ಸರ್ಕಾರಿ ಆಸ್ಪತ್ರೆಗಳಲ್ಲಿ 14 ಸಾವಿರ ಖಾಲಿ ಹುದ್ದೆ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಆರೋಗ್ಯ ಇಲಾಖೆಯಲ್ಲಿ ಮಂಜೂರಾದ ಒಟ್ಟು 34,967 ಹುದ್ದೆಗಳ ಪೈಕಿ 14,523 ಹುದ್ದೆಗಳು ಖಾಲಿ ಉಳಿದಿದ್ದವು. ಸೋಮವಾರ ಅರ್ಜಿ ಕುರಿತ ವಾದ-ವಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತು.
ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳಿಗೆ ಸಂಬಂಧಿಸಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 14,523 ಹುದ್ದೆಗಳ ಭರ್ತಿಗೆ ಸಂಬಂಧಿಸಿ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.
ಆರೋಗ್ಯ ಇಲಾಖೆಯಲ್ಲಿ ಮಂಜೂರಾದ ಒಟ್ಟು 34,967 ಹುದ್ದೆಗಳ ಪೈಕಿ 14,523 ಹುದ್ದೆಗಳು ಖಾಲಿ ಉಳಿದಿದ್ದವು. ಸೋಮವಾರ ಅರ್ಜಿ ಕುರಿತ ವಾದ-ವಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತು.
ಪ್ರಕರಣದಲ್ಲಿ ಹೈಕೋರ್ಟ್‌ಗೆ ನೆರವು ನೀಡಲು ನಿಯೋಜನೆಗೊಂಡಿರುವ ವಕೀಲ ಶ್ರೀಧರ್‌ಪ್ರಭು ಅವರು, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲದೇ ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ನೀಡಿರುವ ಹೇಳಿಕೆಯಂತೆ ಒಟ್ಟು ಮಂಜೂರಾದ 34,967 ಹುದ್ದೆಗಳ ಪೈಕಿ 14,523 ಹುದ್ದೆ ಖಾಲಿ ಇವೆ. ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವುದರಿಂದ ತಕ್ಕಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ, ಕಡ್ಡಾಯ ಗ್ರಾಮೀಣ ಸೇವೆ ರದ್ದುಪಡಿಸಲಾಗಿದೆ. ಇದು ಸರ್ಕಾರದ ದ್ವಂದ್ವ ನೀತಿ ಆಗಿರಬಹುದು. ಖಾಲಿ ಹುದ್ದೆಗಳ ಭರ್ತಿ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಖಾಲಿ ಹುದ್ದೆಗಳ ಭರ್ತಿಗೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯಾಧಿಕಾರಿ, ತಜ್ಞರು, ದಂತ ವೈದ್ಯರು, ಲ್ಯಾಬ್ ಟೆಕ್ನೀಷಿಯನ್, ಫಾರ್ಮಸಿ/ ಶುಶ್ರೂಷಕರು ಹಾಗೂ ಡಿ ಗ್ರೂಪ್ ನೌಕರರ ಒಟ್ಟು 34,967 ಹುದ್ದೆಗಳ ಪೈಕಿ 20,444 ಹುದ್ದೆಗಳು ಭರ್ತಿಯಾಗಿವೆ. 14,523 ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ, ಸರ್ಕಾರಿ ಗುತ್ತಿಗೆ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ 16,501 ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಕಡ್ಡಾಯ ಸೇವೆಯಡಿ 2,371 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
204 ಜೂನಿಯರ್ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 413 ಹುದ್ದೆಗಳ ನೇಮಕಾತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. 498 ಫಾರ್ಮಸಿ ಅಧಿಕಾರಿಗಳ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜೊತೆಗೆ 705 ಹುದ್ದೆಗಳ ನೇಮಕಾತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಖಾಲಿ ಇರುವ 10,253 ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.75ರಷ್ಟು ಹುದ್ದೆಗಳ ನೇಮಕಾತಿಗೆ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ವರದಿ ಆಧಾರದ ಮೇಲೆ 2023 ನವೆಂಬರ್ ತಿಂಗಳಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಪ್ರಕರಣದ ಪರ ವಾದಿಸಲು ನ್ಯಾಯವಾದಿ ಶ್ರೀಧರ್ ಪ್ರಭು ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ಹೈಕೋರ್ಟ್ ನೇಮಿಸಿತ್ತು. ಅರ್ಜಿಯ ಸಂಬಂಧ ಹೈಕೋರ್ಟ್ ನ್ಯಾಯಪೀಠ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಈಗ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.