನೊಬ್ಬ ನಿಯಮ ಉಲ್ಲಂಘಿಸಿ, ತನ್ನ ಸ್ಕೂಟರಿನ ಬೆಲೆಗಿಂತ ದುಪ್ಪಟ್ಟು ದಂಡಕ್ಕೆ ಪಾತ್ರನಾಗಿದ್ದಾನೆ!
ನಾಲ್ಕು ಕಿ.ಮೀ. ದೂರ ಕ್ರಮಿಸಲು 40 ನಿಮಿಷ ಸಮಯ ತೆಗೆದುಕೊಂಡು ತೆವಳುತ್ತಿರುವ ಬೆಂಗಳೂರಿನ ವಾಹನ ದಟ್ಟಣೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಗಳು ಕೂಡ ದುಬಾರಿಯಾಗಿವೆ. ಕಿರಿದಾದ ಜಾಗದಲ್ಲೂ ವಾಹನಗಳ ಮಧ್ಯೆ ನುಗ್ಗಿ ದಟ್ಟಣೆ ಉಂಟು ಮಾಡುವ ದ್ವಿಚಕ್ರ ವಾಹನಗಳೇ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಪೊಲೀಸರಿಗೆ ತಲೆ ನೋವಾಗಿದೆ.
ಕ್ಯಾಮೆರಾ ಕಣ್ಗಾವಲು, ಕಟ್ಟುನಿಟ್ಟಿನ ಪರಿಶೀಲನೆ, ಗಸ್ತು ಮಧ್ಯೆಯೂ ವಾಹನ ಸವಾರನೊಬ್ಬ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸಿದ್ದು, ಆತನಿಗೆ ಸಂಚಾರಿ ಪೊಲೀಸರು ವಿಧಿಸಿರುವ ದಂಡದ ಮೊತ್ತ 1.61 ಲಕ್ಷ ರೂ.ಗಳಷ್ಟಾಗಿದೆ. ಹೆಲ್ಮೆಟ್ ರಹಿತ ವಾಹನ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ಇನ್ನಿತರೆ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೇ ಉಲ್ಲಂಘಿಸಿದ್ದಾನೆ.
KA05 JX ***4 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರ ಕಳೆದ ಹಲವು ವರ್ಷಗಳಿಂದ ಸಂಚಾರಿ ನಿಯಮ ಉಲ್ಲಂಘಿಸುತ್ತಾ, ದಂಡ ಕಟ್ಟುತ್ತಲೇ ಬರುತ್ತಿದ್ದಾರೆ. ಅವರು ಬಳಸುತ್ತಿರುವ ದ್ವಿಚಕ್ರ ವಾಹನದ ಬೆಲೆ ಸಾಮಾನ್ಯವಾಗಿ 80 ಸಾವಿರವಿದ್ದರೆ, ಟ್ರಾಫಿಕ್ ಪೊಲೀಸರು ಹಾಕಿರುವ ದಂಡದ ಮೊತ್ತ ವಾಹನ ಬೆಲೆಯ ದುಪ್ಪಟ್ಟಾಗಿದೆ.
ಇದೇ ನೋಂದಣಿಯ ದ್ವಿಚಕ್ರ ವಾಹನ ಸವಾರ ಕಳೆದ ವರ್ಷ 1,05,500 ರೂ. ದಂಡ ಪಾವತಿಸಿದ್ದ. ಈ ವರ್ಷ ಹೆಚ್ಚುವರಿಯಾಗಿ 56 ಸಾವಿರ ರೂ. ದಂಡ ತುಂಬಿದ್ದಾರೆ. ಒಮ್ಮೆ ದಂಡ ಪಾವತಿಸಿದರೆ ಸಂಚಾರಿ ನಿಯಮ ಪಾಲನೆಗೆ ಸವಾರರು ಮನಸ್ಸು ಮಾಡುತ್ತಾರೆ. ಆದರೆ, ಈತ ಮಾತ್ರ ದಂಡ ತೆತ್ತರೂ ನಿಯಮ ಉಲ್ಲಂಘನೆ ಮಾತ್ರ ನಿಲ್ಲಿಸಿಲ್ಲ. ಈತನ ವಿರುದ್ಧ ಸಂಚಾರಿ ಪೊಲೀಸರು ಇನ್ನೂ ಕ್ರಮ ಜರುಗಿಸದೇ ಇರುವುದು ಪ್ರಶ್ನೆಯಾಗಿ ಉಳಿದಿದೆ. ಜೊತೆಗೆ ಆರ್‌ಟಿಒ ಅಧಿಕಾರಿಗಳು ದ್ವಿಚಕ್ರ ವಾಹನವನ್ನು ಜಪ್ತಿ ಮಾಡದ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.