ರಾಜ್ಯದಲ್ಲಿ ಒಂದೇ ದಿನ ಪ್ರತ್ಯೇಕ ಅಪಘಾತಗಳಲ್ಲಿ 13 ಮಂದಿ ಸಾವು
x
ನೆಲಮಂಗಲದ ಸಮೀಪದ ಸಂಭವಿಸಿದ ಭೀಕರ ಅಪಘಾತದ ದೃಶ್ಯ

ರಾಜ್ಯದಲ್ಲಿ ಒಂದೇ ದಿನ ಪ್ರತ್ಯೇಕ ಅಪಘಾತಗಳಲ್ಲಿ 13 ಮಂದಿ ಸಾವು

ರಾಜ್ಯದ ವಿವಿಧೆಡೆ ಸಂಭವಿಸಿದ ಭೀಕರ ರಸ್ತೆ ಅಪಘಾತಗಳಲ್ಲಿ ವಿದ್ಯಾರ್ಥಿಗಳು, ಗೃಹಿಣಿಯರು, ಖಾಸಗಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ‌.


ಶನಿವಾರ ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ನೆಲಮಂಗಲ ಸಮೀಪ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4ರ ತಾಳೆಕೆರೆ ಬಳಿ ಕಂಟೇನರ್ ಲಾರಿಯೊಂದು ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ವಿಜಯಪುರ ಮೂಲದ ಒಂದೇ ಕುಟುಂಬದ ಆರು ಜನರು ಮೃತಪಟ್ಟಿದ್ದಾರೆ.

ಮೃತರನ್ನು ಚಂದ್ರಮ್ ಯಾಗಪ್ಪ ಗೋಳ (48), ಗೌರಾ ಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36) ಹಾಗೂ ಐರಾ (6) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಖಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚಂದ್ರಮ್ ಯಾಗಪ್ಪಗೋಳ ಅವರು ಕುಟುಂಬ ಸಮೇತರಾಗಿ ವಾರಾಂತ್ಯದ ನಿಮಿತ್ತ ಪ್ರವಾಸಕ್ಕೆ ತೆರಳುತ್ತಿದ್ದಾಗ ಈ ಅವಗಢ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡ ಕಂಟೇನರ್ ಚಾಲಕ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಬಿದ್ದಿದೆ.

ಪ್ರವಾಸಕ್ಕೆ ತೆರಳುತ್ತಿದ್ದವರು ಬಲಿ

ಮಂಡ್ಯದ ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಶನಿವಾರ ಬೆಳಿಗ್ಗೆ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬಂದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಮೃತರನ್ನು ಪ್ರಣವ್, ಆಕಾಶ್, ಆದರ್ಶ್ ಎಂದು ಗುರುತಿಸಲಾಗಿದೆ. ಪೃಥ್ವಿ ಎಂಬಾತ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ನಾಲ್ವರು ವಿದ್ಯಾರ್ಥಿಗಳು ಐಐಐಟಿ ಕಾಲೇಜು ವಿದ್ಯಾರ್ಥಿಗಳೆಂಬ ಮಾಹಿತಿ ತಿಳಿದುಬಂದಿದೆ.

ಅಪರಿಚಿತ ವಾಹನ ಡಿಕ್ಕಿ; ಇಬ್ಬರು ಸಾವು

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಮಹದೇಶ್ವರಪುರ ದೇವಾಲಯದ ಬಳಿ ಶನಿವಾರ ಮುಂಜಾನೆ ಅಪರಿಚಿತ ವಾಹನವೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನೀಲನಹಳ್ಳಿ ಗ್ರಾಮದ ಸಂಧ್ಯಾ(19), ಶಿಲ್ಪ (35) ಮೃತರು. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಶೈಲಜಾ ಎಂಬುವರು ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾರಿ ಡಿಕ್ಕಿ: ಮಹಿಳೆ ಸಾವು

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, 43 ವರ್ಷದ ಹುಸೇನಮ್ಮ ಮೃತಪಟ್ಟಿದ್ದಾರೆ.

ಕಾರು ಡಿಕ್ಕಿ: ಬೈಕ್‌ ಸವಾರ ಸಾವು

ವಿಜಯಪುರ ಜಿಲ್ಲೆಯ ಹೂವಿನಹಡಗಲಿ ಹೊರವಲಯದಲ್ಲಿ ಕಾರು-ಬೈಕ್ ನಡುವೆ ಡಿಕ್ಕಿಯಾಗಿದ್ದು, ಬೈಕ್ ಸವಾರ 47 ವರ್ಷದ ಉತ್ತಂಗಿ ಗ್ರಾಮದ ಬಸವರಾಜ್ ಮೃತಪಟ್ಟಿದ್ದಾರೆ.

Read More
Next Story